ಸೂಟಿಗಾಗಿ ಪೊಲೀಸರ ಸಂಘರ್ಷ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಕೆಳ ಹಂತದ ಸಿಬ್ಬಂದಿ ನಡುವಿನ ಸಂಘರ್ಷ ರಾಜಾನಕುಂಟೆ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಹತ್ಯೆಯಂತಹ ಘಟನೆಗಳಿಗೆ ಕಾರಣವಾಗುತ್ತಿದೆಯೇ?
ತನಗೆ ರಜೆ ನೀಡಿಲ್ಲ ಎನ್ನುವ ಕಾರಣಕ್ಕೆ .303 ಸರ್ವೀಸ್ ಬಂದೂಕಿನಿಂದ ಸಬ್ ಇನ್ಸ್ಪೆಕ್ಟರ್ನನ್ನು ಹತ್ಯೆಗೈದ ಘಟನೆ ಸಂಬಂಧ ಕನ್ನಡಪ್ರಭ ನೇರವಾಗಿ ಪೊಲೀಸ್ ಸಿಬ್ಬಂದಿಯನ್ನು ಮಾತನಾಡಿಸಿದಾಗ ಇಂತಹ ಅಭಿಪ್ರಾಯ ಕೇಳಿ ಬಂದಿದೆ.
"ಪೊಲೀಸ್ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿ ಎಂದರೆ 'ಅಸ್ಪೃಶ್ಯರು'!"
'ಪ್ರಸಕ್ತ ಸಮಾಜದಲ್ಲಿ ಅಸ್ಪೃಶ್ಯರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಪೊಲೀಸ್ ಇಲಾಖೆಯಲ್ಲಂತೂ ಖಂಡಿತ ಇದೆ. ಅದು ಜಾತಿ ಆಧಾರದ ಮೇಲೆ ಅಲ್ಲ. ಕರ್ತವ್ಯದ ಆಧಾರದ ಮೇಲೆ. ಅಸ್ಪೃಶ್ಯರೆಂದರೆ ಕೆಳ ಹಂತದ ಪೊಲೀಸ್ ಸಿಬ್ಬಂದಿ.' ಎನ್ನುವ ಅಭಿಪ್ರಾಯ ಪೊಲೀಸರದ್ದು. ಮೇಲಾಧಿಕಾರಿಗಳು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ನಮ್ಮ ಮೇಲೆ ವೃತ್ತಿಯೇತರ ವೈಯಕ್ತಿಕ ದ್ವೇಷ ಸಾಧಿಸುತ್ತಾರೆ. ಕರ್ತವ್ಯ ಸಂಬಂಧ ತೀವ್ರ ಒತ್ತಡ ಹಾಕುತ್ತಾರೆ. ಇಷ್ಟೆಲ್ಲದರ ನಡುವೆ 12 ರಿಂದ 15 ತಾಸು ಡ್ಯೂಟಿ. ಆದರೂ ರಜೆಗಾಗಿ 'ಬಂದೂಕು' ಖಂಡಿತಾ ಪರಿಹಾರವಲ್ಲ ಎಂಬುದು ಒಕ್ಕೊರೊಲ ಅಭಿಪ್ರಾಯ. ಪೊಲೀಸ್ ಸಿಬ್ಬಂದಿ (ಎಲ್ಲಾ ಕಡೆ ಇದೇ ರೀತಿ ಇಲ್ಲ) ತಮ್ಮ ಕರ್ತವ್ಯದ ಜತೆಗೆ ಪೊಲೀಸ್ ಅಧಿಕಾರಿಗಳ ವೈಯಕ್ತಿಕ ಕೆಲಸ ಮಾಡಬೇಕು. ಆದರೆ ನಮ್ಮ ಕೆಲಸ ಇದೆ ಎಂದಾಗ ಸ್ವಲ್ಪ ಸಮಯ ಬಿಡುವು ಕೊಡುವುದಿಲ್ಲ. ನಮ್ಮನ್ನು ಕೆಲಸಕ್ಕೆ ಇಟ್ಟುಕೊಂಡವರಂತೆ ವರ್ತಿಸುತ್ತಾರೆ. ಪದವಿ, ತಾಂತ್ರಿಕ ಪದವಿ, ಸ್ನಾತಕೋತ್ತರ ಪದವಿ ಹೀಗೆ ಹಲವು ಪದವಿಗಳನ್ನು ಪಡೆದು ಎಲ್ಲೂ ಕೆಲಸ ಸಿಗದೆ ಉಪಜೀವನಕ್ಕೆ ಅನಿವಾರ್ಯವಾಗಿ ಇಲಾಖೆಗೆ ಸೇರಿಕೊಳ್ಳುವವರ ಸಂಖ್ಯೆಯಲ್ಲಿ ಇತ್ತೀಚೆಗೆ ಹೆಚ್ಚಳವಾಗಿದೆ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.
ಇತ್ತೀಚೆಗೆ 'ಹೆಚ್ಚು' ವಿದ್ಯಾವಂತ ಯುವಕರು ಇಲಾಖೆಯಲ್ಲಿದ್ದಾರೆ. (ಪೇದೆಗೆ ಕನಿಷ್ಠ ಅರ್ಹತೆ ಪಿಯು)ಅಧಿಕಾರಿಗಳಷ್ಟೇ ಕೆಲಸದ ಸಾಮರ್ಥ್ಯವಿದ್ದರೂ ನಮ್ಮ ಆತ್ಮಗೌರವಕ್ಕೆ ಕುಂದುಂಟು ಮಾಡುತ್ತಾರೆ. ಸಾರ್ವಜನಿಕರ ಎದುರು, ಸಹೋದ್ಯೊಗಿಗಳ ನಡುವೆ, ಕೆಲವೊಮ್ಮೆ, ಕುಟುಂಬ ಸದಸ್ಯರ ಎದುರು ನಿಂದಿಸುತ್ತಾರೆ. ಹೀಗಾದಾಗ ವಿದ್ಯಾವಂತ ಪ್ರೌಢ ವ್ಯಕ್ತಿಯ ಆತ್ಮಗೌರವಕ್ಕೆ ಧಕ್ಕೆ ಬರುವುದಿಲ್ಲವೇ ನೀವೇ ಹೇಳಿ? ಆದರೂ ಪೇದೆಗಳು ತಮ್ಮ ಮೇಲಾಧಿಕಾರಿಗಳ ಮೇಲೆ ಕೈ ಮಾಡುವ, ಹೊಡೆದಾಟ ಮಾಡುವುದು ಖಂಡಿತಾ ಪರಿಹಾರವಲ್ಲ. ಅಂತಹ ಸ್ಥಿತಿಯಿದ್ದರೆ ಕೆಲಸಕ್ಕೆ ಗುಡ್ ಬೈ ಹೇಳಬಹುದು. ಬದುಕಲು ಸಾಕಷ್ಟು ದಾರಿಗಳಿವೆ ಎನ್ನುವ ಅಭಿಪ್ರಾಯ ಮತ್ತೊಬ್ಬ ಪೊಲೀಸ್ ಪೇದೆಯದ್ದು.
ಪೊಲೀಸ್ ಸಿಬ್ಬಂದಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಲು ತಮ್ಮ ಠಾಣೆ ಮೇಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎನ್ನುವ ಅಲಿಖಿತ ನಿಯಮ ಪಾಲನೆ ಇತ್ತೀಚೆಗೆ ಮಾಡುತ್ತಿದ್ದಾರೆ ಎನ್ನುವ ಅಂಶವನ್ನು ಪೊಲೀಸ್ ಪೇದೆಗಳು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೇದೆಗಳು ತಮ್ಮ ಸಂಕಷ್ಟಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎನ್ನುವ ಗೊಂದಲಕ್ಕೆ ಒಳಗಾಗುತ್ತಾರೆ. ಪೊಲೀಸ್ ಸಿಬ್ಬಂದಿ ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಪೂರ್ವ ನಿರ್ಧರಿತ ರಜೆಗಳನ್ನು ಪಡೆಯಲು ಕೇಳಿದಾಗ ಕೊಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಕೆಲವು ಪೊಲೀಸರು ಮೇಲಾಧಿಕಾರಿಗಳ ಮಾತನ್ನು ಧಿಕ್ಕರಿಸಿ ರಜೆ ಪಡೆಯುತ್ತಾರೆ. ರಜೆಯ ಕಾರಣಗಳು ಎಲ್ಲಾ ಸಂದರ್ಭಗಳಲ್ಲಿ ಒಂದೇ ಇರುವುದಿಲ್ಲ. ಕುಟುಂಬ ಸದಸ್ಯರಿಗೆ ಅನಾರೋಗ್ಯ ಉಂಟಾಗಿರುತ್ತಾದೆ. ಊರುಗಳಲ್ಲಿ ಮನೆ, ಹೊಲ ಸಂಬಂಧಿ ವ್ಯಾಜ್ಯಗಳು ಉಂಟಾಗಿ ಹೊಗಲೇಬೇಕಾದ ಅನಿವಾರ್ಯ ಸ್ಥಿತಿ ಉದ್ಭವಿಸಿರುತ್ತದೆ. ಇಂತಹ ಸಂದರ್ಭದಲ್ಲಿ ರಜೆ ಸಿಗದಿದ್ದಾಗ ಪೇದೆಗಳು ಖಿನ್ನರಾಗುತ್ತಾರೆ. ಅಲ್ಲದೇ ವೃತ್ತಿ ಹಾಗೂ ತಮ್ಮ ಮೇಲಾಧಿಕಾರಿಗಳ ಮೇಲೆ ಬೇಸರಗೊಳ್ಳುತ್ತಾರೆ. ಅದರ ಪರಿಣಾಮ ದೂರು ನೀಡಲು ಬರುವ ಸಾರ್ವಜನಿಕರ ಮೇಲೂ ಉಂಟಾಗುತ್ತದೆ.
ಎಸ್ಪಿಯನ್ನೇ ಕೊಂದಿದ್ದ ಸಬ್ಇನ್ಸ್ಪೆಕ್ಟರ್
ಇದು 70ರ ದಶಕದಲ್ಲಿ ನಡೆದ ಘಟನೆ. ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಚಲ್ಲಪೆರುಮಾಳ್ ಅವರು ಇನ್ಸ್ಪೆಕ್ಟರ್ ಬಳಿ ರಜೆ ಕೇಳಿದ್ದರು. ಆದರೆ ಇನ್ಸ್ಪೆಕ್ಟರ್ ರಜೆ ನಿರಾಕಸಿದ್ದರು. ಇನ್ಸ್ಪೆಕ್ಟರ್ ಮಾತು ಧಿಕ್ಕರಿಸಿದ ಪಿಎಸ್ಐ ರಜೆ ಮೇಲೆ ತೆರಳಿದ್ದರು. ಈ ಬಗ್ಗೆ ಇನ್ಸ್ಪೆಕ್ಟರ್ ಅವರು ಎಸ್ಪಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಇಬ್ಬರನ್ನು ಮಾತುಕತೆಗಾಗಿ ಎಸ್ಪಿ ಕರೆದಿದ್ದರು. ಆದರೆ ರಜೆಯಲ್ಲೂ ಸರ್ವಿಸ್ ರಿವಾಲ್ವಾರ್ ತಂದಿದ್ದ ಪಿಎಸ್ಐ, ಎಸ್ಪಿ ತನ್ನ ಮೇಲೆ ಕ್ರಮ ಕೈಗೊಳ್ಳಬಹುದು ಎಂದು ಸಿಟ್ಟಾಗಿ ಸರ್ವೀಸ್ ರಿವಾಲ್ವರ್ನಿಂದ ಗುಂಡಿಟ್ಟು ಎಸ್ಪಿಯವರನ್ನೇ ಹತ್ಯೆ ಮಾಡಿದ್ದ. ಆರೋಪಿ ಸಬ್ಇನ್ಸ್ಪೆಕ್ಟರ್ನನ್ನು ದಾವಣಗೆರೆಯಲ್ಲಿ ಬಂಧಿಸಲಾಗಿತ್ತು. ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.
-ಮಂಜುನಾಥ ನಾಗಲೀಕರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


