ಕ.ಪ್ರ.ವಾರ್ತೆ ಬೆಂಗಳೂರು ಜು. 28-
ಬೆಳಕಿನ ವೇಗದಲ್ಲಿ ಓಡುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಅದೇ ವೇಗದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಸಮುದಾಯ ಮುಂದಾಗಬೇಕಿದೆ ಎಂದು ಬಾಹ್ಯಾಕಾಶ ವಿಜ್ಞಾನಿ, ಪದ್ಮಭೂಷಣ ಡಾ.ಬಿ.ಎನ್. ಸುರೇಶ್ ಹೇಳಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಸಪ್ತರ್ಷಿ ಫೌಂಡೇಷನ್ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ಎಂಜಿನಿಯರಿಂಗ್ ಸೇರುವ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಮತ್ತು ತಮ್ಮ ಮುಂದಿರುವ ದಾರಿಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಎಂಜಿನಿಯರಿಂಗ್ ಕ್ಷೇತ್ರ ಬೆಳೆಯುವುದರ ಜತೆಗೆ ವೈಯಕ್ತಿಕವಾಗಿಯೂ ವಿದ್ಯಾರ್ಥಿಗಳು ಬೆಳೆಯಲು ಅವಕಾಶವಾಗುತ್ತದೆ ಎಂದರು.
ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಶಿಕ್ಷಣ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ಉನ್ನತಿಗೆ ಮಾತ್ರ ಬಳಕೆಯಾಗಬಾರದು. ಆದ್ದರಿಂದ ಉನ್ನತ ಶಿಕ್ಷಣ ಪಡೆದು ವಿದೇಶಕ್ಕೆ ಹೋಗುವ ಬದಲು ತಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ದೇಶದ ಅಭಿವೃದ್ಧಿಗೆ ಬಳಸಬೇಕು. ಜತೆಗೆ ದೇಶದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಸುಧಾರಿಸಲು ನೆರವಾಗಬೇಕು ಎಂದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ. ಬಿ.ಎನ್.ವಿ. ಸುಬ್ರಮಣ್ಯ ಮತ್ತಿತರರು ಭಾಗವಹಿಸಿದ್ದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಲ್ಲಾ ಸಮುದಾಯದ 170 ಮಂದಿಯನ್ನು ಪುರಸ್ಕರಿಸಲಾಯಿತು.