ಬೆಂಗಳೂರು ನಗರ

ವೇದದ ಮೌಲ್ಯಗಳು ಶಿಕ್ಷಣದಲ್ಲಿರಲಿ: ರಾಜ್ಯಪಾಲ

Published On :

ಬೆಂಗಳೂರು: ವೇದದ ಮೌಲ್ಯಗಳನ್ನು ಶಿಕ್ಷಣದಲ್ಲಿ ಅಳವಡಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಭಾರತೀಯ ವಿದ್ಯಾಭವನ ಎಂದು ರಾಜ್ಯಪಾಲ ಡಾ. ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ.
ಶ್ರೀರಾಮಪುರದಲ್ಲಿರುವ ಭಾರತೀಯ ವಿದ್ಯಾಭವನ- ಬಿಬಿಎಂಪಿ ಶಾಲೆಯಲ್ಲಿ ಸ್ಥಾಪಿಸಲಾದ 'ಭವನದ ಅಗಾಧಶಕ್ತಿಯ ಅಪೂರ್ವ ಚೇತನಗಳು' ಸ್ತಂಭವನ್ನು ಅವರು ಸೋಮವಾರ ಅನಾವರಣಗೊಳಿಸಿ ಮಾತನಾಡಿದರು.
ಭಾರತೀಯ ವಿದ್ಯಾಭವನದ ಸ್ಥಾಪಕ ಕೆ.ಎಂ.ಮುನ್ಷಿ ಅವರು ಭಾರತೀಯ ಪರಂಪರೆಯಲ್ಲಿರುವ ಎಲ್ಲ ಉತ್ತಮ ಸಂಗತಿಗಳನ್ನು ಸಂಸ್ಕೃತಿಯಲ್ಲಿ ಅಳವಡಿಸಬೇಕು ಎಂದು ಬಯಸಿದ್ದರು. ಜ್ಞಾನದ ಮೂಲಕ ಮಾತ್ರ ಸಮಾಜದಲ್ಲಿನ ಶೋಷಣೆ, ಬಡತನ ಇತ್ಯಾದಿಯನ್ನು ನಿವಾರಿಸಲು ಸಾಧ್ಯ ಎಂದು ಮುನ್ಷಿ ನಂಬಿದ್ದರು. ಹಾಗಾಗಿಯೇ ಭಾರತೀಯ ವಿದ್ಯಾಭವನದ ಮೂಲಕ ಶಿಕ್ಷಣದಲ್ಲಿ ವೇದದ ಮೌಲ್ಯಗಳನ್ನು ಅಳವಡಿಸಿ ಅವರು ಸಮಾಜ ಸೇವೆ ಆರಂಭಿಸಿದರು ಎಂದರು.
ಭಾರತ ಜಾತ್ಯತೀತ ರಾಷ್ಟ್ರ ಎನಿಸಿದ್ದರೂ ಜಾತೀಯತೆಯ ವಿವಾದ ಹಲವೆಡೆ ಇದೆ. ಹಾಗೇ ಮಹಿಳೆಗೆ ಸರಿಯಾದ ಗೌರವ ಸಿಗದ ಕಾರಣ ಪ್ರತಿನಿತ್ಯ ಮಹಿಳಾ ದೌರ್ಜನ್ಯದ ಸುದ್ದಿಗಳು ಕೇಳಿ ಬರುತ್ತಿವೆ. ಇಂತಹವು ನಿವಾರಣೆಯಾಗಿ ಸಮಾಜದಲ್ಲಿ ಸುಧಾರಣೆಯಾಗಬೇಕಿದ್ದರೆ ಭಾರತೀಯ ಸಂಸ್ಕೃತಿಯನ್ನು ಗೌರವಿಸಬೇಕಾದ್ದು ಅಗತ್ಯ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.
ಸ್ತಂಭದ ವಿಶೇಷ: ಭಾರತದ ಮೌಲ್ಯಾಧರಿತ ಹಾಗೂ ಆದರ್ಶ ವಿಚಾರಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಸ್ಥಾಪಿಸಲಾದ ಭಾರತೀಯ ವಿದ್ಯಾಭವನದ ಅಮೃತಮಹೋತ್ಸವ ಪ್ರಯುಕ್ತ ಭವನದ ಸ್ಥಾಪಕ ಕೆ.ಎಂ. ಮುನ್ಷಿ ಮತ್ತಿತರ ಸಾಧಕರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಸ್ತಂಭವನ್ನು ಸ್ಥಾಪಿಸಲಾಗಿದೆ.
ಸ್ಥಂಭವು 12 ಅಡಿ ಎತ್ತರವಿದ್ದು, 2.5 ಅಡಿ ಸುತ್ತಳತೆ ಹೊಂದಿದೆ. ಸ್ತಂಭದ ತುತ್ತತುದಿಯಲ್ಲಿ ಮಹಾತ್ಮ ಗಾಂಧೀಜಿಯ ಪ್ರತಿಮೆ ಅಳವಡಿಸಲಾಗಿದ್ದು, 2.5 ಅಡಿ ಎತ್ತರದ ತಳಹದಿ ಮೇಲೆ ಸ್ತಂಭ ಸ್ಥಾಪಿತವಾಗಿದೆ.
ಮಹಾತ್ಮ ಗಾಂಧೀಜಿ ಪ್ರತಿಮೆ ಕೆಳಗೆ ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ.ಕೆ.ಎಂ. ಮುನ್ಷಿ, ಡಾ.ಎಸ್. ರಾಧಾಕೃಷ್ಣನ್, ಡಾ. ರಾಜೇಂದ್ರಪ್ರಸಾದ್, ಸಿ.ರಾಜಗೋಪಾಲಾಚಾರಿ, ಪಂಡಿತ್ ಜವಹರಲಾಲ್ ನೆಹರು, ಡಾ.ಝಾಕೀರ್ ಹುಸೇನ್, ಡಾ.ಫಕ್ರುದ್ದೀನ್ ಅಲಿ ಅಹಮದ್, ಡಾ.ವಿ.ವಿ.ಗಿರಿ, ನೀಲಂ ಸಂಜೀವರೆಡ್ಡಿ, ಮೊರಾರ್ಜಿ ದೇಸಾಯಿ, ಜಯಪ್ರಕಾಶ್ ನಾರಾಯಣ್, ಆರ್.ವೆಂಕಟರಾಮನ್, ಎಸ್.ನಿಜಲಿಂಗಪ್ಪ, ಜೆ.ಆರ್.ಡಿ.ಟಾಟಾ, ಜಿ.ಡಿ.ಬಿರ್ಲಾ, ಡಾ.ಆರ್.ಆರ್.ದಿವಾಕರ್, ಮದರ್ ತೆರೆಸಾ, ಡಾ.ಎಂ.ಎಸ್.ಸುಬ್ಬುಲಕ್ಷ್ಮಿ, ಡಾ.ಕೆ.ಶಿವರಾಮ ಕಾರಂತ, ಎಸ್. ರಾಮಕೃಷ್ಣನ್ ಮತ್ತು ಸಿ.ಸುಬ್ರಹ್ಮಣ್ಯನ್ ಅವರ ಪ್ರತಿಮೆಗಳು ಸ್ತಂಭದ ಉದ್ದಕ್ಕೆ ಸುತ್ತಲೂ ಇವೆ. ಜತೆಗೆ ಈ ಸ್ತಂಭವನ್ನು ಎಲೆಕ್ಟ್ರಿಕ್ ಮೋಟಾರ್ ಮೂಲಕ ತಿರುಗುವಂತೆ ಮಾಡಲಾಗಿದೆ.
ಸ್ತಂಭದಲ್ಲಿನ ಪ್ರತಿಮೆಗಳ ಶಿಲ್ಪಿ ಕನಕಮೂರ್ತಿ ಹಾಗೂ ಅವರಿಗೆ ನೆರವಾದ ಕಲಾವಿದರಾದ ರವೀಶ್, ಮಹದೇವ, ಡಾರ್ವಿನ್, ಸತ್ಯನಾರಾಯಣ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಸಚಿವ ಸುರೇಶ್‌ಕುಮಾರ್, ಭಾರತೀಯ ವಿದ್ಯಾಭವನ- ಮುಂಬೈನ ಧರ್ಮದರ್ಶಿ ಐ.ಆರ್. ಖಾಂಡೆವಾಲ್, ಪಾಲಿಕೆ ಸದಸ್ಯೆ ಶಕೀಲಾ ಮುನಿರಾಜು, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್, ಕಾರ್ಯದರ್ಶಿ ಕೆ.ಜಿ. ರಾಘವನ್ ಅವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.