ಹತ್ತಿರ ಸುಳಿಯದ ಗಂಡ; ಸೊಸೆ ಸುತ್ತ ಸುತ್ತುವ ಮಾವ
ಕ.ಪ್ರ. ವಾರ್ತೆ ಬೆಂಗಳೂರು ಮಾ.25-
ಗಂಡನಿಗೆ 'ದೌರ್ಬಲ್ಯ'. ಆದರೆ ಮಾವನಿಗೆ ಇಳಿ ವಯಸ್ಸಿನಲ್ಲಿಯೂ ಕುಚೇಷ್ಟೆ...!
ಮದುವೆಯಾಗಿ ಹತ್ತು ತಿಂಗಳು ಕಳೆದರೂ ಸದಾ 'ದೂರ ಸರಿಯುವ' ಗಂಡ. ಆದರೆ ಮಾವನಿಗೆ ಯಾರೂ ಇಲ್ಲದ ಸಂದರ್ಭದಲ್ಲಿ ಸೊಸೆಯ ಸುತ್ತ ಸುಳಿಯುವ ದುರ್ಬುದ್ಧಿ. ಕೊನೆಗೂ ಈ ಕಾಟ ತಡೆಯಲಾರದ ಸೊಸೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾಳೆ.
ಆದರೆ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ, ಪತಿ ಮಹಾಶಯ, ಅತ್ತೆ, ಮಾವ ಹಾಗೂ ನಾದಿನಿ ತಲೆಮರೆಸಿಕೊಂಡಿದ್ದಾರೆ. ಆದರೆ ಇವರೆಲ್ಲರೂ ಕೊಟ್ಟ ಕಿರುಕುಳದಿಂದ ಬಸವಳಿದಿರುವ ಯುವತಿ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಘಟನೆ ವಿವರ: ದೂರಿನಲ್ಲಿ ದಾಖಲಾಗಿರುವ ಸಾರಾಂಶದ ಪ್ರಕಾರ ನಡೆದ ಘಟನೆ ಹೀಗಿದೆ. ಬೆಂಗಳೂರಿನ ಜಯನಗರ ಮೂಲದ ಅಂಬಿಕಾ (ಹೆಸರು ಬದಲಿಸಿದೆ) ಎಂಬುವರನ್ನು ನವೆಂಬರ್ 2012ರಂದು ಅಯೋಧ್ಯಾ ಕಲ್ಯಾಣ ಮಂಟಪದಲ್ಲಿ ಶ್ರೀನಿವಾಸ್ (32) ಎಂಬುವರ ಜತೆ ವಿವಾಹ ಮಾಡಿಕೊಡಲಾಗಿತ್ತು. ಈತನ ತಾಯಿ ಸುನಂದಾ ಮಾದನಾಯಕನಹಳ್ಳಿ ವಿಭಾಗದ ಉಪತಹಶೀಲ್ದಾರ್ರಾಗಿದ್ದು, ತಂದೆ ಕೃಷ್ಣಮೂರ್ತಿ ನಿವೃತ್ತ ಸರ್ಕಾರಿ ನೌಕರರು.
ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಶ್ರೀನಿವಾಸನ ನಿಜಬಣ್ಣ ಬಯಲಾಯ್ತು. ಮಧುಚಂದ್ರಕ್ಕಾಗಿ ಕುಲು ಮನಾಲಿಗೆ ಹೋದರೂ ಪತ್ನಿಯಿಂದ ದೂರವೇ ಇರುತ್ತಿದ್ದ ಶ್ರೀನಿವಾಸ್ ಪತ್ನಿಯ ಜತೆ ದೈಹಿಕ ಸಂಪರ್ಕ ನಡೆಸಿರಲಿಲ್ಲ. ಇದರಿಂದ ಬೇಸತ್ತ ಅಂಬಿಕಾ ಮನೆಗೆ ಬಂದು ಅತ್ತೆಗೆ ವಿಚಾರ ತಿಳಿಸಿದಾಗ, ಇದು ನಾಲ್ಕು ಗೋಡೆ ಮಧ್ಯೆ ಇರುವ ವಿಚಾರ ಬೇರೆಡೆ ಚರ್ಚಿಸಬೇಡ ಎಂದು ಸಲಹೆ ನೀಡಿದ್ದರು.
ಆದರೆ ಈ ಬಗ್ಗೆ ಚಿಕಿತ್ಸೆ ಪಡೆಯುವುದಕ್ಕೂ ಶ್ರೀನಿವಾಸ್ ನಿರಾಕರಿಸುತ್ತಿದ್ದ. ಈ ಮಧ್ಯೆ ಅತ್ತೆ ಸುನಂದಾ ಹಾಗೂ ಮಾವನಿಂದ ವರದಕ್ಷಿಣೆ ಕಿರುಕುಳವೂ ಆರಂಭವಾಯಿತು. ಉದ್ಯೋಗವಿಲ್ಲದ ಮಗ ಶಾಲೆಗಳಿಗೆ ಸಮವಸ್ತ್ರ ಪೂರೈಕೆ ಉದ್ಯಮ ಆರಂಭಿಸುತ್ತಾನೆ. ವಿವಾಹ ಸಂದರ್ಭದಲ್ಲಿ ನಿಮ್ಮ ಮನೆಯವರು ವರದಕ್ಷಿಣೆ ನೀಡಿಲ್ಲ. ಹೀಗಾಗಿ 10 ಲಕ್ಷ ತರುವಂತೆ ಪೀಡಿಸಲಾರಂಭಿಸಿದರು. ಇದಕ್ಕೆ ಅಂಬಿಕಾ ಸೊಪ್ಪು ಹಾಕದಿದ್ದಾಗ ನಿತ್ಯ ಕಿರುಕುಳ ಶುರುವಾಯಿತು.
ತಾನು ಸರ್ಕಾರಿ ನೌಕರಳಾಗಿರುವುದರಿಂದ ಯಾರೂ ನಿನ್ನ ಸಹಾಯಕ್ಕೆ ಬರುವುದಿಲ್ಲ ಎಂದು ಅತ್ತೆ ಸುನಂದಾ ಬೆದರಿಸುತ್ತಿದ್ದರು. ಅನಿವಾರ್ಯವಾಗಿ ಅಂಬಿಕಾ ತವರು ಮನೆಯಿಂದ ಐದು ಲಕ್ಷ ರು.ಗಳನ್ನು ವರದಕ್ಷಿಣೆ ರೂಪದಲ್ಲಿ ತಂದು ಕೊಟ್ಟಿದ್ದರು.
ಆದರೆ ಇದಾದ ನಂತರವೂ ಕಿರುಕುಳ ತಪ್ಪಲಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಸಬೂಬು ಹೇಳಿ, ಜಗಳ ತೆಗೆದು ಶ್ರೀನಿವಾಸ್ ಪತ್ನಿಯಿಂದ ದೂರ ಇರುತ್ತಿದ್ದರೆ, ಮಾವ ಕೃಷ್ಣಮೂರ್ತಿ ಅವರ ಕೀಟಲೆ ಮೇರೆ ಮೀರಿತ್ತು. ಸಮವಸ್ತ್ರಗಳ ಆರ್ಡರ್ ತರಲು ಶಾಲೆಗಳಿಗೆ ಹೋಗುವ ಸಂದರ್ಭದಲ್ಲಿ ಅಂಬಿಕಾ ದ್ವಿಚಕ್ರ ವಾಹನ ಓಡಿಸುತ್ತಿದ್ದರೆ, ಹಿಂದೆ ಕುಳಿತ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಮಾತ್ರವಲ್ಲ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲೂ ಇಂಥ ಕುಚೇಷ್ಟೇ ನಡೆಸುತ್ತಿದ್ದರು. ಈ ವಿಚಾರವನ್ನು ಪತಿಯ ಬಳಿ ಹೇಳಿದಾಗ ಆತ ತಂದೆಯನ್ನು ವಿರೋಧಿಸುವ ಬದಲು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ.
ಕೊನೆಗೊಂದು ದಿನ ತಾನು ರವಿಶಂಕರ ಗುರೂಜಿ ಆಶ್ರಮ ಸೇರುತ್ತೇನೆ ಎಂದು ತಾಯಿ ಸುನಂದ, ತಂದೆ ಕೃಷ್ಣಮೂರ್ತಿ ಹಾಗೂ ಸೋದರಿಯ ಜತೆ ಶ್ರೀನಿವಾಸ್ ತಲೆಮರೆಸಿಕೊಂಡ. ಆದರೆ ಹೋಗುವುದಕ್ಕೆ ಮುನ್ನ ಅಂಬಿಕಾಗೆ ಒದ್ದು ಗಾಯಗೊಳಿಸಿ ಪರಾರಿಯಾಗಿದ್ದಾನೆ.
ಈ ಹಿನ್ನೆಲೆಯಲ್ಲಿ ಅಂಬಿಕಾ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

