ಆತಂಕ ಸೃಷ್ಟಿಸಿದ ಸೂಟ್ಕೇಸ್
ಕ.ಪ್ರ. ವಾರ್ತೆ ಬೆಂಗಳೂರು ಮಾ.26--
ಮಲ್ಲೇಶ್ವರದ ಸಂಪಿಗೆ ರಸ್ತೆಯ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಸಂಜೆ ಜನದಟ್ಟಣೆ. ಭಯದ ವಾತಾವರಣ, ಯಾವಾಗ ಏನಾಗುವುದೋ ಎಂಬ ದುಗುಡ.
ಐದೇ ನಿಮಿಷದಲ್ಲಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಅಲ್ಲಿಗೆ ದೌಡಾಯಿಸಿದರು. ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು, ಸ್ಥಳದಲ್ಲಿ ಪತ್ತೆಯಾದ ಸೂಟ್ಕೇಸ್.
ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಮರಳಿನ ರಾಶಿ ಮೇಲೆ ಸೂಟ್ಕೇಸ್ ಪತ್ತೆಯಾಗಿತ್ತು. ಅದನ್ನು ಕಂಡು ಹೆದರಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಶ್ವಾನದಳ, ಬಾಂಬ್ ನಿಷ್ಕ್ರಿಯದಳ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಈ ವೇಳೆ ಸಂಪಿಗೆ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಸೂಟ್ಕೇಸ್ ಸುತ್ತ ಮರಳಿನ ಮೂಟೆಗಳನ್ನು ಇಟ್ಟು ಪರಿಶೀಲಿಸಿ ನಂತರ ಸೂಟ್ಕೇಸ್ ಮುಚ್ಚಳ ತೆರೆಯಲಾಯಿತು. ಅದರಲ್ಲಿದ್ದ ಬಟ್ಟೆ ತುಂಡುಗಳು, ಕಡತಗಳು ಹಾಗೂ ದಾಖಲೆಗಳನ್ನು ಕಂಡು ಪೊಲೀಸರು ನಿಟ್ಟುಸಿರು ಬಿಟ್ಟರು. ಪೊಲೀಸರು ಸೂಟ್ಕೇಸ್ ವಶಕ್ಕೆ ತೆಗೆದುಕೊಂಡು ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಬಿಬಿಎಂಪಿ ಕಚೇರಿಗೆ ಸಾಕಷ್ಟು ಜನ ಬಂದು ಹೋಗುತ್ತಿರುತ್ತಾರೆ. ಅವರಲ್ಲಿ ಯಾರೋ ಈ ಸೂಟ್ಕೇಸ್ ಬಿಟ್ಟುಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಸೂಟ್ಕೇಸ್ನಲ್ಲಿ ಪತ್ತೆಯಾದ ಚೆಕ್ಪುಸ್ತಕದಲ್ಲಿ ಸಿಕ್ಕಿದ ನಂಬರ್ಗೆ ಪೊಲೀಸರು ಕರೆ ಮಾಡಿದಾಗ ಅವೆನ್ಯೂ ರಸ್ತೆಯಲ್ಲಿನ ರೇಮಂಡ್ಸ್ ಬಟ್ಟೆ ಅಂಗಡಿ ಮಾಲೀಕ ರಾಜೇಶ್ ಅವರು ಕರೆ ಸ್ವೀಕರಿಸಿದರು. ಅವರಿಗೆ ವಿಷಯ ತಿಳಿಸಿದಾಗ ಬಂದು ಸೂಟ್ಕೇಸ್ ತೆಗೆದುಕೊಂಡು ಹೋದರು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೆಲಸನಿಮಿತ್ತ ಬಿಬಿಎಂಪಿ ಕಚೇರಿ ಬಳಿ ಹೋಗಿದ್ದರು. ಆಗ ಸ್ನೇಹಿತರೊಂದಿಗೆ ಮಾತನಾಡುತ್ತ ಅಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದ ದ್ವಿಚಕ್ರ ವಾಹನವೊಂದರ ಮೇಲೆ ಸೂಟ್ಕೇಸ್ ಇಟ್ಟಿದ್ದರು. ನಂತರ ಮರೆತು ಹೋಗಿದ್ದಾರೆ.
ಅದನ್ನು ಗಮನಿಸಿದ ಬೈಕ್ ಮಾಲೀಕ ಹೆದರಿ ಸೂಟ್ಕೇಸ್ ಪಕ್ಕಕ್ಕೆ ಎಸೆದು, ಕೆಲಹೊತ್ತು ಕಾದರು. ಯಾರೂ ಅದನ್ನು ತೆಗೆದುಕೊಂಡು ಹೋಗದಿದ್ದಾಗ ಪೊಲೀಸರಿಗೆ ಕರೆ ಮಾಡಿದರು. ಆದ್ದರಿಂದ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿತ್ತು ಎನ್ನುತ್ತಾರೆ ಪೊಲೀಸರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

