ನಗರಕ್ಕೆ ಬರುತ್ತಿದ್ದಾರೆ ಮನೆ ಬಿಟ್ಟ ಮಕ್ಕಳು
ಬೆಂಗಳೂರು: ಮನೆಬಿಟ್ಟು ಸಿಲಿಕಾನ್ ಸಿಟಿಯತ್ತ ಮುಖಮಾಡುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಮೂರು ತಿಂಗಳಲ್ಲಿ ನಗರಕ್ಕೆ ಬರುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಶೇ.15-20ರಷ್ಟು ಏರಿಕೆಯಾಗಿದೆ.
ಇವರಲ್ಲಿ ಬಹುತೇಕ ಮಕ್ಕಳು ಪರೀಕ್ಷೆಗೆ ಹಾಗೂ ಪೋಷಕರ ಒತ್ತಡಕ್ಕೆ ಹೆದರಿ ಬಂದವರು. ಉತ್ತರ ಕರ್ನಾಟಕದ ಮಕ್ಕಳದ್ದು ಮೇಲುಗೈ. ಕೋಲಾರ, ದೊಡ್ಡಬಳ್ಳಾಪುರದ ಮಕ್ಕಳೂ ಇದ್ದಾರೆ. ಹೊರರಾಜ್ಯದ ಮಕ್ಕಳು ಕೂಲಿಗಾಗಿ ಬರುವುದು ಸಾಮಾನ್ಯ. ಆದ್ದರಿಂದ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುವ ಮುನ್ನ ಸ್ವಲ್ಪ ಎಚ್ಚರವಹಿಸಿ. ಇಲ್ಲವಾದಲ್ಲಿ ನಿಮ್ಮ ಮಕ್ಕಳು ಕೈತಪ್ಪಿ ಹೋದಾರು.
ಈಗಾಗಲೇ ಅಂತಹ ನೂರಾರು ಮಕ್ಕಳನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಆದ್ದರಿಂದ ಪ್ರತಿಮಗುವಿನ ಆಸಕ್ತಿ ಹಾಗೂ ಬುದ್ಧಿಶಕ್ತಿ ಅರಿತು ವರ್ತಿಸಬೇಕಾದುದು ಪೋಷಕರ ಕರ್ತವ್ಯ.
ಮನೆಬಿಟ್ಟು ಸಿಟಿಯತ್ತ ಮುಖ ಮಾಡುತ್ತಿರುವ ಇಂತಹ ಮಕ್ಕಳನ್ನು ಗುರುತಿಸಿ ಅವರನ್ನು ಪೋಷಕರ ಕೈಸೇರಿಸುವ ಕೆಲಸವನ್ನು ನಗರದ ಸಂಘಸಂಸ್ಥೆಗಳು ಮಾಡುತ್ತಿವೆ.
ಮಕ್ಕಳ ಕಾವಲು ಪಡೆ: ಮನೆಬಿಟ್ಟು ಬರುವ ಮಕ್ಕಳು ಹೆಚ್ಚಾಗಿ ರೈಲನ್ನು ಆಶ್ರಯಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ರೈಲು ಮಾತ್ರವಲ್ಲ ಬಸ್‌ನಲ್ಲಿಯೂ ಬರುತ್ತಾರೆ. ಅದಕ್ಕಾಗಿ ಪ್ರತಿ ರೈಲು ನಿಲ್ದಾಣ, ಮಾರುಕಟ್ಟೆ, ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಮಕ್ಕಳ ಕಾವಲು ಪಡೆ ನಿಯೋಜಿಸಲಾಗಿದೆ.
ಕಾವಲುಪಡೆಯ ಸಿಬ್ಬಂದಿ ಸಂಜೆಯವರೆಗೂ ನಿಲ್ದಾಣಗಳಲ್ಲಿ ಕಣ್ಣಿಟ್ಟಿರುತ್ತಾರೆ. ಶಾಲಾಮಕ್ಕಳು, ಪೋಷಕರಿಲ್ಲದೆ ತಿರುಗಾಡುವವರು, ಒಂಟಿ ಮಕ್ಕಳನ್ನು ಗುರುತಿಸುತ್ತಾರೆ. ಅವರು ಒಬ್ಬರೇ ನಿಲ್ದಾಣದಲ್ಲಿದ್ದಾರೆ ವಿಚಾರಣೆ ನಡೆಸುತ್ತಾರೆ.
ಗಂಡು ಮಕ್ಕಳೇ ಹೆಚ್ಚು: ಮನೆಬಿಟ್ಟು ಬರುವವರಲ್ಲಿ ಗಂಡು ಮಕ್ಕಳೇ ಹೆಚ್ಚು. ಹೆಣ್ಣುಮಕ್ಕಳು ಮನೆಬಿಟ್ಟು ಬರಲು ಹೆಚ್ಚು ಧೈರ್ಯ ಮಾಡುವುದಿಲ್ಲ. ಒಂದು ವೇಳೆ ಮನೆಯಲ್ಲಿ ಹಿರಿಯರು ನಿಂದಿಸಿದರೂ ಕೋಪಿಸಿಕೊಂಡು ಮನೆಬಿಟ್ಟು ಬರುತ್ತಾರೆ. ಅಲ್ಲದೆ ಸ್ನೇಹಿತರ ಸಹವಾಸ ಮಾಡಿ ಕುಚೇಷ್ಟೆ ಮಾಡುವುದು ಹೆಚ್ಚು. ಹಾಗಾಗಿ ಗಂಡು ಮಕ್ಕಳ ಸಂಖ್ಯೆ ಹೆಚ್ಚಿದೆ.
ಈ ಹಿಂದೆ ಹಾಗೂ ಪ್ರಸಕ್ತ ವರ್ಷದಲ್ಲಿ ನಗರಕ್ಕೆ ಬಂದಿರುವ ಮಕ್ಕಳನ್ನು ಹೋಲಿಸಿದರೆ ಗಂಡು ಮಕ್ಕಳ ಸಂಖ್ಯೆ ಅತಿಹೆಚ್ಚು ಇದಕ್ಕೆ ಅಂಕಿ ಅಂಶಗಳೇ ಸಾಕ್ಷಿ. 12ರಿಂದ 18 ವಯಸ್ಸಿನ ಮಕ್ಕಳೇ ಹೆಚ್ಚಿದ್ದಾರೆ.
ಮಕ್ಕಳು ಬರುವುದೇಕೆ: ಪರೀಕ್ಷೆ ಚೆನ್ನಾಗಿ ಬರೆದು ಉಜ್ವಲ ಭವಿಷ್ಯ ತಮ್ಮದಾಗಿಸಿಕೊಳ್ಳಲಿ ಎಂಬ ಉದ್ದೇಶದಿಂದ ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಅದನ್ನು ಅರಿಯದ ಮಕ್ಕಳು ಮನೆಬಿಟ್ಟುಬರುತ್ತಾರೆ.
ಫಲಿತಾಂಶಕ್ಕೆ ಹೆದರಿ ಬರುವವರೂ ಇದ್ದಾರೆ. ಇನ್ನು ಕೆಲವು ಮಕ್ಕಳು ನಗರವನ್ನು ನೋಡುವ ಆಸೆಯಿಂದ ಸ್ನೇಹಿತರೊಂದಿಗೆ ಸೇರಿ ಬೆಂಗಳೂರಿಗೆ ಬರುತ್ತಾರೆ. ಪರೀಕ್ಷಾ ಕಾಲ, ರಜೆಯಲ್ಲಿ ಹೆಚ್ಚು.
ಮಕ್ಕಳ ಸಾಗಾಣೆ ಮಾಡುವ ಮಧ್ಯವರ್ತಿಗಳು ಮಕ್ಕಳನ್ನು ನಂಬಿಸಿ, ಪುಸಲಾಯಿಸಿ ಬೆಂಗಳೂರಿಗೆ ಕರೆದುಕೊಂಡು ಬರುತ್ತಾರೆ. ಅಂತಹ ಮಕ್ಕಳ ಬಗ್ಗೆ ಮಾಹಿತಿ ಇದ್ದರೆ ಸಿಕ್ಕಿಬೀಳುತ್ತಾರೆ. ಇಲ್ಲವಾದಲ್ಲಿ ಅವರನ್ನು ಹೊರರಾಜ್ಯಗಳಿಗೆ ಹಣಕ್ಕಾಗಿ ಮಾರುವ ಗುಂಪು ನಗರದಲ್ಲೇನು ಕಡಿಮೆ ಇಲ್ಲ. ಆದ್ದರಿಂದ ಪೋಷಕರು ಮಕ್ಕಳ ಬಗ್ಗೆ ಎಚ್ಚರವಹಿಸಬೇಕು ಎಂಬುದು ಸಂಘಸಂಸ್ಥೆಗಳ ಮನವಿ. ಬಾಸ್ಕೋ ಹಾಗೂ ಸಾಥಿ ಸಂಘಸಂಸ್ಥೆಗಳ ಸದಸ್ಯರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

