ಬೆಂಗಳೂರು ನಗರ

ರೈತರಿಗೆ ಹೆಚ್ಚುವರಿ ಪರಿಹಾರಕ್ಕೆ ಆದೇಶ

Published On :

ಬೆಂಗಳೂರು: ಕಾರ್ಖಾನೆ ಸ್ಥಾಪನೆಗಾಗಿ ಭೂಮಿ ಕಳೆದುಕೊಂಡ 22 ರೈತರಿಗೆ ಪ್ರತಿ ಎಕರೆಗೆ ರು. 25 ಸಾವಿರ ಹೆಚ್ಚುವರಿ ಪರಿಹಾರ ಹಣವನ್ನು ಶೇ.15ರ ಬಡ್ಡಿ ಸಹಿತ ನೀಡುವಂತೆ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ)ಗೆ ಹೈಕೋರ್ಟ್ ಆದೇಶಿಸಿದೆ.
ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಕಾಮಗೆರೆ ಹಾಗೂ ಮಾದಹಳ್ಳಿಯಲ್ಲಿ ಭೂರ್ಮಿ ವಶಪಡಿಸಿಕೊಂಡು ಪೂರ್ಣ ಪ್ರಮಾಣದ ಪರಿಹಾರ ನೀಡದ ಕೆಐಎಡಿಬಿಗೆ ನ್ಯಾ.ಕೆ.ಎಲ್.ಮಂಜುನಾಥ್ ಹಾಗೂ ನ್ಯಾ.ರವಿ ಮಳಿಮಠ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.  ಇದರಿಂದ ರೈತರಿಗೆ ಕೆಐಎಡಿಬಿ ನಿಗದಿಪಡಿಸಿರುವ ಪ್ರತಿ ಎಕರೆಗೆ ರು. 4ರಿಂದ ರು. 6 ಲಕ್ಷ ಪರಿಹಾರದ ಜೊತೆಗೆ, ಹೆಚ್ಚುವರಿಯಾಗಿ ರು. 25 ಸಾವಿರ ಹಾಗೂ 2011ರಿಂದ ಅನ್ವಯವಾಗುವಂತೆ ಶೇ.15ರಷ್ಟು ಬಡ್ಡಿ ದರವನ್ನು ಕೂಡ ವಿತರಿಸುವಂತೆ ಆದೇಶಿಸಿದೆ.
ಪ್ರಕರಣವೇನು?: ಮೈಸೂರಿನ ನಂಜನಗೂಡಿನ 500 ಎಕರೆ ಜಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ಅಲ್ಲಿ ಸೂಕ್ತ ಭೂಮಿ ದೊರೆಯದ ಹಿನ್ನೆಲೆಯಲ್ಲಿ ಕೊಳ್ಳೆಗಾಲದ ಕಾಮಗೆರೆ ಹಾಗೂ ಮಾದಹಳ್ಳಿಯಲ್ಲಿ 400 ಎಕರೆ ಕೃಷಿ ಭೂಮಿಯನ್ನು ಕೆಐಎಡಿಬಿ ಗುರುತಿಸಿತ್ತು. ಇದಕ್ಕಾಗಿ ವಶಪಡಿಸಿಕೊಂಡ ಭೂಮಿಯ ಮಾಲೀಕರಿಗೆ ಕೆಐಎಡಿಬಿ ಶೇ.50ರಷ್ಟು ಪರಿಹಾರವನ್ನು ಮಾತ್ರ ವಿತರಿಸಿತ್ತು. ಕಾರ್ಖಾನೆಗಾಗಿ ವಶಪಡಿಸಿಕೊಂಡ ಚಾಮರಾಜನಗರದ ಬಿಳಿಗಿರಿ ರಂಗನಬೆಟ್ಟಿ ಹುಲಿ ಮೀಸಲು ಅರಣ್ಯ ಪ್ರದೇಶದೊಳಗಿತ್ತು.  ಈ ನಡುವೆ, ಜೀವವೈವಿದ್ಯ ತಾಣಗಳಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಸಕ್ಕರೆ ಕಾರ್ಖಾನೆ ಸ್ಥಾಪನೆ ಉದ್ದೇಶದಿಂದ ಸಂಸ್ಥೆಗಳು ಹಿಂದೆ ಸರಿದಿದ್ದವು. ಪ್ರಸ್ತಾವನೆ  ನೆನೆಗುದಿಗೆ ಬಿದ್ದಿತ್ತು. ಆದರೆ, ಕೆಐಎಡಿಬಿ ರೈತರಿಗೆ ಪೂರ್ಣ ಪರಿಹಾರ ವಿತರಿಸಲಿಲ್ಲ. ಭೂಮಿಯನ್ನು ಕೂಡ ಹಿಂದಿರುಗಿಸಲಿಲ್ಲ. ಇದನ್ನು ಪ್ರಶ್ನಿಸಿ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಮಗುವಿನೊಂದಿಗೆ ಭಿಕ್ಷೆ; ಮಹಿಳೆ ವಶಕ್ಕೆ
ಐದು ತಿಂಗಳ ಮಗುವನ್ನು ಇಟ್ಟುಕೊಂಡು ಭಿಕ್ಷೆ ಬೇಡುತ್ತಿದ್ದ  ಮಹಿಳೆಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಎಚ್‌ಎಎಲ್ ಠಾಣೆ ಪೊಲೀಸರು ಮಹಿಳೆಯನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಆಕೆಯನ್ನು ಭಿಕ್ಷುಕರ ಕಾಲೋನಿಗೆ ಕಳುಹಿಸಲು ಹಾಗೂ ಮಗುವನ್ನು ಶಿಶುವಿಹಾರದಲ್ಲಿ ಇಡಲು ನಿರ್ಧರಿಸಿದರು.  ಮಗುವಿನ ವಯಸ್ಸು ಕಡಿಮೆ ಇದ್ದ ಕಾರಣ ಹಾಗೂ ತಾಯಿಯೊಂದಿಗೆ ಮಗು ಇರಬೇಕು ಎಂಬ ಉದ್ದೇಶದಿಂದ ಆಕೆಯನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ. ಗುರುವಾರ ನಡೆಯುವ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮಗುವಿನೊಂದಿಗೆ ಹಾಜರಾಗುವಂತೆ ಆಕೆಗೆ ಸೂಚಿಸಲಾಗಿದೆ. ಒಂದು ವೇಳೆ ಆಕೆ ಹಾಜರಾಗದಿದ್ದಲ್ಲಿ ಪೊಲೀಸ್ ವಶಕ್ಕೆ ತೆಗೆದುಕೊಂಡು ಹಾಜರುಪಡಿಸುವಂತೆ ಸಮಿತಿ ಸೂಚಿಸಿದೆ.

ಶಸ್ತ್ರಾಸ್ತ್ರ ಠೇವಣಿಗೆ ಸೂಚನೆ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಶಸ್ತ್ರಾಸ್ತ್ರ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಪರವಾನಗಿ ಇರುವವರು ಸಂಬಂಧಪಟ್ಟ ಠಾಣೆಯಲ್ಲಿ ಶಸ್ತ್ರಾಸ್ತ್ರ ಠೇವಣಿ ಇಡುವಂತೆ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಸೂಚಿಸಿದ್ದಾರೆ. ಮೇ 11ರವರೆಗೆ ಈ ನಿಷೆಧಾಜ್ಞೆ ಜಾರಿಯಲ್ಲಿರುತ್ತದೆ. ಆದ್ದರಿಂದ ಶಸ್ತ್ರಾಸ್ತ್ರ ಇರುವವರು ಠಾಣೆಯಲ್ಲಿ ಇಡುವಂತೆ ಒಂದು ವೇಳೆ ಶಸ್ತ್ರಾಸ್ತ್ರ ಒಯ್ಯುವುದು ಕಂಡುಬಂದರೆ ಅಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.