ಬೆಂಗಳೂರು ನಗರ

ಶ್ರವಣ ಸಾಧನ ಬಳಕೆಗೆ ಮುಜುಗರ ಬೇಡವೇ ಬೇಡ: ಕ್ರಿಕೆಟಿಗ ಕಿರ್ಮಾನಿ

Published On :

ಕ.ಪ್ರ.ವಾರ್ತೆ ಬೆಂಗಳೂರು ಮಾ.26-
'ನಾನೂ ಶ್ರವಣಸಾಧನ ಬಳಸುತ್ತಿದ್ದೇನೆ. ಶ್ರವಣದೋಷ ಇರುವವರು ಶ್ರವಣಸಾಧನ ಬಳಸಲು ಮುಜುಗರಪಡುವ ಅಗತ್ಯವಿಲ್ಲ. ಕನ್ನಡಕದಂತೆ ಅದೂ ಕೂಡ ಒಂದು ಸಾಧನ. ಅದನ್ನು ಯಾವುದೇ ಮುಜುಗರವಿಲ್ಲದೆ ಬಳಸಿ...
ಹೀಗೆಂದು ವಾಕ್ ಮತ್ತು ಶ್ರವಣದೋಷ ಇರುವವರನ್ನು ಹುರಿದುಂಬಿಸಿದವರು ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ. ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆ ಹತ್ತು ಮಂದಿಗೆ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಿದ ಪ್ರಯುಕ್ತ ಮಂಗಳವಾರ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಪೋಷಕರೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಬಹುತೇಕ ಮಂದಿ ಶ್ರವಣದೋಷ ಇರುವವರು ಶ್ರವಣಸಾಧನ ಬಳಸಲು ಮುಜುಗರ ಪಡುತ್ತಾರೆ. ತಾವು ಕೂಡ ಒಮ್ಮೆ ಶ್ರವಣದೋಷಕ್ಕೆ ಈಡಾಗಿದ್ದು, ಆ ಬಳಿಕದಿಂದ ನಿರಂತರವಾಗಿ ಶ್ರವಣಸಾಧನ ಬಳಸುತ್ತಿರುವುದಾಗಿ ಹೇಳಿದರು. ಆಸ್ಪತ್ರೆ ನಿರ್ದೇಶಕ ಡಾ.ಪಿ. ಡೇವಿಡ್‌ಸನ್ ಮಾತನಾಡಿ, ಭಾರತದಲ್ಲಿ ಜನಿಸುವ 15 ದಶಲಕ್ಷ ಮಕ್ಕಳಲ್ಲಿ ಪ್ರತಿವರ್ಷ ಶ್ರವಣದೋಷವುಳ್ಳ ಸುಮಾರು 15 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿ ಸಾವಿರ ಮಕ್ಕಳಲ್ಲಿ ಒಂದು ಮಗು ತೀವ್ರತರವಾದ ಶ್ರವಣದೋಷದಿಂದ ಬಳಲುತ್ತಿರುವ ಸಾಧ್ಯತೆಯಿರುತ್ತದೆ. ಇಂಥ ಸಮಸ್ಯೆ ಇರುವವರಿಗೆ ಕೋಕ್ಲಿಯರ್ ಇಂಪ್ಲಾಂಟ್ ಪರಿಣಾಮಕಾರಿ ಶಸ್ತ್ರಚಿಕಿತ್ಸೆ ಎಂದು ತಿಳಿಸಿದರು. ಡಾ.ಶೀಲು ಶ್ರೀನಿವಾಸ್ ಅವರು ಮಾತನಾಡಿ, ಮಗು 6 ತಿಂಗಳಾದರೂ ತೊದಲು ದನಿ ಹೊರಡಿಸದಿದ್ದಲ್ಲಿ ಪೋಷಕರು ಮಕ್ಕಳ ಶ್ರವಣ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಮಗು ಜನಿಸಿದ 1 ರಿಂದ 3 ವರ್ಷದ ಒಳಗೆ ಶಸ್ತ್ರಚಿಕಿತ್ಸೆ ಮಾಡಿಸಿದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಯಾವುದೇ ಮಗು ಶೇ. 80 ರಿಂದ ಶೇ. 90ರಷ್ಟು ಶ್ರವಣದೋಷ ಹೊಂದಿದ್ದಲ್ಲಿ ಕೋಕ್ಲಿಯರ್ ಇಂಪ್ಲಾಂಟ್ ಅತ್ಯುತ್ತಮ ಆಯ್ಕೆ ಎಂದು ತಿಳಿಸಿದರು. ಆಸ್ಪತ್ರೆಯಲ್ಲಿ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾದ ಹತ್ತು ಮಂದಿ ಬಹುಮಾನ ನೀಡಿ ಗೌರವಿಸಲಾಯಿತು. ಡಾ.ಕ್ಷಿತಿಜ ಕುಲಕರ್ಣಿ, ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳ ಪೋಷಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.