ಕ.ಪ್ರ.ವಾರ್ತೆ ಬೆಂಗಳೂರು ಅ. 22-
ವರದಕ್ಷಿಣೆ ಕಿರುಕುಳದಿಂದ ಬೇಸತ್ತ 2 ತಿಂಗಳ ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸುಣಕಲ್ ಪಾಳ್ಯದಲ್ಲಿ ನಡೆದಿದೆ.
ನಾಗರಾಜ್ ಎಂಬುವವರ ಪತ್ನಿ ದಿವ್ಯಶ್ರೀ (19) ಆತ್ಮಹತ್ಯೆ ಮಾಡಿಕೊಂಡವರು. 2013ರ ಜೂನ್ ತಿಂಗಳಲ್ಲಿ ಸುಣಕಲ್ಪಾಳ್ಯ ನಿವಾಸಿ ನಾಗರಾಜ್ ಎಂಬಾತನೊಂದಿಗೆ ದಿವ್ಯಶ್ರೀ ವಿವಾಹವಾಗಿತ್ತು. ಮದುವೆಯಾದ ಕೆಲ ದಿನಗಳ ಮಾತ್ರ ದಂಪತಿ ಅನ್ಯೋನ್ಯವಾಗಿದ್ದರು. ಬಳಿಕ ಪತಿ, ಅತ್ತೆ, ಮಾವ ಹಾಗೂ ಮೈದುನ ತವರಿನಿಂದ ವರದಕ್ಷಿಣೆ ತರುವಂತೆ ದಿವ್ಯಶ್ರೀಗೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಪತಿ, ಕುಟುಂಬದವರ ಕಿರುಕುಳ ಸಹಿಸದ
ದಿವ್ಯಶ್ರೀ ಸೋಮವಾರ ಕೊಠಡಿಯಲ್ಲಿ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ಗೆ ಮದುವೆ ವೇಳೆ 2 ಲಕ್ಷ ಬೆಲೆಬಾಳುವ ಚಿನ್ನಾಭರಣ, ಲಕ್ಷಾಂತರ ನಗದು ನೀಡಿ ಮದುವೆ ಮಾಡಿಕೊಡಲಾಗಿತ್ತು. ಆದರೂ ನಾಗರಾಜ್ ಕುಟುಂಬದವರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂದು ದಿವ್ಯಶ್ರೀ ಪೋಷಕರು ಆರೋಪಿಸಿದ್ದಾರೆ.
ದಿವ್ಯಶ್ರೀ ಪೋಷಕರಿಂದ ದೂರು: ತಿಂಗಳ ಹಿಂದಷ್ಟೇ ವರದಕ್ಷಿಣೆ ತರುವಂತೆ ದಿವ್ಯಶ್ರೀಯನ್ನು ತವರಿಗೆ ಕಳುಹಿಸಿದ್ದರು. ಆದರೆ ಹಿರಿಯರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿಸಿ ದಿವ್ಯಶ್ರೀಯನ್ನು ಪತಿ ಮನೆಗೆ ಕಳುಹಿಸಿದ್ದರು. ಆದರೂ ನಾಗರಾಜ್ ಕುಟುಂಬ ಸದಸ್ಯರು ದಿವ್ಯಶ್ರೀಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.