ಬೆಳಗಾವಿ

ನಮ್ಮೂರಿಗೆ ಹೆರಿಗೆ ಆಸ್ಪತ್ರೆ ನೀಡುತ್ತಿಲ್ಲ

Published On :

ಚಿಕ್ಕೋಡಿ: ರಾಜಕಾರಣಿಗಳು ಆಡಳಿತ ನಿರ್ವಹಣೆಯಲ್ಲಿ ದಾರಿ ತಪ್ಪಿದಾಗ ಅವರಿಗೆ ಮಾರ್ಗದರ್ಶನ ನೀಡಿ ಸರಿಯಾದ ದಾರಿಗೆ ತರುವ ಮಹತ್ತರವಾದ ಜವಾಬ್ದಾರಿ ಪಂಚಪೀಠಗಳ ಮೇಲಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ತಾಲೂಕಿನ ಯಡೂರ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಕಾಡಸಿದ್ಧೇಶ್ವರ ಮಠದ ಆಶ್ರಯದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಧರ್ಮ ಚಿಂತನ ಹಾಗೂ ವಿಶ್ವಚೇತನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಂಚಪೀಠಗಳು 5 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಮಾನವ ಕುಲಕ್ಕೆ ಜಯವಾಗಲಿ ಎನ್ನುವ ಮೂಲಕ ಇಡೀ ವಿಶ್ವದ ಒಳಿತನ್ನು ಬಯಸುತ್ತಿವೆ. ಹಿಂದು ಧರ್ಮ ಉಳಿಯಲು ಯಾರಾದರೂ ಕಾರಣ ಆಗಿದ್ದರೆ ಅದು ಶ್ರೀಶೈಲ ಪೀಠ. ಇವತ್ತು ಪ್ರಜಾಪ್ರಭುತ್ವದಲ್ಲಿ ಪೀಠಗಳು ಕಾಣೆಯಾಗುತ್ತಿವೆ. ಆದ್ದರಿಂದ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಮಠಗಳಿಗೆ ನೂರಾರು ಕೋಟಿ ಅನುದಾನವನ್ನು ಘೋಷಿಸಿದ್ದು, ಅದರ ಸದುಪಯೋಗವಾಗಬೇಕು ಎಂದು ತಿಳಿಸಿದರು.
ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಾನು ಸಾವಿರಾರು ಮರಗಳನ್ನು ಬೆಳೆಸಿದ್ದೇನೆ. ಆದರೆ ಲೆಕ್ಕ ಮಾಡಿ 280 ಮರಗಳನ್ನು ಬೆಳೆಸಿರುವದಾಗಿ ಸರ್ಕಾರ ಹೇಳುತ್ತಿದೆ. ತಮಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಆದರೆ ಪ್ರಶಸ್ತಿಗಳಿಗೆ ಬೆಲೆಯೆ ಇಲ್ಲದಂತಾಗಿದೆ. ನಮ್ಮೂರಿಗೆ ಹೆರಿಗೆ ಆಸ್ಪತ್ರೆಯನ್ನು ಕೊಡಿ ಎಂದು ಸರ್ಕಾರವನ್ನು ಸುಮಾರು ಸಲ ಕೇಳಿಕೊಂಡಿದ್ದೇನೆ. ಆದರೆ ಇಲ್ಲಿಯವರೆಗೂ ಸರ್ಕಾರ ತಮ್ಮ ಬೇಡಿಕೆ ಈಡೇರಿಸಿಲ್ಲ. ತಮಗೆ ಸರ್ಕಾರದಿಂದ ಬೀಡಿಗಾಸು ಸಹಾಯವಾಗಿಲ್ಲ. ತಮ್ಮ ಸಾಕು ಮಗು ತಮ್ಮನ್ನು ಸಾಕುತ್ತಿದ್ದಾನೆ ಎಂದು ತಿಳಿಸಿದರು.   
ಸಾನ್ನಿಧ್ಯ ವಹಿಸಿದ್ದ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಈ ನಾಡಿನಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ ಯಡೂರಿನ ಕಾಡಸಿದ್ದೇಶ್ವರ ಮಠದ ವತಿಯಿಂದ ಪ್ರತಿ ವರ್ಷ ವಿಶಾಳಿ ಜಾತ್ರೆ ಸಂದರ್ಭದಲ್ಲಿ ವಿಶ್ವಚೇತನ ಪ್ರಶಸ್ತಿ ಮತ್ತು ರು. 50 ಸಾವಿರ ನಗದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ್ಕನಿಗೆ ವಿಶ್ವಚೇತನ ಮತ್ತು ದೇವಸ್ಥಾನದ ಜಾತ್ರೆ ಸಮಯದಲ್ಲಿ ನಿರಂತರವಾಗಿ ಅನ್ನ ದಾಸೋಹ ಸೇವೆಯನ್ನು ಮಾಡಿಕೊಂಡು ಬಂದಿರುವ ಬಂಡಿಗಣ್ಣಿಯ ಚಕ್ರವರ್ತಿ ದಾನೇಶ್ವರ ಅವರಿಗೆ ದಾಸೋಹ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಂದ್ರೂಪದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಶಿರಕೋಳದ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ, ಕರಬಂಟನಾಳದ ಶಿವಕುಮಾರ ಸ್ವಾಮೀಜಿ, ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಮಾಂಜರಿಯ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರು ಸಮ್ಮುಖ ವಹಿಸಿದ್ದರು.
ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ, ಅಖಿಲ ಭಾರತ ವೀರಶೈವ ಮಹಾಸಭೆ ಉಪಾಧ್ಯಕ್ಷ ಮಲ್ಹಾರಿಗೌಡಾ ಪಾಟೀಲ, ಮಾಜಿ ಶಾಸಕ ಕೆ.ಪಿ. ಮಗೆಣ್ಣವರ, ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ, ಕಲ್ಯಾಣರಾವ ಮುಚಳಂಬಿ, ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಅಜೀತರಾವ ದೇಸಾಯಿ, ಗ್ರಾಪಂ ಅಧ್ಯಕ್ಷೆ ಸುವರ್ಣಾ ಮಾನೆ, ಉಪಾಧ್ಯಕ್ಷ ಅಮರ ಬೋರಗಾಂವೆ, ಪಿಕೆಪಿಎಸ್ ಅಧ್ಯಕ್ಷ ರಣಜೀತ ದೇಸಾಯಿ, ಅಜಯ ಸೂರ್ಯವಂಶಿ, ಪ್ರಕಾಶ ಕೋಕಣೆ, ಈರಗೌಡಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಯಕ್ಸಂಬಾದ ಸ್ವೀಟ್ಸ್ ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಜೊಲ್ಲೆ ಸ್ವಾಗತಿಸಿದರು. ಶಹಾಪೂರದ ಸುಗೂರೇಶ್ವರ ದೇವರು ಮತ್ತು ಸುಬ್ರಾವ ಎಂಟೆತ್ತಿನವರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.