ರಾಜ್ಯದ ಅಭಿವೃದ್ಧಿಗಾಗಿ ಕೆಜೆಪಿ ಬೆಂಬಲಿಸಿ
ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಏ. 29
ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಅಸಾಧ್ಯ. ರಾಜ್ಯದ ಅಭಿವೃದ್ಧಿ, ಏಳ್ಗೆಗಾಗಿ ಪ್ರಾದೇಶಿಕ ಪಕ್ಷವಾದ ಕೆಜೆಪಿಯನ್ನು ಬೆಂಬಲಿಸಿ ಎಂದು ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಸಿರುಗುಪ್ಪ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಕೆಜೆಪಿ ಅಭ್ಯರ್ಥಿ ಕೆ.ನರಸಿಂಹ ಪರ ಪ್ರಚಾರದ ಅಂಗವಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಉಂಟಾದ ನೆರೆಹಾವಳಿ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಅಲ್ಲದೇ ಆ ಸಂದರ್ಭದಲ್ಲಿ ಇಲ್ಲಿನ ತಹಸೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಈ ಬಾರಿಯ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ನರಸಿಂಹ ಅವರು ಉತ್ತಮ ಜನ ಸೇವೆ ಮಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಆದರೆ ಪ್ರವಾಹದ ವೇಳೆಯಲ್ಲಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ರೆಸಾರ್ಟ್ ರಾಜಕಾರಣ ಮಾಡಿ ಮೋಜು ಮಸ್ತಿ ಮಾಡಿದ್ದಾರೆ. ಮತದಾರರಾದ ನೀವು ಇಂಥ ವ್ಯಕ್ತಿಗಳಿಗೆ ಮತ ನೀಡದೇ ಕೆ.ನರಸಿಂಹ ಅಂತಹ ಉತ್ತಮ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ ಬರುವುದು ಖಚಿತ, ಈ ನಿಟ್ಟಿನಲ್ಲಿ ಸರಕಾರ ರಚನೆ ಅಗತ್ಯವಿರುವ ಸ್ಥಾನಗಳಲ್ಲಿ ಕೆಜೆಪಿ ಜಯಸಾಧಿಸಲಿದೆ. ಮೇ 5ರ ನಂತರ ಬಿಜೆಪಿಯಲ್ಲಿನ ನಿಜ ಬಣ್ಣ ಬಯಲಾಗಲಿದೆ. ಮುಂದಿನ ಲೋಕಸಭಾ ಚುನಾವಣಾ ವೇಳೆಗೆ ಬಿಜೆಪಿ ಸಂಪೂರ್ಣ ನೆಲಸಮವಾಗಲಿದೆ ಎಂದು ಭವಿಷ್ಯ ನುಡಿದರು.
ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ. ನರಸಿಂಹ ನಾಯಕ ಮಾತನಾಡಿ, ಕೆಜೆಪಿ ಅಧಿಕಾರಕ್ಕೆ ಬಂದು ಮತ್ತೊಮ್ಮೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ನನ್ನನ್ನು ಆಯ್ಕೆ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಹರವಿ ಶಂಕರಗೌಡ, ಕೆ.ನಾಗನಗೌಡ, ರಾಜ್ಯ ಉಪಾಧ್ಯಕ್ಷ ಜಗದೀಶ್ ಹಿರಿಮನೆ, ಅಭ್ಯರ್ಥಿ ಕೆ. ನರಸಿಂಹ, ರಾಜಶೇಖರಗೌಡ ಪಾಟೀಲ್, ಧಡೇಸೂಗೂರು ಬಸವರಾಜ, ತಾಲೂಕು ಅಧ್ಯಕ್ಷ ಕೆ. ನಾಗರಾಜಗೌಡ, ಮುಖಂಡರಾದ ವಿಶ್ವನಾಥಗೌಡ, ದೊಡ್ಡನಗೌಡ, ಅದೇಪ್ಪ, ಪರಮೇಶ್ವರ ನಾಯಕ, ತಿಮ್ಮನಗೌಡ ಸೇರಿದಂತೆ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

