ಕಾಂಚಾಣ ಕುಣಿತಕ್ಕೆ ಬ್ರೇಕ್
-ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 29
ಗಣಿ ನಾಡಿನಲ್ಲಿ ಕೋಟಿಗಳಿಗೆ ಕಮ್ಮಿಯಿಲ್ಲ. ಗಣಿ ಧಣಿಗಳೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಕುರುಡು ಕಾಂಚಾಣದ ಕುಣಿತಕ್ಕೆ ಜೋಶ್ ಹೆಚ್ಚು.
ನೀತಿ ಸಂಹಿತೆ ಜಾರಿಯಾದಲ್ಲಿಂದ ಈವರೆಗೆ ಯಾವುದೇ ದಾಖಲೆ ಇಲ್ಲದೆ, ಸಾಗಾಣಿಕೆ ಮಾಡುತ್ತಿದ್ದ ರು. 94,76,275ನ್ನು ವಶಪಡಿಸಿಕೊಳ್ಳುವ ಮೂಲಕ ಕುರುಡು ಕಾಂಚಾಣ ಕುಣಿತಕ್ಕೆ ಆಯೋಗ ಮತ್ತು ಆಡಳಿತ, ಪೊಲೀಸ್ ಇಲಾಖೆ ಕಡಿವಾಣ ಹಾಕಿದೆ. ಅಬ್ಬರದ ಪ್ರಚಾರಕ್ಕೂ ಅವಕಾಶ ಇಲ್ಲದಂತಾಗಿದೆ.
ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗೆ ಅಕ್ರಮ ಹಣ, ಮದ್ಯ ಪ್ರವೇಶಿಸದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಅರೆಸೇನಾಪಡೆಯ ಸಿಬ್ಬಂದಿಯೊಂದಿಗೆ 40 ಕಡೆಗಳಲ್ಲಿ ಚೆಕ್ ಪೋಸ್ಟ್ ತೆರೆದಿದೆ. ದಾರಿ ಮಧ್ಯದಲ್ಲೂ ತಪಾಸಣೆ ನಡೆಯುತ್ತಿರುವುದು ರಾಜಕೀಯ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ.
ಮೂರು ತಂಡಗಳ ಹದ್ದಿನ ಕಣ್ಣು: ಆಯಕಟ್ಟಿನ ಪ್ರದೇಶದಲ್ಲಿ ಚೆಕ್ ಪೋಸ್ಟ್ಗಳು ಅಕ್ರಮ ಸಾಗಾಣಿಕೆ, ಚಟುವಟಿಕೆ ತಡೆಯುತ್ತಿದ್ದರೆ, ಚುನಾವಣಾ ಆಯೋಗದಿಂದ ನೇಮಕವಾಗಿರುವ ಅಧಿಕಾರಿಗಳಿರುವ ಪ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೇಲೆನ್ಸ್ ಟೀಂಗಳು ಹಾಗೂ ಪೊಲೀಸ್ ಇಲಾಖೆ ತಂಡಗಳು ಸದಾ ಸುತ್ತಾಡುತ್ತಿವೆ. ಈ ಮೂರು ತಂಡಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಸುಲಭದ ಕೆಲಸವಲ್ಲ.
ಎಂಟು ವಾಹನಗಳ ಸೀಜ್: ಪ್ಲೈಯಿಂಗ್ ಸ್ಕ್ವಾಡ್ ಚುನಾವಣೆ ನೀತಿ ಸಂಹಿತೆ ಜಾರಿಯಾದಗಿನಿಂದಲೂ ಏ. 28ರವರೆಗೆ ದಾಖಲೆ ಇಲ್ಲದೆ ಸಾಗಾಣಿಕೆ ಮಾಡುತ್ತಿದ್ದ ರು. 20,49,395 ನಗದು, 4 ಬೈಕ್, ಒಂದು ಬುಲೆರೋ ಕಾರು ಸೀಜ್ ಮಾಡಿದೆ. ಪೊಲೀಸ್ ತಂಡಗಳು ರು. 63,60,880 ನಗದು, 10874.91 ಲೀಟರ್ ಮದ್ಯ, ಒಂದು ವ್ಯಾನ್, ಆಟೋ ರಿಕ್ಷಾ, ಒಂದು ಬೈಕ್ ವಶಪಡಿಸಿಕೊಂಡಿವೆ. ಸ್ಟ್ಯಾಟಿಕ್ ಸರ್ವೇಲೆನ್ಸ್ ಟೀಂಗಳು ರು. 10,66,000 ನಗದು, ಒಂದು ಲ್ಯಾಪ್ಟಾಪ್, ರು. 14 ಲಕ್ಷ ಬೆಲೆಬಾಳುವ 6 ಕಾರು ವಶಪಡಿಸಿಕೊಂಡಿವೆ. ವಶವಾದ ಒಟ್ಟು ಹಣ ರು. 94,76,275.
ಭದ್ರತೆಯಿಂದಾಗಿ ಅಬ್ಬರಕ್ಕೆ ಬ್ರೇಕ್: ಚುನಾವಣೆ ಎಂದಾಕ್ಷಣ ಪ್ರಚಾರದ ಅಬ್ಬರ ಜಾಸ್ತಿ ಇರುತ್ತಿತ್ತು. ಈ ಬಾರಿ ಪ್ರಚಾರ ಮಾಡಿದರೂ ನೀತಿ ಸಂಹಿತೆಯ ಭಯದಿಂದಾಗಿ ಅಬ್ಬರವಿಲ್ಲ. ಬಹಿರಂಗವಾಗಿ ಯಾವುದೇ ಪ್ರಚಾರ ಮಾಡಲು ಪಕ್ಷಗಳು, ಅಭ್ಯರ್ಥಿಗಳು ಮುಂದಾಗುತ್ತಿಲ್ಲ. ಮತದಾರರಿಗೆ ಆಮಿಷವೊಡ್ಡುವುದೂ ಕದ್ದುಮುಚ್ಚಿ. ಪ್ರತಿಯೊಂದನ್ನೂ ಚುನಾವಣಾ ಆಯೋಗದ ನಿಯಮದಂತೆಯೇ ಮಾಡಬೇಕಾಗಿದೆ.
ಅನುಮಾನ ಬಂದಾಕ್ಷಣ ದಾಳಿ: ವೀಕ್ಷಕರಿಗೆ ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ಮಾಹಿತಿ ಅಥವಾ ಅನುಮಾನ ಬಂದಾಕ್ಷಣ ದಾಳಿ ಮಾಡುವುದರಿಂದ ಮನೆಯಲ್ಲಿ ದುಡ್ಡು ಇಟ್ಟರೂ ಆತಂಕ. ಪಕ್ಷಗಳ ಮುಲಾಜಿಗೆ ಆಯೋಗ ಒಳಗಾಗದೇ ಇರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಇಷ್ಟೆಲ್ಲ ಭದ್ರತೆ ಇದ್ದರೂ, ಕತ್ತಲ ರಾತ್ರಿ ಕರಾಮತ್ತಿಗೆ ಈ ಭದ್ರತೆ ಸಾಲುತ್ತದೋ ಅಥವಾ ಕರಾಮತ್ತೇ ಮೆರೆಯುತ್ತದೋ ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

