ಬಳ್ಳಾರಿ

ನನಸಾಗದ ಭದ್ರಾ ಮೇಲ್ದಂಡೆ ಯೋಜನೆ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಆ. 30
ಡಾ.ಡಿ.ಎಂ. ನಂಜುಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ಕೂಡ್ಲಿಗಿ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ವಿಸ್ತರಿಸದೇ ಇರುವುದು ಇಲ್ಲಿನ ರೈತರನ್ನು ವಂಚಿಸಿದಂತಾಗಿದೆ. ಪ್ರತಿವರ್ಷ ಮಳೆಯಿಲ್ಲದೆ ರೈತರು ಬೆಳೆನಷ್ಟ ಅನುಭವಿಸಿ ದೂರದ ಪ್ರದೇಶಗಳಿಗೆ  ಗುಳೆ ಹೋಗುವುದು ಸಾಮಾನ್ಯವಾಗಿದ್ದು, ಶಾಶ್ವತ ನೀರಾವರಿ ಯೋಜನೆ ಈ ಭಾಗದಲ್ಲಿ ಇಲ್ಲದಿರುವುದರಿಂದ ರೈತರ ಪರಿಸ್ಥಿತಿ ಅಯೋವುಯ.
ಮುಂಗಾರಿನಲ್ಲಿ ಜಿಟಿ ಜಿಟಿ ಮಳೆ ಬಿಟ್ಟರೆ ಕೆರೆ, ಕಟ್ಟೆಗಳು ತುಂಬುವ ಮಳೆಯಾಗಿಲ್ಲವಾದ್ದರಿಂದ ಈ ಬಾರಿಯೂ ರೈತರು ನಷ್ಟ ಅನುಭವಿಸುತ್ತಿದ್ದು, ದುಬಾರಿ ಬೀಜ, ಗೊಬ್ಬರ ಹಾಕಿ ಪ್ರತಿವರ್ಷ ಸಾಲಗಾರರಾಗುತ್ತಿದ್ದಾರೆ. ಸಾಲದಿಂದ ಹೊರ ಬರಲಾಗದ ರೈತರಿಗೆ ಇಲ್ಲಿ ಪರ್ಯಾಯ ಉದ್ಯೋಗವಕಾಶಗಳು ಇಲ್ಲದಿದ್ದರಿಂದ ಪ್ರತಿವರ್ಷ ಮಳೆಯನ್ನೇ ನಂಬಿ ಲಕ್ಷಾಂತರ ರೈತರು ಜೀವನ ಸಾಗಿಸುವ ಪರಿಸ್ಥಿತಿ ಇದೆ. ಈ ವರ್ಷ ಹಿಂಗಾರು ಮಳೆ ಬಂದರೆ ಮಾತ್ರ ಜನ ಜಾನುವಾರುಗಳಿಗೆ ಬರುವ ಬೇಸಿಗೆಯಲ್ಲಿ ಕುಡಿಯಲು ನೀರು ಸಿಗುತ್ತದೆ. ಇಲ್ಲವಾದರೆ ತಾಲೂಕಿನ ಜನತೆ ನೀರಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ.
ಜನತೆಗೆ ನಿರಾಸೆ: ತಾಲೂಕಿನಲ್ಲಿ ಈಗಾಗಲೆ ಹಲವು ಬಾರಿ ವಿವಿಧ ಸಂಘಟನೆಗಳು ಸಭೆ ಕರೆದು ಭದ್ರಾ ಮೇಲ್ದಂಡೆ ಯೋಜನೆ ಕೂಡ್ಲಿಗಿಗೆ ವಿಸ್ತರಿಸುವಂತೆ ಹೋರಾಟಕ್ಕೆ ಸಜ್ಜುಗೊಂಡಿದ್ದರೂ ಪರಿಣಾಮಕಾರಿ ಹೋರಾಟ ಸಾಧ್ಯವಾಗಿಲ್ಲ. ಕೆ.ಸಿ. ರೆಡ್ಡಿ ವರದಿಯನ್ನು ಸರ್ಕಾರ ಜಾರಿ ಮಾಡಿದ್ದರೂ ಈ ವರದಿ ಪ್ರಕಾರ ಕೂಡ್ಲಿಗಿ ತಾಲೂಕು ಅನ್ವಯಿಸದಿರುವುದು ಇಲ್ಲಿಯ ಜನತೆಯಲ್ಲಿ ನಿರಾಸೆ ಮೂಡಿಸಿದೆ. ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಗಡಿಯಲ್ಲಿರುವ ಕೂಡ್ಲಿಗಿ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗದಿರುವುದು ಇಲ್ಲಿನ ರೈತರನ್ನು ಮತ್ತಷ್ಟು ಆಕ್ರೋಶಕ್ಕೆ ಈಡುಮಾಡಿದ್ದು, 2007ರ ಆರಂಭದಿಂದಲೂ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಸ್ಥಳೀಯ ಕೆರೆ ನೀರು ತುಂಬಿಸುವ ಹೋರಾಟ ಸಮಿತಿ ಪ್ರತಿಭಟನೆ ನಡೆಸಿದರೂ ಆಗ ಸರ್ಕಾರದಲ್ಲಿ ಅಸ್ಥಿರತೆ ಇದ್ದುದರಿಂದ ಯಾವುದೇ ಪ್ರಯೋಜನವಾಗಲಿಲ್ಲ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಹಿಂದುಳಿದ ತಾಲೂಕು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದಾರೆ. ಈ ಸಮಯದಲ್ಲಿ ಸ್ಥಳೀಯ ಸಂಘ, ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಒತ್ತಡ ಏರುವುದು ಅನಿವಾರ್ಯವಾಗಿದೆ. ನಿರಂತರ ಬರಗಾಲದಿಂದ ತತ್ತರಿಸಿದ ಕೂಡ್ಲಿಗಿ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ವಿಸ್ತರಿಸಿ ಎ ಸ್ಕೀಂನಲ್ಲಿ ಸೇರಿಸುವಂತೆ ಒತ್ತಾಯಿಸಬೇಕಿದೆ.
44 ಸಾವಿರ ಎಕರೆಗೆ ನೀರು: ಸಂವಿಧಾನದ 371ನೇ ಜೆ ಕಲಂ ತಿದ್ದುಪಡಿ ಪ್ರಕಾರ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸರ್ಕಾರ ಮುಂದಾಗಿದ್ದರೂ ಇನ್ನೂ ಹಲವು ಯೋಜನೆಗಳು ಸಾಕಾರವಾಗಿಲ್ಲದಿದ್ದರಿಂದ ಈ ಭಾಗದ ಜನತೆ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿದ್ದಾರೆ. ಕೂಡ್ಲಿಗಿ ತಾಲೂಕಿನ 100ಕ್ಕೂ ಹೆಚ್ಚು ಕೆರೆ, ಕಟ್ಟೆಗಳಿಗೆ ನೀರು ತುಂಬಿಸಲು 3ರಿಂದ 4 ಟಿಎಂಸಿ ನೀರು ಸಾಕು. ತಾಲೂಕಿನ ಕೆರೆಗಳಿಗೆ ಅನಾವಶ್ಯಕವಾಗಿ ಮಳೆಗಾಲದಲ್ಲಿ ಹರಿದು ಹೋಗುತ್ತಿರುವ ನೀರನ್ನು ಬರಗಾಲ ಪ್ರದೇಶಕ್ಕೆ ಹರಿಸಿದರೆ ಅಂದಾಜು 44 ಸಾವಿರ ಎಕರೆಯಷ್ಟು ಒಣ ಭೂಮಿ ನೀರಾವರಿಯಾಗುತ್ತದೆ.
ಇದಲ್ಲದೇ ಈ ಯೋಜನೆಯಿಂದ ಜಿಲ್ಲೆಯ ಇತರೆ ತಾಲೂಕುಗಳಿಗೆ ನೀರು ಹರಿಸಬಹುದು. ಈ ಬಗ್ಗೆ ನೀರಾವರಿ ತಜ್ಞ ಪರಮಶಿವಯ್ಯ ಅವರು ರಚಿಸಿದ ವರದಿಯಲ್ಲಿ ವಿವರಣೆ ಇದ್ದು, ರಾಜ್ಯ ಸರ್ಕಾರ ಕೂಡಲೇ ಪರಮಶಿವಯ್ಯ ವರದಿ ಜಾರಿಗೊಳಿಸಿ ತಾಲೂಕನ್ನು ಬರ ಮುಕ್ತವನ್ನಾಗಿ ಮಾಡಬೇಕಿದೆ. ರೈತಪರ ಯೋಜನೆಗಳು ಕೇವಲ ಕಡತ, ಹೇಳಿಕಗೆಳಿಗೆ ಸೀಮಿತವಾಗದೇ ಜಾರಿಗೊಳಿಸಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದೆ.

 ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.