ಜಿಎಸ್ಸೆಸ್ರಿಂದ ಹಂಪಿ ಕನ್ನಡ ವಿವಿಗೆ ಶಕ್ತಿ
ಬಳ್ಳಾರಿ: ವಿಶ್ವದಲ್ಲಿಯೇ ಭಾಷೆಯೊಂದಕ್ಕೆ ಇರುವ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಏಳಿಗೆಯಲ್ಲಿ ಜಿ.ಎಸ್. ಶಿವರುದ್ರಪ್ಪ ಅವರ ಮಾರ್ಗದರ್ಶನ, ಪ್ರೇರಣೆ, ಸಲಹೆ ಅನನ್ಯ.
ವಿವಿಯ ಮೊದಲ ಕುಲಪತಿಗಳಾಗಿದ್ದ ಚಂದ್ರಶೇಖರ್ ಕಂಬಾರರಿಗೆ ಜಿಎಸ್ಸೆಸ್ ಮಾರ್ಗದರ್ಶನ ಸಾಕಷ್ಟಿತ್ತು, ಕನ್ನಡ ವಿವಿಯನ್ನು ಕಟ್ಟಿ ಬೆಳೆಸಿದ್ದು ಚಂದ್ರಶೇಖರ್ ಕಂಬಾರರಾದರೆ, ಅವರ ಹಿಂದಿನ ಶಕ್ತಿಯೇ ಜಿ.ಎಸ್. ಶಿವರುದ್ರಪ್ಪ ಎಂದರೆ ತಪ್ಪಾಗಲಿಕ್ಕಿಲ್ಲ. ಅಲ್ಲದೆ ವಿವಿಯು 2001ರಲ್ಲಿ ಜಿಎಸ್ಎಸ್ ಅವರಿಗೆ ನಾಡೋಜ ಗೌರವ ಪದವಿಯನ್ನು ನೀಡಿ ಗೌರವಿಸಿದೆ.
ಸಾಂಸ್ಕೃತಿಕ ಚಿಂತನೆಗಳಿಗೆ ಮನುಷ್ಯ ರೂಪವನ್ನು ಕನ್ನಡಕ್ಕೆ ಕೊಟ್ಟಿರುವ ಜಿಎಸ್ಎಸ್ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ಒಂದು ಮಾನವಶಕ್ತಿಯಾಗಿದ್ದರು ಎಂದು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಜಿಎಸ್ಎಸ್ಗೆ ವಿವಿಯ ಬಗ್ಗೆ ಇರುವ ಕಾಳಜಿಯನ್ನು ಮೆಲುಕು ಹಾಕುತ್ತಾರೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಜಿಎಸ್ಸೆಸ್ ತೀವ್ರವಾದ ಆಸಕ್ತಿಯನ್ನು ಹೊಂದಿದ್ದರು. ವಿವಿಯು ಹೊರತಂದ ಬುಡಕಟ್ಟು ಮಹಾಕಾವ್ಯಗಳ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಿವಿಯು ಕನ್ನಡ ಭಾಷೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಇವರ ಸಲಹೆಯನ್ನು ಮೂಲವಾಗಿ ಸ್ವೀಕರಿಸುತ್ತಿದ್ದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಮೊದಲ ಕುಲಪತಿಗಳಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಚಂದ್ರಶೇಖರ್ ಕಂಬಾರರು, ವಿಶ್ವವಿದ್ಯಾಲಯ ರೂಪುರೇಷೆಗಳ ಕುರಿತಾಗಿ ಜಿ.ಎಸ್. ಶಿವರುದ್ರಪ್ಪ ಅವರ ಹತ್ತಿರವೇ ಸುದೀರ್ಘವಾಗಿ ಚರ್ಚೆ ಮಾಡಿಯೇ ಅಭಿವೃದ್ಧಿ ಪಡಿಸಿದ್ದರು. ಇನ್ನು ನಂತರದಲ್ಲೂ ಕಂಬಾರರು ಜಿಎಸ್ಎಸ್ ಅವರಿಂದ ಅನೇಕ ಸಲಹೆ, ಸೂಚನೆಗಳನ್ನು ಪಡೆದು, ವಿಶ್ವವಿದ್ಯಾಲಯವನ್ನು ಅಭಿವೃದ್ಧಿ ಪಡಿಸಿದ್ದರು.
ವಿವಿಯಿಂದ ನಾಡೋಜ ಪದವಿ: 2001ರಲ್ಲಿ ಕಲ್ಬುರ್ಗಿ ಅವರು ವಿವಿಯ ಕುಲಪತಿಗಳಾಗಿದ್ದ ಕಾಲದಲ್ಲಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ನಾಡೋಜ ಗೌರವ ಪದವಿ ನೀಡಿ ಗೌರವಿಸಿದೆ. ಇನ್ನು ಹಂಪಿ ಕನ್ನಡ ವಿವಿಯ ಆರಂಭವಾಗಿ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮದ ಸಮಿತಿಯ ಅಧ್ಯಕ್ಷರಾಗಿದ್ದ ಜಿ.ಎಸ್. ಶಿವರುದ್ರಪ್ಪ ಅವರ ಸಲಹೆ, ಸೂಚನೆಯಂತೆ ದಶಮಾನೋತ್ಸವ ಆಚರಿಸಿ, ವಿವಿ 10 ವರ್ಷಗಳಲ್ಲಿ ಮಾಡಿರುವ ಸಾಧನೆ, ಮುಂದಿನ ದಿನಗಳಲ್ಲಿ ವಿವಿಯ ಕಾರ್ಯದ ಬಗ್ಗೆ ಜಿಎಸ್ಎಸ್ ಸಲಹೆಯನ್ನು ನೀಡಿದ್ದರು.
ಜಿಎಸ್ಸೆಸ್ ಜತೆ ಚರ್ಚಿಸಿದ್ದೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿ ಚಂದ್ರಶೇಖರ್ ಕಂಬಾರ್ ಅವರು ಕನ್ನಡಪ್ರಭದೊಂದಿಗೆ ಮಾತನಾಡಿ, ನಮ್ಮನ್ನು ಬೆಂಗಳೂರಿಗೆ ಕರೆತಂದಿದ್ದೇ ಜಿಎಸ್ಎಸ್ ಅವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ತಾವು ಮೊದಲ ಕುಲಪತಿಗಳಾದ ಸಂದರ್ಭದಲ್ಲಿ ಯಾವ ರೀತಿಯಾಗಿ ವಿಶ್ವವಿದ್ಯಾಲಯವನ್ನು ಬೆಳೆಸಬೇಕೆಂಬ ಬಗ್ಗೆ ಜಿಎಸ್ಎಸ್ ಅವರೊಂದಿಗೆ ಸುದೀರ್ಘ ಚರ್ಚೆ ಮಾಡಿದ್ದೆ. ಅನಂತರದಲ್ಲಿಯು ಅವರು ವಿವಿಯ ಬೆಳವಣಿಗೆಗೆ ಅಗತ್ಯ ಸಲಹೆ, ಸೂಚನೆ ನೀಡಿದ್ದರು. ಹಂಪಿ ವಿವಿಯ ನಿರ್ಮಾಣದಲ್ಲಿ ಅವರ ಪ್ರೇರಣೆ, ಮಾರ್ಗದರ್ಶನ ಸಾಕಷ್ಟು ನೀಡಿದ್ದಾರೆ. ಇನ್ನು ವಿವಿಗೆ 2-3 ಬಾರಿ ಬಂದಿದ್ದರು ಎಂದರು.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

