ಬಳ್ಳಾರಿ ವಿಮ್ಸ್ ನಿರ್ದೇಶಕ ಸ್ಥಾನಕ್ಕೆ ಮೇಲಾಟ

ಬಳ್ಳಾರಿ: ಒಂದು ವರ್ಷದ ಅವಧಿಯಲ್ಲಿ ಇಬ್ಬರು ನಿರ್ದೇಶಕರನ್ನು ಕಂಡಿದ್ದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ಗೆ ಇದೀಗ ನಿರ್ದೇಶಕ ಸ್ಥಾನಕ್ಕೆ ರಾಜಕೀಯ ಲಾಬಿ ಆರಂಭವಾಗಿದೆ. 3-4 ವೈದ್ಯರು ನಿರ್ದೇಶಕರಾಗಬೇಕೆಂದು ತಮ್ಮ ಆಪ್ತ ರಾಜಕೀಯ ಜನಪ್ರತಿನಿಧಿಗಳನ್ನು ಮುಂದಿಟ್ಟುಕೊಂಡು ಲಾಬಿ ನಡೆಸುತ್ತಿದ್ದಾರೆ.
ಇದೀಗ ನಿರ್ದೇಶಕ ಸ್ಥಾನದ ರೇಸ್ನಲ್ಲಿ ಮಂಡ್ಯದ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿರುವ ಬಿ. ದೇವಾನಂದ್, ಪ್ರಭಾರಿ ನಿರ್ದೇಶಕರಾಗಿರುವ ಗಂಗಾಧರಗೌಡ, ಮಾಜಿ ಶಾಸಕ ಶಂಕರ ರೆಡ್ಡಿ ಅವರ ಪುತ್ರ ಎಲ್.ಎನ್. ರೆಡ್ಡಿ, ಇನ್ನು ವಿಮ್ಸ್ನಲ್ಲಿ ಪ್ರಾಂಶುಪಾಲರಾಗಿರುವ ವಿದ್ಯಾಧರ ಕಿನ್ನಾಳ್ ಅವರ ಹೆಸರೂ ಕೇಳಿಬರುತ್ತಿದೆ. ನಿರ್ದೇಶಕ ಸ್ಥಾನದ ಪ್ರಬಲ ಆಕಾಂಕ್ಷಿಗಳು ತೀವ್ರ ಲಾಬಿ ನಡೆಸುತ್ತಿದ್ದಾರೆ. ಆದರೆ ವಿದ್ಯಾಧರ ಕಿನ್ನಾಳ್ ಇದನ್ನು ನಿರಾಕರಿಸುತ್ತಾರೆ.
ದೇವಾನಂದ್ ಕಸರತ್ತು: ಬಳ್ಳಾರಿ ವಿಮ್ಸ್ ನಿರ್ದೇಶಕರಾಗಿದ್ದ ಡಾ. ಬಿ. ದೇವಾನಂದ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಅವ್ಯವಹಾರದ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ವರ್ಗವಾಗಿದ್ದರು. ಇದೀಗ ಮರಳಿ ಬಳ್ಳಾರಿಗೆ ಬರಲು ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ. 2 ತಿಂಗಳ ಮಟ್ಟಿಗೆ ವರ್ಗಾವಣೆ ಮಾಡಿದ್ದು, ಮತ್ತೆ ಬಳ್ಳಾರಿಗೆ ಬರುತ್ತೇನೆ ಎಂಬ ಗುಂಗಿನಲ್ಲಿಯೇ ಹೋಗಿದ್ದ ದೇವಾನಂದ್ ಶತಾಯ ಗತಾಯ ಬಳ್ಳಾರಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ರೆಡ್ಡಿ ಸಹೋದರರು, ಶ್ರೀರಾಮುಲು ಆಪ್ತರಾದ ದೇವಾನಂದ್ ಆರಂಭದಲ್ಲಿ ಬಳ್ಳಾರಿಯ ವಿಮ್ಸ್ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ನಂತರದ ದಿನಗಳಲ್ಲಿ ಪೂರ್ಣಪ್ರಮಾಣದ ನಿರ್ದೇಶಕರಾಗಿ ನೇಮಕರಾಗಿದ್ದರು. ಇದೀಗ ರೆಡ್ಡಿ ಸಹೋದರರಿಗೆ ಅಧಿಕಾರವಿಲ್ಲದಿರುವುದು ಕೊಂಚ ಹಿನ್ನಡೆಗೆ ಕಾರಣವಾಗಿದೆ.
ಸಚಿವರಿಗೆ ದುಂಬಾಲು: ಡಾ. ಬಿ. ದೇವಾನಂದ್ ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಅವರನ್ನು ಮುಂದಿಟ್ಟುಕೊಂಡು ಬಳ್ಳಾರಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಅವ್ಯವಹಾರಕ್ಕೆ ಸಂಬಂಧಿಸಿದಂತೆ 2 ತಿಂಗಳ ಮಟ್ಟಿಗೆ ವರ್ಗಾವಣೆ ಮಾಡುವುದಾಗಿ ಹೇಳಿದ್ದು, ಇದೀಗ ತಮ್ಮನ್ನು ಬಳ್ಳಾರಿಗೆ ವರ್ಗಾವಣೆ ಮಾಡಬೇಕೆಂದು ಸಚಿವರಿಗೆ ದುಂಬಾಲು ಬಿದ್ದಿದ್ದಾರೆ.
ಬಳ್ಳಾರಿಯ ವಿಮ್ಸ್ ನಿರ್ದೇಶಕ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳ ಒತ್ತಡ ಹೆಚ್ಚಾಗುತ್ತಾ ಸಾಗಿದೆ. ಯಾರನ್ನು ನೇಮಕ ಮಾಡಬೇಕೆಂಬ ಗೊಂದಲ ಸರ್ಕಾರಕ್ಕೆ ಏರ್ಪಟ್ಟಿದೆ. ನಿರ್ದೇಶಕ ಸ್ಥಾನದ ಪ್ರತಿಯೊಬ್ಬ ಆಕಾಂಕ್ಷಿಯು ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಲಾಬಿ ನಡೆಸುತ್ತಿದ್ದಾರೆ.
ಸುಷ್ಮಾ ಸ್ವರಾಜ್ ಬಳಸಿ ಲಾಬಿ:ಬಳ್ಳಾರಿಯ ವಿಮ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ವೈದ್ಯರೊಬ್ಬರು ತಮ್ಮನ್ನು ನಿರ್ದೇಶಕರಾಗಿ ನೇಮಕ ಮಾಡಬೇಕೆಂದು ಸುಷ್ಮಾ ಸ್ವರಾಜ್ ಮೂಲಕ ಸರ್ಕಾರದ ಮೇಲೆ ಒತ್ತಡಲು ಹಾಕಲು ಮುಂದಾಗಿದ್ದಾರೆ ಎಂದು ವಿಮ್ಸ್ನ ಮೂಲಗಳು ತಿಳಿಸಿವೆ.
ಇದೀಗ ಪ್ರಭಾರಿ ನಿರ್ದೇಶಕರಾಗಿರುವ ಗಂಗಾಧರಗೌಡ ಹೇಗಾದರೂ ಮಾಡಿ ನಿರ್ದೇಶಕ ಸ್ಥಾನದಲ್ಲಿಯೇ ಮುಂದುವರಿಯಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮೊರೆ ಹೋಗಿದ್ದರೆ, ಇನ್ನು ಕಾಂಗ್ರೆಸ್ ನಾಯಕ, ಮಾಜಿ ಶಾಸಕ ದಿವಂಗತ ಶಂಕರ ರೆಡ್ಡಿ ಪುತ್ರ ಎಲ್.ಎನ್. ರೆಡ್ಡಿ, ಪ್ರವಾಸೋದ್ಯಮ ಸಚಿವ ಆನಂದ್ಸಿಂಗ್, ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮೂಲಕ ಒತ್ತಡ ತಂದು ನಿರ್ದೇಶಕ ಸ್ಥಾನ ಗಿಟ್ಟಿಸಿಕೂಳ್ಳಲು ತೀವ್ರ ಲಾಬಿ ನಡೆಸಿದ್ದಾರೆ.
ಮುಂಬಡ್ತಿ ಇಲ್ಲದ ವೈದ್ಯರು: ರಾಜ್ಯದಲ್ಲಿ ಗಡಿ ಭಾಗದ ಬಡವರಿಗೆ ವೈದ್ಯಕೀಯ ಸೇವೆ ನೀಡಲು ವಿಮ್ಸ್ ಆದ್ಯತೆ ನೀಡುವುದು ಬಿಟ್ಟು, ಇದೀಗ ನಿರ್ದೇಶಕ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿರುವುದು ಸಹಜವಾಗಿಯೇ ವಿಮ್ಸ್ ಅಭಿವೃದ್ಧಿಯ ಹಿನ್ನಡೆಗೆ ಕಾರಣವಾಗಿದೆ. ವಿಮ್ಸ್ನಲ್ಲಿ ಕಳೆದ ಒಂದು ವರ್ಷದಿಂದ 28 ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರಿಗೆ ಮುಂಬಡ್ತಿ ನೀಡದಿರುವುದು ಅಲ್ಲಿನ ವೈದ್ಯರ ಅಸಮಾಧಾನಕ್ಕೆ ಕಾರಣವಾಗಿದೆ.
ಕೆಲ ತಿಂಗಳ ಹಿಂದೆ ರೆಡಿಯೋಥೆರಫಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಡಾ. ರಾಜೇಶ್ ಎನ್ನುವವರಿಗೆ ಬಡ್ತಿ ನೀಡದ ಹಿನ್ನೆಲೆಯಲ್ಲಿ ಅವರು ವಿಮ್ಸ್ ಬಿಟ್ಟುಹೋಗಿದ್ದಾರೆ. ಅಧಿಕಾರಕ್ಕೆ ಕಿತ್ತಾಟ ನಡೆಸುತ್ತಿರುವುದರಿಂದ, ನುರಿತ ಕೆಲ ವೈದ್ಯರು ವಿಮ್ಸ್ ಬಿಟ್ಟುಹೋಗುವ ಮಾತನಾಡುತ್ತಿರುವುದು ಮುಂದಿನ ದಿನಗಳಲ್ಲಿ ವಿಮ್ಸ್ ಮತ್ತಷ್ಟು ಸಮಸ್ಯೆಯನ್ನು ಎದುರಿಸುವಂತಾಗುತ್ತದೆ.
ವಿಮ್ಸ್ನ ಕೆಲ ವೈದ್ಯರನ್ನು ಕನ್ನಡಪ್ರಭ ಸಂಪರ್ಕಿಸಿದಾಗ, ಸ್ಥಾನಗಳಿಗೆ ಕಿತ್ತಾಟ ನಡೆಸುತ್ತಿದ್ದಾರೆ. ಆಪರೇಷನ್ ವಿಭಾಗದಲ್ಲಿ ಸಲಕರಣೆಗಳಿಲ್ಲ. ಜೀವ ಉಳಿಸುವ ಔಷಧಗಳ ಕೊರತೆ ಇದೆ. ವೈದ್ಯರು ಹೊರಗಡೆ ಔಷಧ ಬರೆದುಕೊಡಬಾರದೆಂದು ಹೇಳುತ್ತಾರೆ. ಇಂತಹ ಸಮಸ್ಯೆ ಇದ್ದಾಗ ವೈದ್ಯರು ಏನು ಮಾಡಬೇಕು ಎಂಬುದು ವೈದ್ಯರ ಅಳಲಾಗಿದೆ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


