ಸುದ್ದಿ ಸಂಕ್ಷೇಪ
ಇಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ: ಜೆಸ್ಕಾಂ ನಗರದ ಉಪವಿಭಾಗ-1ರಲ್ಲಿ ಬರುವ ಕೌಲ್ ಬಜಾರ್ ಪ್ರದೇಶದಲ್ಲಿ ಬೀದಿ ದೀಪದ ವಾಹಕವನ್ನು ಸ್ಟ್ರಿಂಗ್ ಮಾಡುವ ಕಾರ್ಯ ಕೈಗೊಳ್ಳುವುದರಿಂದ ಜು. 24ರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ ನಗರ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ (ವಿ) ವೀರಾಂಜನೇಯ ರಾವ್ ತಿಳಿಸಿದ್ದಾರೆ. ಕುವೆಂಪು ನಗರ, ಬೆಳಗಲ್ ವೃತ್ತ, ಟಿ.ಬಿ. ಸ್ಯಾನಿಟೋರಿಯಂ, ಗೋಪಾಲಗೌಡ ನಗರ, ಸಿಎಂಸಿ ಕಾಲೋನಿ, ಕೌಲ್ಬಜಾರ್ ಮುಖ್ಯ ರಸ್ತೆ, ತಿಲಕ್ನಗರ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ಕಡಿತವುಂಟಾಗಲಿದೆ. ಗ್ರಾಹಕರು ನಿಗಮದೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ನೀರು ಸರಬರಾಜಿನಲ್ಲಿ ಇಂದು ವ್ಯತ್ಯಯ
ಬಳ್ಳಾರಿ: ನಗರಕ್ಕೆ ಮದರ್ ಟ್ಯಾಂಕ್ನಿಂದ ನೀರು ಸರಬರಾಜು ಮಾಡಲಾಗುತ್ತಿರುವ 600 ಎಂ.ಎಂ. ವ್ಯಾಸದ ಪಿಎಸ್ಸಿ ಕೊಳವೆ ಮಾರ್ಗದಲ್ಲಿ ಪಾರ್ವತಿ ನಗರದ ಮುಖ್ಯ ರಸ್ತೆಯಲ್ಲಿರುವ ತನ್ಮಯಿ ಸೂಪರ್ ಮಾರ್ಕೆಟ್ ಹತ್ತಿರ ನೀರು ಸೋರುತ್ತಿದ್ದು, ಜು. 24ರಂದು ಈ ಕೊಳವೆ ಮಾರ್ಗದ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದರಿಂದ ನಗರಕ್ಕೆ ಅಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಚಿಕ್ಕಣ್ಣ ತಿಳಿಸಿದ್ದಾರೆ.
ಇಸ್ಪೀಟ್: 8 ಜನರ ಬಂಧನ
ಕೊಟ್ಟೂರು: ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಕೊಟ್ಟೂರು ಪೊಲೀಸರು ದಾಳಿ ನಡೆಸಿ 8 ಜನರನ್ನು ಬಂಧಿಸಿ, ರು. 5 ಸಾವಿರಕ್ಕೂ ಅಧಿಕ ವಶಪಡಿಸಿಕೊಂಡ ಘಟನೆ ಕಳೆದ ರಾತ್ರಿ ಸಮೀಪದ ಉಜ್ಜಿನಿ ಗ್ರಾಮದಲ್ಲಿ ನಡೆಯಿತು. ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದೇವೆ ಎಂದು ಸಬ್ ಇನ್ಸ್ಪೆಕ್ಟರ್ ಗುರುರಾಜ ಎನ್. ಮೈಲಾರ್ ತಿಳಿಸಿದರು. ಇಸ್ಪೀಟ್ ಜೂಜಾಟ ಕೊಟ್ಟೂರು ಸೇರಿದಂತೆ ಠಾಣೆಯ ವ್ಯಾಪ್ತಿಯಲ್ಲಿ ಕಂಡುಬಂದರೆ ತಕ್ಷಣ ದಾಳಿ ಮಾಡಲಾಗುತ್ತಿದೆ. ಇತ್ತೀಚಿನವರೆಗೆ ಎಲ್ಲ ಬಗೆಯ ಜೂಜಾಟಗಳನ್ನು ಸಂಪೂರ್ಣ ನಿಗ್ರಹಿಸುತ್ತಿದ್ದೇವೆ. ಮುಂದೆಯೂ ಇದೇ ಬಗೆಯ ಕಾರ್ಯಾಚರಣೆ ಕೈಗೊಂಡು ಇಸ್ಪೀಟ್ ಆಟದ ದಂಧೆಗೆ ಕಡಿವಾಣ ಹಾಕುತ್ತೇವೆ ಎಂದು ಅವರು ತಿಳಿಸಿದರು.
100 ಚೀಲ ಬತ್ತ ಕಳ್ಳತನ
ಬಳ್ಳಾರಿ: ಗೋದಾಮಿನ ಷಟರ್ಗೆ ಹಾಕಿದ್ದ ಬೀಗವನ್ನು ಮುರಿದ ಕಳ್ಳರು ಗೋದಾಮಿನೊಳಗಿದ್ದ ಒಂದೂವರೆ ಲಕ್ಷ ರು. ಮೌಲ್ಯದ 100 ಚೀಲ ಬತ್ತವನ್ನು ಕಳವು ಮಾಡಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಇತ್ತೀಚೆಗೆ ಜರುಗಿದೆ. ನಿಟ್ಟೂರು ಗ್ರಾಮದ ಎಂ. ವೀರನಗೌಡರಿಗೆ ಸೇರಿದ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ 2,800 ಬತ್ತ ತುಂಬಿದ ಚೀಲಗಳ ಪೈಕಿ 100 ಚೀಲಗಳನ್ನು (ಪ್ರತಿ ಚೀಲದಲ್ಲಿ 70 ಕೆಜಿ ಬತ್ತ) ಕಳವು ಮಾಡಿದ್ದಾರೆ ಎಂದು ಎಸ್ಪಿ ರಾಥೋರ್ ತಿಳಿಸಿದ್ದಾರೆ. ತೆಕ್ಕಲಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ ವ್ಯಕ್ತಿ ನಾಪತ್ತೆ
ಬಳ್ಳಾರಿ: ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಿ. ಶೆಕ್ಷಾವಲಿ (45) ಎಂಬ ವ್ಯಕ್ತಿ ಕಾಣೆಯಾಗಿದ್ದಾನೆ. ಈತನು ಬಳ್ಳಾರಿಯ ಹುಸೇನ್ ನಗರದ ನಿವಾಸಿಯಾಗಿದ್ದು, ಜು. 21ರಂದು ಬೆಳಗ್ಗೆ 10.40ರ ಸುಮಾರಿಗೆ ಮನೆಯಿಂದ ಕೆ.ಸಿ. ರಸ್ತೆಯಲ್ಲಿರುವ ನದಾಫ್ ಪಿಂಜಾರ್ ಸಂಘದ ಕಚೇರಿಗೆ ಹೋಗಿಬರುತ್ತೇನೆಂದು ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಆದರೆ, ಸಂಘದ ಕಚೇರಿ ಬಳಿ ವಾಹನ ಮಾತ್ರ ದೊರೆತಿದೆ ಎಂದು ತಮ್ಮ ಪಿ. ಸಯ್ಯದ್ ಅಲಿ ದೂರು ನೀಡಿದ್ದಾರೆ. ಮಾಹಿತಿ ತಿಳಿದವರು ಬಳ್ಳಾರಿ ಕಂಟ್ರೋಲ್ ರೂಂ 08392-258100 ಗಾಂಧಿನಗರ ಠಾಣೆ 08392-272192, ಮೊಬೈಲ್ 9480803082ಗೆ ಸಂಪರ್ಕಿಸಬಹುದು.
ತುಂಬಿದ ತುಂಗಭದ್ರೆ: ಹರ್ಷ
ಬಳ್ಳಾರಿ: ತುಂಗಭದ್ರಾ ಜಲಾಶಯ ಸೋಮವಾರ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ-ಕೊಪ್ಪಳ-ರಾಯಚೂರು ಹಾಗೂ ಆಂಧ್ರದ ಕರ್ನೂಲ್-ಅನಂತಪುರ- ಕಡಪ ಜಿಲ್ಲೆಗಳ ಸಾವಿರಾರು ರೈತರ ಲಕ್ಷಾಂತರ ಎಕರೆಗೆ ನೀರುಣಿಸುವ ಜಲಾಶಯವು ಈ ವರ್ಷ ಒಂದು ತಿಂಗಳ ಮುಂಚಿತವಾಗಿ ಭರ್ತಿಯಾಗಿದ್ದು, ಜಲಾಶಯದ 10 ಗೇಟ್ಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತಿದೆ. ಇದರಿಂದ ಆಂಧ್ರ-ಕರ್ನಾಟಕದ ಹಲವಾರು ಜಿಲ್ಲೆಗಳ ರೈತರು ಸಂತಸ ವ್ಯಕ್ತಪಡಿಸುವಂತಹ ಸಂಗತಿಯಾಗಿದೆ ಎಂದು ಬಳ್ಳಾರಿ ಜಿಲ್ಲಾ ರೈತ ಮುಖಂಡರಾದ ದರೂರು ಪುರುಷೋತ್ತಮಗೌಡ, ಭೈರದೇವನಹಳ್ಳಿ ಸತ್ಯನಾರಾಯಣ ರೆಡ್ಡಿ, ಮೋಕಾದ ಕಾರದಪುಡಿ ಮುದ್ದನಗೌಡ, ಕರೂರು ಕೋಟೇಶ್ ರೆಡ್ಡಿ, ಶಾನವಾಸಪುರ ಶರಣನರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

