ಬಳ್ಳಾರಿ

ಕುರುವತ್ತಿ ಜಾತ್ರೆಗೆ ಕುಡಿವ ನೀರು ಬಂದ್...

Published On :

ಹೂವಿನಹಡಗಲಿ: ಐತಿಹಾಸಿಕ ಹಾಗೂ ಪೌರಾಣಿಕವಾಗಿಯೂ ಪರಮ ಸಿದ್ದವೆನಿಸಿದ ಪಶ್ಚಿಮವಾಹಿನಿ, ದಕ್ಷಿಣ ಕಾಶಿಯೆಂದು ಕರೆಯುವ ತುಂಗಭದ್ರ ನದಿ ತೀರದ ಪವಿತ್ರ ಸ್ಥಳ ಕುರುವತ್ತಿಯ ಶ್ರೀ ಬಸವೇಶ್ವರ, ಶ್ರೀಮಲ್ಲಿಕಾರ್ಜುನ ಸ್ವಾಮಿಯ ಜಾತ್ರೆ ಮಾ.10ರಿಂದ 12ರ ವರೆಗೆ ನಡೆಯಲಿದೆ.
ಮಾ. 10 ಶಿವರಾತ್ರಿ ದಿನ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆಯಿದ್ದರೂ ಈ ವರೆಗೂ ಕುಡಿವ ನೀರಿನ ವ್ಯವಸ್ಥೆಯನ್ನು ಪಂಚಾಯತ್ ರಾಜ್ ಇಲಾಖೆ ಸಮರ್ಥವಾಗಿ ನಿಭಾಯಿಸಿಲ್ಲ. ಮೈಲಾರದಲ್ಲಿರುವ ಗುಂಪು ಕುಡಿವ ನೀರಿನ ಯೋಜನೆಯ ವಾಲ್ಗೆ ರೈತನೊಬ್ಬ ಬೀಗ ಹಾಕಿರುವ ಪರಿಣಾಮ ಈ ವರೆಗೂ ಶುದ್ಧ ಕುಡಿವ ನೀರಿಲ್ಲ, ಜಾತ್ರೆಗೆ ಬರುವ ಭಕ್ತರಿಗೆ ನದಿಯ ಕಲುಷಿತ ನೀರೇ ಗತಿಯಾಗಿದೆ.
ಡೆಂಕಣ ಮರಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಶುದ್ಧ ಕುಡಿವ ನೀರಿನ ಘಟಕಕ್ಕೆ ನಿವೇಶನ ನೀಡಿರುವ ರೈತನಿಗೆ ಪಂಚಾಯತ್ರಾಜ್ ಇಲಾಖೆ ಪರಿಹಾರ ನೀಡದ ಕಾರಣ ರೈತ ಬೀಗ ಹಾಕಿದ್ದಾನೆ. ಆದರಿಂದ ಜಾತ್ರೆಗೆ ಶುದ್ಧ ಕುಡಿವ ನೀರೇ ಬರುತ್ತಿಲ್ಲವೆಂದು ಕುರುವತ್ತಿ ಭಕ್ತರು ತಿಳಿಸಿದರು.
ಪಂಚಾಯತ್ ರಾಜ್ ಎಇಇ ಹನುಮಂತರೆಡ್ಡಿ ಅವರನ್ನು ಮಾತನಾಡಿಸಿದಾಗ, ಜಾತ್ರೆ ಸಂದರ್ಭ ಭಕ್ತರಿಗೆ ನೀರಿನ ಸಮಸ್ಯೆ ಆಗುತ್ತದೆ ಎಂದು ಹೇಳಿದರೂ ರೈತ ಕೇಳದ ಕಾರಣ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆಂದು ಹೇಳಿದರು. ಆ ರೈತನಿಗೆ ಪರಿಹಾರ ನೀಡುವ ಪ್ರಕ್ರಿಯೆಗೆ 4 (1) ನೋಟಿಸ್ ನೀಡಲಾಗಿದ್ದು, ಮುಂದಿನ ಕ್ರಮಕ್ಕಾಗಿ ಎಸಿ, ಡಿಸಿಯವರಿಗೆ ತಿಳಿಸಲಾಗಿದೆ. ಅವರ ಆದೇಶ ನೀಡಿದ ಕೂಡಲೇ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆಂದರು.
ಮೈಲಾರ ಜಾತ್ರೆಯ ಸಂದರ್ಭದಲ್ಲಿ ಕುರುವತ್ತಿ ಹಾಗೂ ಡೊಂಬರಹಳ್ಳಿಗೆ ಶುದ್ಧ ನೀರು ಬಂದ್ ಮಾಡಿ ಜಾತ್ರೆಗೆ ಬಳಕೆ ಮಾಡಲಾಗಿತ್ತು. ಆದರೆ, ಕುರುವತ್ತಿ ಜಾತ್ರೆಗೆ ಶುದ್ಧ ನೀರು ಬಿಡುತ್ತಿಲ್ಲ. ಈಗಾಗಲೇ ಪರಿಷೆ ಸೇರುವ ಕಡೆಗಳಲ್ಲಿ ಹಾಕಲಾಗಿರುವ ನಳಗಳಿಗೆ ಶುದ್ಧ ಕುಡಿವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎನ್ನುತ್ತಾರೆ ಕುರುವತ್ತಿ ಪಿಡಿಓ ಸೋಮಶೇಖರ.
ಜಾತ್ರೆಗೆ ಶಾಶ್ವತ ಕುಡಿವ ನೀರಿನ ವ್ಯವಸ್ಥೆಗಾಗಿ ಡಿಸಿ ಆದೇಶಿಸಿದ್ದರು. ಆದರೆ, ಈ ವರೆಗೂ 2 ಕೊಳವೆ ಬಾವಿ ಕೊರೆದು ಮೋಟಾರ್ ಅಳವಡಿಸಿ ಪೈಪ್ಲೈನ್ ಕಾಮಗಾರಿ ಇನ್ನೂ ಮಾಡಿಲ್ಲ ಎಂದು  ಭಕ್ತರು ದೂರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.