ಬಳ್ಳಾರಿ

ಬಿಎಸ್ಆರ್ ಕಾಂಗ್ರೆಸ್ ಡ್ರಾಮಾ ಕಂಪನಿ

Published On :

ಬಳ್ಳಾರಿ: ಬಿಎಸ್ಆರ್ ಪಕ್ಷ ಡ್ರಾಮಾ ಕಂಪನಿ ಇದ್ದಂತೆ, ಪ್ರತಿಯೊಂದು ಚುನಾವಣೆಯಲ್ಲಿ ಡ್ರಾಮಾ ಮಾಡುವ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಎಂ.ಪಿ. ಶಾಂತಾ ಅಂತಹ ಡ್ರಾಮಾ ಮಾಡುವುದಕ್ಕೆ ಮುಂದಾಗಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪ್ರತಾಪ ರೆಡ್ಡಿ ಹೇಳಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲಿ ಡ್ರಾಮಾ ಮಾಡಿಕೊಳ್ಳುವ ಮೂಲಕ ಜನರ ಅನುಕಂಪ ಗಿಟ್ಟಿಸಿಕೊಂಡಿದ್ದರು. 2007ರಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಶೂಟ್ ಮಾಡಲು ಬಂದಿದ್ದರು ಎಂದು ಹೇಳಿಕೆ ನೀಡುವ ಮೂಲಕ ಜನರ ಅನುಕಂಪ ಗಿಟ್ಟಿಸಿಕೊಂಡು ಮಹಾನಗರ ಪಾಲಿಕೆಯ 30 ವಾರ್ಡ್ಗಳಲ್ಲಿ ಗೆಲವು ಸಾಧಿಸಿ, ಚುಕ್ಕಾಣಿ ಹಿಡಿದಿದ್ದರು. ಈ ಬಾರಿ ಯಾವುದೇ ಡ್ರಾಮಾ ಮಾಡಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬದಲಾಗಿದೆ ಎಂದು ಜಿಲ್ಲಾಧಿಕಾರಿ ಮೇಲೆ ಆರೋಪ ಮಾಡಲು ಮುಂದಾಗಿದ್ದರು ಎಂದರು.
ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ೤ ಚಂದ್ರಗುಪ್ತಾ ಅವರು ಮಾಡಿದ ಉತ್ತಮ ಕಾರ್ಯದಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಶಾಂತಿಯುತವಾಗಿ ನಡೆದಿದೆ. ಅವರಿಗೆ ಧನ್ಯವಾದ ಹೇಳಬೇಕು. ಆದರೆ, ಇದನ್ನು ಅರಿಯದೆ ಜಿಲ್ಲಾಚುನಾವಣಾಧಿಕಾರಿ ಮೇಲೆ ಬಿಎಸ್ಆರ್ನವರು ಅನಗತ್ಯ ಆರೋಪ ಮಾಡಿ, ಅಧಿಕಾರಿಗಳ ಮೇಲೆ ಒತ್ತಡ ತರುವ ತಂತ್ರ ಮಾಡುತ್ತಿದ್ದಾರೆ.
ಹಣ ಹಂಚಿಕೆ ಕುರಿತಾಗಿ ಎಲ್ಲ ಪಕ್ಷಗಳ ಮೇಲೆ ದೂರು ದಾಖಲಾಗಿದ್ದರೂ, ಜಿಲ್ಲಾಧಿಕಾರಿ ತಮ್ಮನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ ಎಂದರು.
1999ರಲ್ಲಿ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಇದೀಗ 2013ರಲ್ಲಿ ಯೂ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದೆ. ಅಧಿಕಾರಿಗಳು ತಮ್ಮ ಪರವಾಗಿ ವರ್ತಿಸಿದರೆ ಮಾತ್ರ ಬಿಎಸ್ಆರ್ ಪಕ್ಷಕ್ಕೆ ಉತ್ತಮ ಅಧಿಕಾರಿಗಳು ಆಗುತ್ತಾರೆ. ಇಲ್ಲವಾದರೆ ಟಾರ್ಗೆಟ್ ಮಾಡುತ್ತಾರೆ ಎಂದು ಆರೋಪಿಸುತ್ತಾರೆ. ಇದು ಸರಿಯಲ್ಲ. ಈ ಬಾರಿ ಕಾಂಗ್ರೆಸ್ ಮುಖಂಡರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಇದಕ್ಕೆ ಮಿಗಿಲಾಗಿ ಮತದಾರರು ಕಾಂಗ್ರೆಸ್ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಮಹಾನಗರ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಸಾಧಿಸಲಿದೆ. ಬಿಎಸ್ಆರ್ ಮೂರನೇ ಸ್ಥಾನಕ್ಕೆ ಹೋದರೂ ಆಶ್ಚರ್ಯ ಪಡಬೇಕಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.