ಬಳ್ಳಾರಿ

ಬಳ್ಳಾರಿ: 17ರ ವರೆಗೆ ಜ್ಯೋತಿರ್ಲಿಂಗ ದರ್ಶನ

Published On :

ಬಳ್ಳಾರಿ: ಮಹಾಶಿವರಾತ್ರಿ ಅಂಗವಾಗಿ ಮಾ. 10ರಿಂದ 17ರವರೆಗೆ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಕಾರ್ಯಕ್ರಮ ನಗರದ ಪಾರ್ವತಿ ನಗರದಲ್ಲಿನ ಶಿವಧ್ಯಾನ ಮಂದಿರದಲ್ಲಿ ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ 4 ರಿಂದ ರಾತ್ರಿ 9ರವರೆಗೆ ಜ್ಯೋತಿರ್ಲಿಂಗಗಳ ದರ್ಶನ ದೊರೆಯಲಿದೆ. ಅಲ್ಲದೇ ಮಾ. 31ರವರೆಗೆ ಒತ್ತಡ ಮುಕ್ತತೆಯ ರಾಜಯೋಗ ಶಿಬಿರವನ್ನು ಉಚಿತವಾಗಿ ನಡೆಸಲಾಗುತ್ತಿದ್ದು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 6.30ರಿಂದ 7.30ರವರೆಗೆ ನಡೆಯಲಿದೆ. ನಗರದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವನ ದರ್ಶನ ಪಡೆದು ಪುನೀತರಾಗಬೇಕೆಂದು ಮಂದಿರದ ಸಂಚಾಲಕಿ ಬಿ.ಕೆ. ನಿರ್ಮಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾಶಿವರಾತ್ರಿ ಆಚರಣೆ
ಕೊಟ್ಟೂರು: ಮಹಾಶಿವರಾತ್ರಿಯನ್ನು ಇಲ್ಲಿನ ಜನತೆ ಶ್ರದ್ಧಾಭಕ್ತಿಗಳಿಂದ ಭಾನುವಾರ ಬೆಳಗ್ಗೆಯಿಂದಲೇ ಆಚರಿಸಿದರು. ಇಲ್ಲಿನ ಗದ್ದಿಕಲ್ಲೇಶ್ವರ, ಮಳೆಮಲ್ಲೇಶ್ವರ, ಸಿರಿಮಠದ ಈಶ್ವರ, ಮೂರ್ಕಲ್ ಮಠದ ಈಶ್ವರ, ಚಂದ್ರಮೌಳೇಶ್ವರ, ಸೋಮಲಿಂಗಶ್ವರ, ಮಾರ್ಕಂಡೇಶ್ವರ, ಪಂಪಾಪತೇಶ್ವರ,108 ಶಿವಲಿಂಗ, ಬಸವೇಶ್ವರ ನಗರದ ಈಶ್ವರಲಿಂಗ ದೇವಸ್ಥಾನಗಳಿಗೆ ಜನತೆ ತಂಡೋಪತಂಡಗಳಲ್ಲಿ ತೆರಳಿ ಶಿವಲಿಂಗಗಳಿಗೆ ರುದ್ರಾಭಿಷೇಕ ಮತ್ತಿತರ ಪೂಜಾ ಕೈಂಕರ್ಯ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಕೊಟ್ಟೂರೇಶ್ವರ ಜಾತ್ರಾ ಮಹೋತ್ಸವದ ಈ ಗಳಿಗೆಯಲ್ಲಿ ಮಹಾಶಿವರಾತ್ರಿ ಹಬ್ಬ ಬಂದಿದ್ದು ಜಾತ್ರೆಯ ಮೆರುಗನ್ನು ಮತ್ತ್ತಷ್ಟು ಹೆಚ್ಚಿಸಿದೆ.

ಸಂಭ್ರಮದಿಂದಶಿವರಾತ್ರಿ ಆಚರಣೆ
ಹೊಸಪೇಟೆ: ಮಹಾ ಶಿವರಾತ್ರಿ ಅಂಗವಾಗಿ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಭಾನುವಾರ ಬೆಳಗ್ಗೆಯಿಂದ ನಡೆದವು. ಸಾವಿರಾರು ಭಕ್ತರು ವಿವಿಧೆಡೆ ಶಿವ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದರು. ನಗರದ ನೀಲಕಂಠೇಶ್ವರ, ಈಶ್ವರ, ಸಣ್ಣಕ್ಕಿ ವೀರಭದ್ರೇಶ್ವರ, ಓಂಕಾರೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೂ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡು ಶಿವರಾತ್ರಿ ಆಚರಿಸಿದರು. ಶಿವರಾತ್ರಿ ಅಂಗವಾಗಿ ಜಾಗರಣೆ ಮಾಡಲು ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಕ್ತಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೆಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ನಾಟಕ, ನೃತ್ಯ, ಸಂಗೀತದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರಿಗೆ ಜಾಗರಣೆ ಮಾಡಲು ವ್ಯವಸ್ಥೆ ಕಲ್ಪಿಸಿದ್ದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿನ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಆಲಂಕಾರ ಮಾಡಲಾಗಿತ್ತು. ದೇವಸ್ಥಾನಗಳಿಗೆ ವಿದ್ಯುತ್ ದೀಪದ ಅಲಂಕಾರ ಮಾಡಿ ಸಿಂಗರಿಸಲಾಗಿತ್ತು. ಮರಿಯಮ್ಮನಹಳ್ಳಿಯಲ್ಲಿ ಶಿವರಾತ್ರಿ ಆಚರಣೆ ಅಂಗವಾಗಿ ಸಾವಿರಾರು ಭಕ್ತರು ನೀಲಕಂಠೇಶ್ವರ ದೇವಸ್ಥಾನಕ್ಕೆ, ಈಶ್ವರ ದೇವಸ್ಥಾನಕ್ಕೆ, ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುಕೊಂಡರು. ತಾಲೂಕಿನ ಕಮಲಾಪುರ, ಗಾದಿಗನೂರು, ಪಾಪಿನಾಯಕನಹಳ್ಳಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಶಿವರಾತ್ರಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶಿವರಾತ್ರಿ ಅಂಗವಾಗಿ ಹಣ್ಣಿನ ಅಂಗಡಿಗಳ ಮುಂದೆ ಜನರು ಮುಗಿ ಬಿದ್ದು ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದರು.

ಬಾಲ್‌ಬ್ಯಾಡ್ಮಿಂಟನ್ ಸಂಸ್ಥೆಗೆ ಆಯ್ಕೆ
ಬಳ್ಳಾರಿ: ಕರ್ನಾಟಕ ಬಾಲ್‌ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕೊಪ್ಪಳದ ಪ್ರಕಾಶ್ ಹೆಬ್ಬಾಳ್, ಬಳ್ಳಾರಿಯ ರಾಘವೇಂದ್ರ ಪ್ರಸಾದ್ ಆಯ್ಕೆಯಾಗಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಇತ್ತೀಚೆಗೆ ನಡೆದ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಚುನಾವಣೆ ಮೂಲಕ ಇವರನ್ನು ಆಯ್ಕೆ ಮಾಡಲಾಗಿದ್ದು, 2013ರಿಂದ 2017ರ ಅವಧಿಗೆ ಇವರನ್ನು ನೇಮಿಸಲಾಗಿದೆ. ಉತ್ತರ ಕರ್ನಾಟಕದಿಂದ ಮೊದಲ ಬಾರಿಗೆ ರಾಜ್ಯ ಘಟಕಕ್ಕೆ ಆಯ್ಕೆಯಾಗಿರುವ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಸ್ಥೆಯ ಜಿಲ್ಲಾಧ್ಯಕ್ಷ ಯು.ನವೀನ್‌ಕುಮಾರ್ ಮತ್ತು ಜಿಲ್ಲಾ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

30ರಂದು ಕ್ರಿಸ್ತನಿಗಾಗಿ ಓಟ
ಬಳ್ಳಾರಿ: ಆರಾಧನಾ ಟಿವಿ ಚಾನೆಲ್‌ನಿಂದ ರನ್ ಫಾರ್ ಜೀಸಸ್ (ಕ್ರಿಸ್ತನಿಗಾಗಿ ಓಟ) ಎಂಬ ಕಾರ್ಯಕ್ರಮವನ್ನು ಮಾ. 30ರಂದು ಬಳ್ಳಾರಿ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ಕ್ರೈಸ್ತರಿಂದ ದೊರೆತ ಉತ್ತಮ ಸ್ಪಂದನೆ ಹಿನ್ನೆಲೆಯಲ್ಲಿ ಈ ವರ್ಷವೂ ಈ ಓಟ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಚರ್ಚ್‌ಗಳ ಫಾದರ್, ಮುಖ್ಯಸ್ಥರು, ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಸಂಯೋಜಕ ಕೆ. ನೋಹಾ ವಿಲ್ಸನ್ ಮತ್ತು ಬಿ.ಟಿ. ಕಿರಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.