ಕಮರಿತು ನೂತನ ತಾಲೂಕು ಕನಸು
ಜಿ. ಸೋಮಶೇಖರ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮೇ 22
ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಿಸಲಾಗಿದ್ದ 43 ನೂತನ ತಾಲೂಕಗಳ ರಚನೆಗೆ ಕಾಂಗ್ರೆಸ್ ಸರ್ಕಾರ ಎಳ್ಳುನೀರು ಬಿಡುವ ಲಕ್ಷಣಗಳು ಗೋಚರಿಸಿವೆ.
ಕೊಟ್ಟೂರು ಸೇರಿದಂತೆ ರಾಜ್ಯದ 43 ಪಟ್ಟಣಗಳನ್ನು ಕಾಂಗ್ರೆಸ್ ಸರ್ಕಾರ ತಾಲೂಕುಗಳನ್ನಾಗಿ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಕಂದಾಯ ಸಚಿವ ವಿ. ಶ್ರೀನಿವಾಸ್ಪ್ರಸಾದ್ ಹಿಂದಿನ ಸರ್ಕಾರದ ಯೋಜನೆ ಜಾರಿಗೊಳಿಸಲ್ಲ, ನೂತನ ತಾಲೂಕುಗಳ ರಚನೆಯನ್ನು ಮರು ಪರಿಶೀಲಿಸುತ್ತೇವೆ ಎಂದಿದ್ದು ನಿರಾಸೆ ಮೂಡಿಸಿದೆ.
ಸೇಡಿನ ರಾಜಕಾರಣವೇ?: ಜಗದೀಶ ಶೆಟ್ಟರ್ ಮಂಡಿಸಿದ್ದ ಬಜೆಟ್ನಲ್ಲಿ 43 ತಾಲೂಕುಗಳ ರಚನೆ ಘೋಷಿಸಿದ್ದರು. ಪ್ರತಿ ತಾಲೂಕು ರಚನೆಗೆ ತಲಾ ರು. 2 ಕೋಟಿ ಮೀಸಲಿಡುವುದಾಗಿ ಪ್ರಕಟಿಸಿದ್ದರು. ನೂತನ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ರಿಂದ ಈ ಘೋಷಣೆಯ ಮರುಪರಿಶೀಲನೆ ಹೇಳಿಕೆ ಹೊರಬಿದ್ದಿದೆ.
ಅಧಿಕಾರಕ್ಕೆ ಬರುವ ಸರ್ಕಾರಗಳ ಇಬ್ಬಗೆ ಮತ್ತು ತಾರತಮ್ಯ ನೀತಿಯಿಂದಾಗಿ ಕೊಟ್ಟೂರು ಸೇರಿದಂತೆ ಹೊಸ ತಾಲೂಕುಗಳ ರಚನೆ ಪ್ರಕ್ರಿಯೆ ಮತ್ತೆ ನೆನೆಗುದಿಗೆ ಬಿದ್ದಂತಾಗಿದೆ.
ಕೊಟ್ಟೂರು ಸೂಕ್ತ: ಬಳ್ಳಾರಿ ಜಿಲ್ಲೆಯಲ್ಲಿ ಕುರುಗೋಡು ಮತ್ತು ಕೊಟ್ಟೂರು ಪಟ್ಟಣಗಳನ್ನು ತಾಲೂಕಾಗಿಸುವ ಪ್ರಯತ್ನ ಹಿಂದಿನ ಸರ್ಕಾರಗಳಿಂದ ನಡೆದಿತ್ತು. ರಾಜ್ಯದಲ್ಲಿ ಬಹುತೇಕ ತಾಲೂಕುಗಳು 400 ಚ.ಮೀ.ನಷ್ಟಿದ್ದರೆ. ಬಳ್ಳಾರಿ ಜಿಲ್ಲೆಯ ತಾಲೂಕುಗಳು 600 ಚ.ಮೀ. ಕ್ಷೇತ್ರ ಹೊಂದಿವೆ. ಅಭಿವೃದ್ಧಿ, ಆಡಳಿತದ ದೃಷ್ಟಿಯಿಂದ ಮೂರು ಹೋಬಳಿಗೆ 1 ತಾಲೂಕಿನಂತೆ ಪುನರ್ ವಿಂಗಡಣೆ, ಜಿಲ್ಲೆಯ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ನೂತನ ಎರಡು ತಾಲೂಕು ರಚಿಸಬೇಕೆಂಬ ಬೇಡಿಕೆಯಿಂದಾಗಿ ಸರ್ಕಾರ ಕೊಟ್ಟೂರು ಪಟ್ಟಣವನ್ನು ನೂತನ ತಾಲೂಕು ಪಟ್ಟಿಯಲ್ಲಿ ಸೇರಿಸಿತ್ತು.
ಉಗ್ರ ಹೋರಾಟ: ಕೊಟ್ಟೂರು ತಾಲೂಕು ರಚನೆ ಬೇಡಿಕೆ ಈಡೇರಿಕೆಗಾಗಿ ಮತ್ತೊಮ್ಮೆ ಹೋರಾಟ ಅನಿವಾರ್ಯ ಎಂಬಂತಾಗಿದೆ. ನೂತನ ಶಾಸಕ ಭೀಮಾನಾಯ್ಕ ನೇತೃತ್ವದಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಕೊಟ್ಟೂರು ತಾಲೂಕು ರಚನೆ ಬೇಡಿಕೆಯನ್ನು ಮತ್ತೊಮ್ಮೆ ಮಂಡಿಸುತ್ತೇವೆ ಎಂದು ಸ್ಥಳೀಯ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ಹೇಳಿದ್ದಾರೆ.
ಒಳಗೂ, ಹೊರಗೂ ಹೋರಾಟ
ಸಚಿವ ಶ್ರೀನಿವಾಸ್ಪ್ರಸಾದ್ ಕೂಲಂಕಷವಾಗಿ ವಿಚಾರಿಸದೆ ಅವಸರದ ಹೇಳಿಕೆ ನೀಡುವ ಮೂಲಕ ಜನರ ಭಾವನೆಗಳನ್ನು ಕೆದಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಕೊಟ್ಟೂರು ತಾಲೂಕು ರಚನೆ ಪ್ರಕ್ರಿಯೆಗೆ ಆಡಳಿತಾತ್ಮಕ ಮುಂಜೂರಾತಿ ಪಡೆಯಲು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಬಳಿ ಪಟ್ಟಣದ ಪ್ರಮುಖರು, ಮುಖಂಡರ ನಿಯೋಗ ತೆರಳಿ ಒತ್ತಾಯಿಸುತ್ತೇನೆ. ಮುಖ್ಯಮಂತ್ರಿಗಳಿಂದ ಪೂರಕ ಪ್ರತಿಕ್ರಿಯೆ ಬಾರದಿದ್ದರೆ ವಿಧಾನಸಭೆ ಒಳಗೂ ಹೊರಗೂ ತಾಲೂಕು ರಚನೆಗಾಗಿ ನಿರಂತರ ಹೋರಾಡುತ್ತೇನೆ.
- ಎಸ್. ಭೀಮಾನಾಯ್ಕ್, ಹಗರಿಬೊಮ್ಮನಹಳ್ಳಿ ಶಾಸಕ
ತಪ್ಪುಮಾಡುತ್ತಿದೆ..
ಹಲವು ಹೋರಾಟಗಳ ಫಲವಾಗಿ ಬಿಜೆಪಿ ಸರ್ಕಾರ ತಾಲೂಕುಗಳ ರಚನೆ ಪ್ರಕ್ರಿಯೆಗೆ ಮುಂದಾಗಿತ್ತು. ಇದೀಗ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಕಂದಾಯ ಸಚಿವ ವಿ. ಶ್ರೀನಿವಾಸ್ಪ್ರಸಾದ್ ತಾಲೂಕುಗಳ ರಚನೆಗೆ ಮುಂದಾಗುವುದಿಲ್ಲ ಎಂದು ಹೇಳುವ ಮೂಲಕ ತಪ್ಪು ದಾರಿಯತ್ತ ಸರ್ಕಾರ ನಡೆದಿರುವುದನ್ನು ತೋರ್ಪಡಿಸಿದ್ದಾರೆ. ಹಳೆ ಸರ್ಕಾರದ ಯೋಜನೆಗಳನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸುವ ಸಂಪ್ರದಾಯ ಮುಂದುವರೆಸದೆ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿ, ಜನಪ್ರಿಯ ಸರ್ಕಾರ ಎನಿಸಿಕೊಳ್ಳಬೇಕು. ಸರ್ಕಾರದ ಧೋರಣೆ ಇದೇ ತೆರನಾಗಿ ಮುಂದುವರೆದರೆ ಜನತೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ.
- ಕುಂ. ವೀರಭದ್ರಪ್ಪ, ಸಾಹಿತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

