ವೃತ್ತ ನಿರ್ಮಾಣಕ್ಕೆ ತಾಲೂಕಾಡಳಿತ ನಿರ್ಲಕ್ಷ್ಯ
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ನಿರ್ಮಾಣ ಹಾಗೂ ಅವರ ಪುತ್ಥಳಿ ಪ್ರತಿಷ್ಠಾಪನೆಯ ದಶಕಗಳ ಕನಸು ಇನ್ನೂ ಸಾಕಾರಗೊಂಡಿಲ್ಲ. ಈ ಕಾರ್ಯ ಸಂಪೂರ್ಣ ನೆನಗುದಿಗೆ ಬಿದ್ದಿದೆ.
ದಶಕಗಳ ಹೋರಾಟದ ನಂತರ ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿಯ ರಾಮನಗರದ ಪೊಲೀಸ್ ಕ್ವಾಟರ್ಸ್ ಬಳಿ ವೃತ್ತ ನಿರ್ಮಿಸಲು ಸ್ಥಳ ಗುರುತಿಸಿದ ತಾಲೂಕಾಡಳಿತ 2012ರ ಅಂಬೇಡ್ಕರ್ ಜಯಂತಿಯಂದು ಅಡಿಗಲ್ಲು ಹಾಕಿತ್ತು. ಆರು ತಿಂಗಳಲ್ಲಿ ವೃತ್ತ ನಿರ್ಮಿಸಿ, ಅಂಬೇಡ್ಕರ್ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸುವುದಾಗಿ ಭರವಸೆ ನೀಡಿತ್ತು. ಆದರೆ ಅಲ್ಲಿಂದ ಆಗಿದ್ದೇ ಬೇರೆ.
ಮೀನಮೇಷ: ಇವತ್ತು, ನಾಳೆ, ನಾಡಿದ್ದು... ಹೀಗೆ ವೃತ್ತ ನಿರ್ಮಾಣ, ಪುತ್ಥಳಿ ಪ್ರತಿಷ್ಠಾಪಿಸುವ ವಿಚಾರದಲ್ಲಿ ತಾಲೂಕಾಡಳಿತ ಮೀನಮೇಷ ಎಣಿಸುತ್ತಲೆ ಬರುತ್ತಿದೆ. ಹೀಗಾಗಿ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿಯ ವೃತ್ತ ನಿರ್ಮಾಣ ನೆನೆಗುದಿಗೆ ಬೀಳುವಂತಾಗಿದೆ. ತಾಲೂಕಾಡಳಿತದ ವಿಳಂಬ ನೀತಿಯಿಂದಾಗಿ ತಾಲೂಕಿನ ಅಂಬೇಡ್ಕರ್ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ. ದೇಶ ಒಗ್ಗೂಡಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಾಭಭಾಯಿ ಪಟೇಲ್ ಅವರನ್ನೇ ಮರೆತಿರುವವರಿಗೆ ಸಂವಿಧಾನ ರಚಿಸಿಕೊಟ್ಟ ದಲಿತ ವರ್ಗದ ಅಂಬೇಡ್ಕರ್ ಅವರನ್ನು ಮರೆಯಲು ಇವರಿಗೆ ಸುಲಭ ಎನ್ನುವಂತಿದೆ. ಅಡಿಗಲ್ಲು ಕಂಡಿದ್ದರು ಇನ್ನೂ ಮೇಲೇಳೆದ ಸಂವಿಧಾನ ಶಿಲ್ಪಿಯ ಹೆಸರಿನ ವೃತ್ತ ಅಲ್ಲಿಯೇ ಇದೆ.
ಬೇಡಿಕೆಗಿಲ್ಲ ಕಿಮ್ಮತ್ತು: ಪುತ್ಥಳಿ ಪ್ರತಿಷ್ಠಾಪನೆ, ವೃತ್ತ ನಿರ್ಮಾಣಕ್ಕಾಗಿ ತಾಲೂಕಿನ ಹತ್ತಾರು ದಲಿತಪರ ಸಂಘಟನೆಗಳ ಕಾರ್ಯಕತರು ಹೊರಾಟ ಮಾಡಿದ್ದಾರೆ. ಆದರೆ ಅವರ ಬೇಡಿಕೆಗೆ ಮಾತ್ರ ತಾಲೂಕಾಡಳಿತ ಕಿವಿಗೊಟ್ಟಿಲ್ಲ. ಈ ಬೇಡಿಕೆಯನ್ನು ಪ್ರತಿವರ್ಷ ಅಂಬೇಡ್ಕರ್, ಜಗಜೀವನರಾಂ ಜಯಂತಿಯಂದು ಮಂಡಿಸುವ ಮೂಲಕ ತಾಲೂಕಾಡಳಿತ ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸವನ್ನು ದಲಿತ ಸಂಘಟನೆಗಳು ಚಾಚುತಪ್ಪದೆ ಮಾಡುತ್ತಲೇ ಇವೆ. ಆದರೆ ಕಾರ್ಯಕರ್ತರ ಬೇಡಿಕೆ ಮಾತ್ರ ಕಾರ್ಯರೂಪಕ್ಕೆ ಬರದೆ ಅದು ಧೂಳಿಗೆ ಆಹಾರವಾಗುತ್ತಿದೆ.
ತುಕ್ಕು ಹಿಡಿದಿದೆ: ಈ ಮಧ್ಯೆ ಅಂಬೇಡ್ಕರ್ ವೃತ್ತ ಮತ್ತು ಪುತ್ಥಳಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳದಿದ್ದರೆ ತಾಲೂಕಿನಲ್ಲಿ ಅಂಬೇಡ್ಕರ್, ಜಗಜೀವನರಾಂ ಜಯಂತಿ ಆಚರಿಸಲು ತಾವು ಬಿಡುವುದಿಲ್ಲ ಎಂದು ದಲಿತ ಸಂಘಟನೆಗಳು ಪಟ್ಟುಹಿಡಿದಿದ್ದರಿಂದ ತಾಲೂಕಾಡಳಿತ ಗುರುತಿಸಿದ ಸ್ಥಳದಲ್ಲಿ ಏಪ್ರಿಲ್ 14, 2012ರಂದು ವೃತ್ತ ನಿರ್ಮಾಣಕ್ಕೆ ಅಂದಿನ ಶಾಸಕರಾದಿಯಾಗಿ, ವಿವಿಧ ಮಠಾಧೀಶರ ಸಮ್ಮುಖದಲ್ಲಿ ಅಡಿಗಲ್ಲು ಹಾಕಿಸಲಾಯಿತು. ಅಡಿಗಲ್ಲು ಹಾಕಿದ ನೆನೆಪಿಗಾಗಿ ಅಂದು ನೆಟ್ಟಿರುವ ಕಬ್ಬಿಣದ ಬೋರ್ಡ್ಗೆ ತುಕ್ಕು ಹಿಡಿದಿದೆ. ಅದನ್ನು ಬಿಟ್ಟರೆ ವೃತ್ತ ನಿಮಾರ್ಣಕ್ಕೆ ಸಂಬಂಧಿಸಿದಂತೆ ಒಂದು ಹುಲ್ಲುಕಡ್ಡಿಯಷ್ಟು ಕಾಮಗಾರಿ ಪ್ರಗತಿ ಕಂಡಿಲ್ಲ.
ಇತರೆ ವಿಚಾರಗಳಿಗೆ ನೀಡಿದಷ್ಟು ಪ್ರಾಮುಖ್ಯವನ್ನು ಅಂಬೇಡ್ಕರ್ ವೃತ್ತ ನಿರ್ಮಾಣ, ಪುತ್ಥಳಿ ಪ್ರತಿಷ್ಠಾಪನೆಗೆ ಜನಪ್ರತಿನಿಧಿಗಳು ಆದ್ಯತೆ ನೀಡುತ್ತಿಲ್ಲ. ಇನ್ನು ಇಲ್ಲಿ ತಾಲೂಕು ಆಡಳಿತದ್ದು ಈ ವಿಚಾರದಲ್ಲಿ ಸೋಮಾರಿತನದ ವರ್ತನೆ. ಫಂಡ್ ಬಂದಿಲ್ಲ, ನಾಳೆ ಬರಬಹುದು, ಫಂಡ್ ಬಂದ ಮೇಲೆ ನಾವು ಕೆಲಸ ಆರಂಭಿಸುತ್ತೇವೆಂಬ ಭರವಸೆ ನೀಡುತ್ತಲೇ ಇದೆ.
-ಹುಳ್ಳಿ ಪ್ರಕಾಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

