ಬಳ್ಳಾರಿ

ಟಿಬಿ ಡ್ಯಾಂ ಮೇಲೆ ಸಂಚಾರ ನಿಷೇಧ

Published On :

ಬಳ್ಳಾರಿ: ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆ, ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ತುಂಗಭದ್ರಾ ಜಲಾಶಯ ಅಣೆಕಟ್ಟೆ ಮೇಲೆ (ಕ್ರಸ್ಟ್‌ಗೇಟ್‌ಗಳಿಗೆ ನಿರ್ಮಿಸಿದ ಸ್ಪೀಲ್‌ವೇ) ಸಚಿವರು, ಶಾಸಕರು ಸೇರಿದಂತೆ ಗಣ್ಯರ ವಾಹನಗಳ ಪ್ರವೇಶಕ್ಕೂ ಈಗ ನಿಷೇಧ ಹೇರಲಾಗಿದೆ.
ತುಂಗಭದ್ರಾ ಬೋರ್ಡ್ ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಜಲಾಶಯದ ಅಣೆಕಟ್ಟಿಗೆ ಭದ್ರತೆ ನೀಡುವ ದೃಷ್ಟಿಯಿಂದ ಇಂತಹ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಣೆಕಟ್ಟಿನ ಮೇಲೆ ಸಾರ್ವಜನಿಕ ಸಂಚಾರಕ್ಕೆ ನಿಷೇಧವಿತ್ತು. ಸಚಿವರು, ಗಣ್ಯರು, ಅಧಿಕಾರಿಗಳು, ಗಣ್ಯರ ಶಿಫಾರಸಿನ ಮೇರೆಗೆ ತುಂಗಭದ್ರಾ ಬೋರ್ಡ್‌ನಿಂದ ಪಾಸ್ ಪಡೆದವರು ಇಲ್ಲಿ ಸಂಚರಿಸುವುದು ಸಾಮಾನ್ಯವಾಗಿತ್ತು.

ರಕ್ಷಣೆ ದೃಷ್ಟಿಯಿಂದ ನಿಷೇಧ: ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿರುವುದರಿಂದ ಮತ್ತು ಭಯೋತ್ಪಾದಕರು ದೇಶದ ಪ್ರಮುಖ ಅಣೆಕಟ್ಟುಗಳ ಮೇಲೆ ಕಣ್ಣಿಟ್ಟಿರುವ ಮಾಹಿತಿ ಇರುವುದರಿಂದ ಎಚ್ಚೆತ್ತ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. 60 ವರ್ಷಗಳಷ್ಟು ಹಳೆಯದಾದ ಜಲಾಶಯದ ರಕ್ಷಣೆ ಅಗತ್ಯವಾಗಿದೆ. ಇನ್ನು ಜಲಾಶಯದ ಕ್ರಸ್ಟ್‌ಗೇಟ್‌ಗೆ ನಿರ್ಮಿಸಿರುವ ಸ್ಪೀಲ್ ವೇ ರಕ್ಷಣೆ ಜತೆಗೆ ಜಲಾಶಯದ ರಕ್ಷಣೆ ದೃಷ್ಟಿಯಿಂದ ಸೇತುವೆ ಮೇಲೆ ಸಾರ್ವಜನಿಕರ ಸಂಚಾರಕ್ಕೆ ಹಲವು ವರ್ಷಗಳ ಹಿಂದೆಯೇ ನಿಷೇಧ ಹೇರಲಾಗಿತ್ತು. ಬೋರ್ಡ್‌ನಿಂದ, ಹಿರಿಯ ಅಧಿಕಾರಿಗಳು, ಶಾಸಕರು ಪಾಸ್ ನೀಡುವ ಮೂಲಕ ಅಣೆಕಟ್ಟಿನ ಮೇಲೆ ಸ್ಪೀಲ್ ವೇನಲ್ಲಿ ವಾಹನಗಳ ಸಂಚಾರವಿತ್ತು. ಆದರೆ, ಇದೀಗ ಅದಕ್ಕೂ ಬ್ರೇಕ್ ಬಿದ್ದಿದೆ.

ಹಲವು ಕಾರಣಕ್ಕೆ ನಿಷೇಧ: ಅಣೆಕಟ್ಟಿನ ಮೇಲೆ 20 ಕಿ.ಮೀ. ವೇಗದ ಸಂಚಾರ ಮಿತಿ ಇದೆ. ಆದರೆ ಅದು ಪಾಲನೆಯಾಗದಿರುವುದು, ಅಣೆಕಟ್ಟು ಶಿಥಿಲಾವಸ್ಥೆಗೆ ಹೋಗಬಾರದು ಎನ್ನುವ ಕಾರಣಕ್ಕೆ ಸಂಚಾರ ನಿಷೇಧಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪಾಸ್ ಪಡೆದು ಸಂಚರಿಸುವ ಎಲ್ಲರನ್ನೂ ಅಲ್ಲಿನ ಭದ್ರತಾ ಸಿಬ್ಬಂದಿಯು ಪರಿಶೀಲನೆ ನಡೆಸಿ, ಸಂಚಾರಕ್ಕೆ ಬಿಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಪರಿಶೀಲನೆ ಮಾಡಲು ಮುಂದಾದರೆ, ಗಣ್ಯರನ್ನೇ ಪರಿಶೀಲನೆ ಮಾಡುತ್ತಾರಾ? ಎಂಬ ಉದ್ಗಾರ ತೆಗೆಯುತ್ತಿದ್ದರು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಇದೀಗ ಪ್ರತಿಯೊಬ್ಬರಿಗೂ ಸಂಚಾರ ನಿಷೇಧ ಮಾಡಲಾಗಿದೆ.

ಭದ್ರತಾ ಸಿಬ್ಬಂದಿಗೆ ಕಿರಿ ಕಿರಿ: ತುಂಗಭದ್ರಾ ಜಲಾಶಯ ನೋಡಲು ಬಂದ ಪ್ರವಾಸಿಗರಿಗೆ ಅದರಲ್ಲೂ ಅನ್ಯ ಊರುಗಳಿಂದ ಬರುವ ಹಿರಿಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಶಾಸಕರಿಗೆ ಸೇರಿದಂತೆ ಇತರ ಗಣ್ಯರು ಹಾಗೂ ಅವರ ಕುಟುಂಬದವರು, ಆಪ್ತರು ಬಂದರೆ ಅವರೆಲ್ಲರನ್ನು ಚೆಕ್ ಮಾಡುವುದು ಅಲ್ಲಿನ ಪೊಲೀಸರಿಗೆ ಕಷ್ಟ. ಈ ಸಂದರ್ಭದಲ್ಲಿ ಪರಿಶೀಲನೆ ನಡೆಸಿದರೂ ಅವರು ಕೆಂಗಣ್ಣು ಬೀರುತ್ತಿದ್ದರು. ಇದರಿಂದಾಗಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ತೀವ್ರ ಕಿರಿಕಿರಿಯಾಗಿತ್ತು. ಇದೀಗ ಟಿ.ಬಿ. ಬೋರ್ಡ್, ಪೊಲೀಸ್ ಇಲಾಖೆ ಮೇಲಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದರಿಂದ ಅಣೆಕಟ್ಟಿನ ಮೇಲಿನ ಸಂಚಾರ ನಿಷೇಧಿಸಿದೆ. ಇದರಿಂದ ಯಾರೊಬ್ಬರನ್ನು ಅಲ್ಲಿನ ಸಿಬ್ಬಂದಿ ಬಿಡುತ್ತಿಲ್ಲ. ಆ ಮೂಲಕ ಜಲಾಶಯಕ್ಕೆ ತೀವ್ರ ಭದ್ರತೆ ಒದಗಿಸಲಾಗಿದೆ.
ಅಧಿಕಾರಿಗಳ ಪರಿಶೀಲನೆಗೆ ಅವಕಾಶ: ಜಲಾಶಯ ನೋಡಲು ಬಂದ ಕೆಲ ಪ್ರವಾಸಿಗರು ತಮ್ಮ ಪ್ರಭಾವ ಬಳಸಿ ಅಣೆಕಟ್ಟಿನ ಮೇಲೆ ಹೋಗಲು ಬೋರ್ಡ್ ಅಧಿಕಾರಿಗಳಿಂದ ಪಾಸ್ ತರುತ್ತಿದ್ದರು. ಅವರ್ಯಾರು ಎಂಬುದು ಭದ್ರತಾ ಸಿಬ್ಬಂದಿಗೆ ತಿಳಿಯುತ್ತಿರಲಿಲ್ಲ. ಆದರೆ ಬೋರ್ಡ್ ಪಾಸ್ ನೀಡುವುದರಿಂದ ಬಿಡಲಾಗುತ್ತಿತ್ತು. ಇಂತಹ ಪಾಸ್‌ಗೆ ಇದೀಗ ಬೋರ್ಡ್ ಕೂಡ ಕಡಿವಾಣ ಹಾಕಿದೆ. ಯಾರೊಬ್ಬರಿಗೂ ಪಾಸ್ ನೀಡಬಾರದು ಎಂದು ನಿರ್ಧರಿಸಿದೆ. ಬೋರ್ಡ್ ಅಧಿಕಾರಿಗಳು, ಎಂಜಿನಿಯರ್‌ಗಳು ಅಣೆಕಟ್ಟಿನ ಪರಿಶೀಲನೆ, ಕ್ರಸ್ಟ್‌ಗೇಟ್‌ಗಳನ್ನು ತೆಗೆಯುವುದು, ದುರಸ್ತಿ ಸೇರಿದಂತೆ ಇತರ ವಿಷಯಗಳಿಗೆ ಮಾತ್ರ ಹೋಗಲು ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಅಲ್ಲಿ ಯಾರಿಗೂ ಸಂಚಾರಕ್ಕೆ, ಜಲಾಶಯ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಅಲ್ಲದೇ ವಿವಿಧ ಇಲಾಖೆ ಅಧಿಕಾರಿಗಳಿಗೂ ಅಲ್ಲಿ ನಿಷೇಧವಿದೆ ಎಂದು ಬೋರ್ಡ್ ಮೂಲಗಳು ತಿಳಿಸಿವೆ.
- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.