ಅಕ್ರಮ ಮದ್ಯ ಮಾರಾಟ: 2 ಬಂಧನ
ಬಳ್ಳಾರಿ: ತಾಲೂಕಿನ ಕೊಳಗಲ್ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ, ರು. 11,414 ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಕೊಳಗಲ್ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬಳ್ಳಾರಿ ಗ್ರಾಮೀಣ ಪಿಎಸ್ಐ ಹೊಸಕೇರಪ್ಪ ಹಾಗೂ ಸಿಬ್ಬಂದಿ ದಾಳಿ ಮಾಡಿ, ಹೊನ್ನೂರಪ್ಪ, ಅಂಜಿನಪ್ಪ ಎನ್ನುವವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ನಾಲ್ಕು ಬಾಕ್ಸ್ಗಳಲ್ಲಿದ್ದ ರು. 11,414 ಮೌಲ್ಯದ 244 ಮದ್ಯದ ಬಾಟಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಿಧೆಡೆ ಮಟ್ಕಾ ಜೂಜಾಟ: 6 ಬಂಧನ
ಬಳ್ಳಾರಿ: ಮಟ್ಕಾ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿ, ಅವರಿಂದ ರು. 5870 ವಶಪಡಿಸಿಕೊಂಡಿರುವ ಘಟನೆ ಬಳ್ಳಾರಿ-ಅನಂತಪುರ ರಸ್ತೆಯಲ್ಲಿ ನಡೆದಿದೆ. ಮಂಗಳವಾರ ಸಂಜೆ ಬಳ್ಳಾರಿ-ಅನಂತಪುರ ರಸ್ತೆಯ ಬೈಪಾಸ್ ಸಮೀಪದಲ್ಲಿ ಮಟಕಾ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸರು ದಾಳಿ ಮಾಡಿ, ಬಿ. ಚಂದ್ರಶೇಖರ, ಎಂ. ರಾಜ, ಕೆ. ರಾಜ ಅವರನ್ನು ಬಂಧಿಸಿ, ಅವರಿಂದ ರು. 5,870 ವಶಪಡಿಸಿಕೊಂಡಿದ್ದಾರೆ.
ಸಿದ್ಧಾರ್ಥ ನಗರ: ಇದೇವೇಳೆ, ಸಿದ್ಧಾರ್ಥ ನಗರದಲ್ಲಿ ಮಟ್ಕಾ ಜೂಜಾಟ ಅಡ್ಡೆ ಮೇಲೆ ಮಂಗಳವಾರ ಬಳ್ಳಾರಿ ಗ್ರಾಮೀಣ ಪೊಲೀಸರು ದಾಳಿ ಮಾಡಿ 3 ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ರು. 49,320ಗಳನ್ನು ಜಫ್ತಿ ಮಾಡಿದ್ದಾರೆ.
ಮಟ್ಕಾ ಜೂಜಾಟ ಆಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಕೆ. ಹೊಸಕೇರಪ್ಪ ದಾಳಿ ಮಾಡಿ ಬಿ. ಮಹೇಶ್, ವೀರೇಶ್, ವೆಂಕಟರಾಮರೆಡ್ಡಿ ಅವರನ್ನು ಬಂಧಿಸಿ, ಅವರಿಂದ ರು. 49,320 ವಶಪಡಿಸಿಕೊಂಡಿದ್ದಾರೆ. ಈ ಕುರಿತಾಗಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಸಿಡಿ ಮಾರಾಟ: ಇಬ್ಬರ ಬಂಧನ
ಬಳ್ಳಾರಿ: ನಕಲಿ ಸಿಡಿ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಅವರಿಂದ 3 ಸಿಪಿಯು, ನಗದು ಸೇರಿದಂತೆ ಒಟ್ಟು ರು. 1.05 ಲಕ್ಷ ವಶಪಡಿಸಿಕೊಂಡ ಘಟನೆ ಹೊಸಪೇಟೆ ಸಿಟಿ ಕಾಟನ್ ಬಜಾರ್ನ ಮಳಿಗೆಯೊಂದರಲ್ಲಿ ನಡೆದಿದೆ. ದಾಳಿ ವೇಳೆ ಕನ್ನಡ, ತೆಲುಗು, ಹಿಂದಿ, ತಮಿಳು ಭಾಷೆಗಳ ವಿವಿಧ ಸಿನಿಮಾಗಳ ಲೇಬಲ್ ಇರುವ 6050 ಸಿಡಿಗಳನ್ನು, ಸಿಪಿಯು, ರು. 1955 ನಗದು, 2 ಮೊಬೈಲ್ ಸೇರಿದಂತೆ ಒಟ್ಟು ರು. 1.05 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಜೂಜಾಟ: ಇಬ್ಬರ ಬಂಧನ
ಕೂಡ್ಲಿಗಿ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜಿಗೇನಹಳ್ಳಿ ಗ್ರಾಮ ಸಹಿಪ್ರಾ ಶಾಲೆ ಆವರಣದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದು, ಇನ್ನು ಕೆಲವರು ಪರಾರಿಯಾಗಿದ್ದಾರೆ.
ಗ್ರಾಮದ ಲೋಕೇಶ್, ಎರ್ರಿಸ್ವಾಮಿ ಬಂಧಿತರಾಗಿದ್ದು, ರು. 1100 ನಗದು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಿಎಸ್ಐ ನವೀನ್ಗೌಡ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದ್ದಾರೆ. ಗುಡೇಕೋಟೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕೊಲೆ ಆರೋಪಿಗಳಿಗೆ 2 ವರ್ಷ ಶಿಕ್ಷೆ
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಹಾಳೂರು ಸುಂಕಣ್ಣ ಎಂಬಾತನನ್ನು ಕೊಲೆ ಮಾಡಿದ ಅಪರಾಧದ ಮೇಲೆ ಅದೇ ಗ್ರಾಮದ ಮೂವರಿಗೆ ಜಿಲ್ಲಾ ಪ್ರಧಾನ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ 2 ವರ್ಷ ಕಠಿಣ ಶಿಕ್ಷೆ ರು. 10 ಸಾವಿರ ದಂಡ ವಿಧಿಸಿ ಅ. 7ರಂದು ತೀರ್ಪು ನೀಡಿದ್ದಾರೆ. ಉಪ್ಪಳದೊಡ್ಡಿ ಹುಲುಗಪ್ಪ, ಉಪ್ಪಳದೊಡ್ಡಿ ಪಾಂಡು ಹಾಗೂ ಉಪ್ಪಳದೊಡ್ಡಿ ಸುಂಕಣ್ಣ ಅವರುಗಳೇ ಶಿಕ್ಷೆಗೊಳಗಾದ ಅಪರಾಧಿಗಳು. ಉಪ್ಪಳದೊಡ್ಡಿ ಹುಲುಗಪ್ಪ, ಉಪ್ಪಳದೊಡ್ಡಿ ಪಾಂಡು, ಉಪ್ಪಳದೊಡ್ಡಿ ಸುಂಕಣ್ಣ ಹಾಗೂ ಉಪ್ಪಳದೊಡ್ಡಿ ಮಲ್ಲಮ್ಮ ಎನ್ನುವವರು 2010ರ ಆ. 8ರಂದು ನಾಗರ ಪಂಚಮಿ ಪ್ರಯುಕ್ತ ತೆಕ್ಕಲಕೋಟೆ ಪಟ್ಟಣದ ಹುಲಿಗೆಮ್ಮ ದೇವಸ್ಥಾನದ ಮುಂದೆ ಆಟವಾಡುತ್ತಾ ಗಲಾಟೆ ಮಾಡುತ್ತಿದ್ದರು. ಅಲ್ಲಿಯೇ ಮಲಗಿದ್ದ ಹಾಳೂರು ಸುಂಕಣ್ಣ ಎಂಬುವನು ಎಚ್ಚರಗೊಂಡು ಗಲಾಟೆ ಮಾಡಬೇಡಿ ಎಂದು ಅವರಿಗೆ ಬುದ್ಧಿವಾದ ಹೇಳಿದ್ದಕ್ಕೆ ನಾಲ್ವರೂ ಸೇರಿ ಅವನ ಕೂದಲು ಹಿಡಿದು ಎಳೆದಾಡಿದ್ದರಿಂದ ತೀವ್ರ ಗಾಯಗಳಾಗಿ ಮೃತಪಟ್ಟಿದ್ದಾನೆ ಎಂದು ಸಾಕ್ಷ್ಯಾಧಾರಗಳಿಂದ ರುಜುವಾತಾಗಿದೆ.
ತೆಕ್ಕಲಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪೂರೈಸಿ ಆಪಾದನಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಅಂಜಲಿದೇವಿ ವಾದ ಮಂಡಿಸಿದ್ದರು.
ಮಟ್ಕಾ ಬುಕ್ಕಿ ಬಂಧನ
ಕೂಡ್ಲಿಗಿ: ತಾಲೂಕಿನ ಚಿಕ್ಕಜೋಗಿಹಳ್ಳಿ ಕೆಇಬಿ ಸರ್ಕಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಹನುಮಂತಪ್ಪ ಎಂಬಾತನನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿ, ರು. 2,530 ನಗದು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಹೊಸಹಳ್ಳಿ ಪಿಎಸ್ಐ ರಘುನಾಥ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಮಾರಾಟ: ಬಂಧನ
ಕೂಡ್ಲಿಗಿ: ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಗರಿಬೊಮ್ಮನಹಳ್ಳಿ ತಾಲೂಕು ಹನಸಿ ಗ್ರಾಮದ ಗ್ರಾಪಂ ಕಚೇರಿ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕೆ. ರಮೇಶ ಎಂಬಾತನನ್ನು ಬಂಧಿಸಿ, ರು. 4254 ಮೌಲ್ಯದ ರಾಯಲ್ ವಿಸ್ಕಿಯ 96 ಬಾಟಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೂಡ್ಲಿಗಿ ಪಿಎಸ್ಐ ಕೃಷ್ಣನಾಯ್ಕ ನೇತೃತ್ವದಲ್ಲಿ ದಾಳಿ ನಡೆದಿದೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: ವ್ಯಕ್ತಿ ಬಂಧನ
ಕೂಡ್ಲಿಗಿ: ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹೊಸಕೆರೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಸೋಮಶೇಖರನನ್ನು ಬಂಧಿಸಿ, ಆತನಿಂದ ರು. 1560 ನಗದು ಮತ್ತು 1 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕೂಡ್ಲಿಗಿ ಪಿಎಸ್ಐ ಕೃಷ್ಣನಾಯ್ಕ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

