ಎರಡು ಬಾರಿ ಜನನ, ಮರಣ ನೋಂದಣಿ ಬೇಡ
ಬಳ್ಳಾರಿ: ಜನನ ಮತ್ತು ಮರಣ ನೋಂದಣಿ ಪುನರಾವರ್ತನೆಯಾಗದಂತೆ ನಿಗಾವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ನೋಂದಣಾಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ನಾಗರಿಕ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2011ರ ಮಾದರಿ ನೋಂದಣಿ ಪ್ರಕಾರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸಾವಿರ ಜನಸಂಖ್ಯೆಗೆ ವರ್ಷಕ್ಕೆ ಜನನ ಪ್ರಮಾಣ 20.2 ಹಾಗೂ ಮರಣ ಪ್ರಮಾಣ 8.1 ಇದೆ. ಪಟ್ಟಣ ಪ್ರದೇಶದಲ್ಲಿ 1,000 ಜನಸಂಖ್ಯೆಗೆ ಜನನ ಪ್ರಮಾಣ 17.5 ಇದ್ದು, ಮರಣ ಪ್ರಮಾಣ 5.4 ಆಗಿದೆ ಎಂದರು.
ಜಿಲ್ಲೆಯಲ್ಲಿ 25 ಲಕ್ಷ ಜನಸಂಖ್ಯೆಯಿದ್ದು, 2012ರಲ್ಲಿ ಜನನ ನೋಂದಣಿ 59,876 ಆಗಿದ್ದು, ಮೇಲ್ನೋಟಕ್ಕೆ ಪೂರ್ಣ ಪ್ರಮಾಣದಲ್ಲಿ ನೋಂದಣಿಯಾಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಶೇ. 10ರಷ್ಟು ಎರಡೆರಡು ನೋಂದಣಿಯಾಗಿದೆ. ಮನೆಯಲ್ಲಿ ಜನನವಾದ ಕುರಿತು ಪೂರ್ಣ ಮನವರಿಕೆಯಾದ ನಂತರ ಗ್ರಾಮ ಲೆಕ್ಕಿಗರು ನೋಂದಣಿ ಮಾಡಬೇಕು. ಆಸ್ಪತ್ರೆಯಲ್ಲಿ ಜನನ ಮತ್ತು ಮರಣಗಳು ಆದಾಗ ಡಿಸ್ಚಾರ್ಜ್ ಪತ್ರದೊಂದಿಗೆ ಪ್ರಮಾಣಪತ್ರ ನೀಡಿದಲ್ಲಿ ಪುನರಾವರ್ತನೆ ನೋಂದಣಿ ಪ್ರಕರಣಗಳು ಮರುಕಳಿಸುವುದಿಲ್ಲ. ಜನನ, ಮರಣ ನೋಂದಣಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಎಲ್ಲ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು.
ನಾಗರಿಕ ನೋಂದಣಿ ಪದ್ಧತಿಯಡಿ ಜಿಲ್ಲೆಯ 7 ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ 524 ನೋಂದಣಿ ಘಟಕ ಮತ್ತು 60 ಉಪ ನೋಂದಣಿ ಘಟಕಗಳು ಹಾಗೂ ಪಟ್ಟಣ ಪ್ರದೇಶದಲ್ಲಿ 14 ನೋಂದಣಿ ಘಟಕ ಮತ್ತು 27 ಉಪ ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮಲೆಕ್ಕಿಗರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಪಟ್ಟಣ ಪ್ರದೇಶದಲ್ಲಿ ಆರೋಗ್ಯ ಅಧಿಕಾರಿ, ಆರೋಗ್ಯ ನಿರೀಕ್ಷಕರು, ಮುಖ್ಯಾಧಿಕಾರಿಗಳು ಮತ್ತು ಸರ್ಕಾರಿ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿಗಳು ನೋಂದಣಿ ಕಾರ್ಯನಿರ್ವಹಿಸುತ್ತಾರೆ. ಜನನ, ಮರಣ ಘಟನೆಯ 21 ದಿನಗಳೊಳಗಾಗಿ ಉಚಿತವಾಗಿ ನೋಂದಣಿ ಮಾಡಿ ಸಂಬಂಧಿಸಿದವರಿಗೆ ಉಚಿತ ಪ್ರಮಾಣ ಪತ್ರ ನೀಡಬೇಕು ಎಂದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎಸ್.ಎಸ್. ಮಠಪತಿ ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತ ಚಿಕ್ಕಣ್ಣ, ಡಿಎಚ್ಒ ಡಾ. ಮಾಧವರಾವ್ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ, ಸಿರುಗುಪ್ಪ, ಕಂಪ್ಲಿ, ಸಂಡೂರು, ಕೊಟ್ಟೂರು, ಹೂವಿನಹಡಗಲಿ ಪುರಸಭೆಗಳ ಹಾಗೂ ತೆಕ್ಕಲಕೋಟೆ, ಕೂಡ್ಲಿಗಿ, ಕಮಲಾಪುರ ಪಪಂ ಮುಖ್ಯಾಧಿಕಾರಿಗಳು, ಮುನಿಸಿಪಲ್ ತಹಸೀಲ್ದಾರರು, ವಿಮ್ಸ್ನ ನಿವಾಸಿ ವೈದ್ಯಾಧಿಕಾರಿಗಳು, ಟಿ.ಬಿ. ಆಸ್ಪತ್ರೆ ಅಧೀಕ್ಷಕರು, ತಹಸೀಲ್ದಾರ್ ಶರಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

