ಬಳ್ಳಾರಿ

ವಾಲ್ಮೀಕಿ ಜನಪ್ರತಿನಿಧಿಗಳಿಂದಲೇ ಜನಾಂಗದ ಶೋಷಣೆ

Published On :

ಕೊಟ್ಟೂರು: ವಾಲ್ಮೀಕಿ ಜನಾಂಗದ ಕೋಟಾದಡಿ ಜನಪ್ರತಿನಿಧಿಗಳಾದವರು ಜನಾಂಗದ ಏಳಿಗೆಗೆ ಶ್ರಮಿಸದೆ ಸ್ವಾರ್ಥಿಗಳಾಗುತ್ತಿರುವ ಕಾರಣಕ್ಕಾಗಿ ಜನಾಂಗದ ಸಾಮಾನ್ಯ ಜನ ಇದುವರೆಗೂ ಅಭಿವೃದ್ಧಿಯಾಗಿಲ್ಲ. ವಾಲ್ಮೀಕಿ ಜನಾಂಗದವರಿಗೆ ಹೊರಗಿನವರಿಗಿಂತ ಸ್ವಜಾತಿಯ ಅಧಿಕಾರಸ್ತರೆ ಶೋಷಣೆ ಮಾಡತೊಡಗಿರುವುದು ದೊಡ್ಡ ದುರಂತ ಎಂದು ಉಪನ್ಯಾಸಕ ಗೋವಿಂದಪ್ಪ ವಿಷಾದಿಸಿದರು.
ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಸಮಾಜದ ಏಳಿಗೆಗಾಗಿ ಸ್ಥಾಪನೆಗೊಂಡ ರಾಜನಹಳ್ಳಿ ಪೀಠದ ಅಭಿವೃದ್ಧಿಗೆ ಜನಾಂಗದ ಜನಪ್ರತಿನಿಧಿಗಳು ಅಷ್ಟಾಗಿ ತೊಡಗಿಸಿಕೊಂಡಿಲ್ಲದಿರುವುದು ಇವರ ಇಚ್ಛಾಶಕ್ತಿಯ ಕೊರತೆಯನ್ನು ತೋರುತ್ತದೆ. ಬೇರೆ ಜನಾಂಗದ ಪೀಠ ಮತ್ತು ಮಠಗಳು ಹಲವಾರು ರೀತಿಯಲ್ಲಿ ಅಭಿವೃದ್ಧಿಗೊಂಡಿವೆ. ಈ ಮಾದರಿಯಲ್ಲೇ ರಾಜನಹಳ್ಳಿ ಪೀಠ ಅಭಿವೃದ್ಧಿಗೊಳ್ಳುವಂತಾಗಲು ಈಗಲಾದರೂ ಜನಾಂಗದ ಜನಪ್ರತಿನಿಧಿಗಳು ಕೈಜೋಡಿಸಬೇಕು. ಇಲ್ಲದಿದ್ದರೆ ಜನಾಂಗದವರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಾಗೃತಿ ಕೇಂದ್ರ: ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಎಂ.ಎಂ.ಜೆ. ಹರ್ಷವರ್ಧನ್, ಕೊಟ್ಟೂರು ಸರ್ವಧರ್ಮ ಸಹಿಷ್ಣುತೆಯನ್ನು ಸದಾ ಕಾಪಾಡಿಕೊಂಡ ಜಾಗೃತಿ ಕೇಂದ್ರ. ಯಾವುದೇ ಜಾತಿ ವೈಷಮ್ಯವಿಲ್ಲದೆ ಸಾಮರಸ್ಯದ ಬದುಕನ್ನು ಪ್ರತಿಯೊಬ್ಬರೂ ಸಾಗಿಸುವ ಮೂಲಕ ಅವರವರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಬಗೆಯ ಪರಂಪರೆ ನಿರಂತರವಾಗಿರಬೇಕು ಎಂದರು.
ಹಾರಕಬಾವಿಯ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೋವಿ ನಾಗರಾಜ ಅಧ್ಯಕ್ಷತೆವಹಿಸಿದ್ದರು. ಪಪಂ ಅಧ್ಯಕ್ಷೆ ಅನಸೂಯಾ ಸೆರೆಗಾರ, ಸದಸ್ಯರಾದ ಸುಮ್ಮಕ್ಕ ದುರುಗಪ್ಪ, ಚಿರಿಬಿ ಕೊಟ್ರೇಶ್, ಪೂಜಾರ್ ನಾಗಪ್ಪ, ಪ್ರಭುದೇವ, ಸುಮಾ ಮಂಜುನಾಥಗೌಡ, ಸೋಡಾ ಗುರುಬಸವರಾಜ್, ಕರವೇ ಅಧ್ಯಕ್ಷ ತೋಟದ ರಾಮಣ್ಣ, ಉಪನ್ಯಾಸಕ ಬಿ. ಸೋಮಣ್ಣ, ನಿಜಲಿಂಗ ನಾಯಕ, ಅಂಜಿನಪ್ಪ, ಫಕ್ಕೀರಪ್ಪ, ವೆಂಕಟೇಶ, ಟಿ. ರಾಮಪ್ಪ, ಉಪಾಧ್ಯಕ್ಷ ಬೆಣ್ಣಿಹಳ್ಳಿ ಅಂಜಿನಪ್ಪ, ಕಾರ್ಯದರ್ಶಿ ಎಚ್. ಫಕ್ಕೀರಪ್ಪ, ಸಹ ಕಾರ್ಯದರ್ಶಿ ಎಸ್. ವೆಂಕಟೇಶ್, ಎಂ. ಪ್ರಕಾಶ್, ಕೆ. ರಾಜಪ್ಪ, ಯು. ದೇವೇಂದ್ರಪ್ಪ, ಹುಚ್ಚಪ್ಪ, ಪಪಂ ಮುಖ್ಯಾಧಿಕಾರಿ ಹನುಮಂತಮ್ಮ, ಕೆ.ಎಸ್. ವಿವೇಕಾನಂದಗೌಡ ಮತ್ತಿತರರು ಪಾಲ್ಗೊಂಡಿದ್ದರು. ಕೆಂಚಪ್ಪ, ಮಲ್ಲಿಕಾರ್ಜುನ ಸ್ವಾಗತಿಸಿದರು.
ಅದ್ಧೂರಿ ಮೆರವಣಿಗೆ: ತೆರೆದ ವಾಹನದಲ್ಲಿ ವಾಲ್ಮೀಕಿ ಮಹರ್ಷಿಯ ಭಾವಚಿತ್ರದ ಅದ್ಧೂರಿ ಮೆರವಣಿಗೆ ಪಟ್ಟಣದಲ್ಲಿ ನಡೆಯಿತು. ವಾಲ್ಮೀಕಿ ದೇವಸ್ಥಾನದಿಂದ ಹೊರಟ ಬೃಹತ್ ಮೆರವಣಿಗೆ ಸಂಜೆಯವರೆಗೂ ಸಾಗಿತು. ಯುವಕರು ನೃತ್ಯಮಾಡಿದರೆ, ಮಹಿಳೆಯರು ಕಳಸಗಳನ್ನು ಹಿಡಿದು ಸಾಗಿದರು. ಮೆರವಣಿಗೆಯಲ್ಲಿ ವಾಲ್ಮೀಕಿ ಸಂಘದ ಪದಾಧಿಕಾರಿಗಳು, ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.