ಇಂದು ಜೋಡಿ ರಥೋತ್ಸವ
ಸಿ.ಕೆ. ನಾಗರಾಜ್
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 7
ಸುಮಾರು ಆರು ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀಆಂಜನೇಯ ಸ್ವಾಮಿಯ ಅಪರೂಪದ ಜೋಡಿ ರಥೋತ್ಸವವು ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಏ. 8ರಂದು ಮಂಗಳವಾರ ಸಂಜೆ ನಡೆಯಲಿದೆ.
ಪ್ರತಿವರ್ಷ ರಾಮನವಮಿ ದಿನ ಶ್ರೀಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ಜೋಡಿ ರಥೋತ್ಸವದ ಕಾರ್ಯಕ್ರಮಗಳು ಜರುಗಲಿದ್ದು, ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಿಂದ ಗಂಗೂರ್ ಮನೆತನದ ಆಗಮ ಪಂಡಿತರು ಯುಗಾದಿ ಮುನ್ನಾ ದಿನವೇ ಮರಿಯಮ್ಮನಹಳ್ಳಿಗೆ ಬಂದು ರಥೋತ್ಸವದ ಪೂಜಾ ವಿಧಾನಗಳಿಗೆ ಎಲ್ಲ ವ್ಯವಸ್ಥೆ ಮಾಡಿಕೊಂಡು ಯುಗಾದಿಯಿಂದ 9 ದಿನಗಳ ಕಾಲ ನಿತ್ಯವೂ ವಿಶೇಷ ಪೂಜೆ ಹಾಗೂ ಧಾರ್ಮಿಕ ಆಚರಣೆಗಳನ್ನು ನಡೆಸುವರು.
ಜೋಡಿ ರಥೋತ್ಸವದ ಕಾರ್ಯಗಳು ಯುಗಾದಿಯಂದು ಪ್ರಾರಂಭವಾಗಿ ಚೈತ್ರಶುದ್ಧ ದ್ವಾದಶಿವರೆಗೆ ಹೋಮ ಮತ್ತು ಬಲಿ ಕಾರ್ಯಗಳು ಹಾಗೂ ಸಿಂಹವಾಹನ, ನವಿಲುವಾಹನ, ಸರ್ಪವಾಹನ, ಕುದುರೆ ವಾಹನ ಉತ್ಸವಗಳೊಂದಿಗೆ ಧಾರ್ಮಿಕ ಕಾರ್ಯಕ್ರಮ, ಹನುಮಂತೋತ್ಸವ (ದೇವರ ನಿಶ್ಚಿತಾರ್ಥ), ಗರುಡೋತ್ಸವ (ದೇವರ ಲಗ್ನ), ಬಿಳಿ ಆನೆ ಉತ್ಸವದ ನಂತರ ರಥೋತ್ಸವ ನಡೆಯಲಿದೆ.
ಹಿನ್ನೆಲೆ: ವಿಜಯನಗರದ ಅರಸರ ಆಳ್ವಿಕೆಗೂ ಪೂರ್ವ ಮಧ್ವಾಚಾರ್ಯರ ಶಿಷ್ಯರಾಗಿದ್ದ ನರಹರಿ ತೀರ್ಥರು ಹಂಪಿಯಲ್ಲಿ ಮಧ್ವಾಚಾರ್ಯರ ಆಶ್ರಮದಲ್ಲಿ ವಾಸವಾಗಿದ್ದರು. ಅವರಿಗೆ ಒಮ್ಮೆ ಸ್ವಪ್ನದಲ್ಲಿ ಗೊಲ್ಲರಹಳ್ಳಿ ಕೆರೆಯಲ್ಲಿ ಅಗಸರು ಬೆಟ್ಟೆ ಒಗೆಯುವ ಕಲ್ಲುಗಳೇ ಭೂ ನಾರಾಯಣ ಸ್ವಾಮಿಯ ವಿಗ್ರಹಗಳೆಂದು ಅವುಗಳನ್ನು ಪ್ರತಿಷ್ಠಾಪಿಸಬೇಕೆಂದು ಕನಸಿನಲ್ಲಿ ಹೇಳಿದ್ದರು ಎಂಬ ಮಾತಿದೆ. ನಂತರ ನರಹರಿ ತೀರ್ಥರು ಕೆರೆಯಲ್ಲಿನ ಭೂ ನಾರಾಯಣಸ್ವಾಮಿಯ ವಿಗ್ರಹಗಳನ್ನು ಎತ್ತಿಕೊಂಡು ಬಂದು ಕೆರೆ ದಂಡೆಯ ಮೇಲಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಟ್ಟು ಪೂಜಿಸ ತೊಡಗಿದರು.
ಆಚರಣೆ: ತುಂಗಭದ್ರಾ ಜಲಾಶಯ ನಿರ್ಮಾಣದ ನಂತರ ನಾರಾಯಣ ದೇವರ ಕೆರೆಯಲ್ಲಿದ್ದ ದೇವರ ಮೂರ್ತಿಗಳನ್ನು ತಂದು ಮರಿಯಮ್ಮನಹಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಮರಿಯಮ್ಮನಹಳ್ಳಿಯಲ್ಲಿ ಪ್ರತಿ ವರ್ಷವೂ ರಾಮನವಮಿ ದಿನ ಜೋಡಿ ರಥೋತ್ಸ ಆಚರಿಸಿಕೊಂಡು ಬರಲಾಗುತ್ತಿದೆ.
ದೇವರ ಲಗ್ನ: ಷಷ್ಠಿಯ ದಿನ ರಾತ್ರಿ ದೇವರ ಲಗ್ನದ ನಿಶ್ಚಿತಾರ್ಥವಿರುತ್ತದೆ. ಪುಷ್ಟಿ, ಸಪ್ತಮಿ ಉತ್ಸವಗಳಲ್ಲಿ ಭಕ್ತಾದಿಗಳು ಕೊಟ್ಟ, ರಾಜ, ಮಹಾರಾಜರು ಕೊಟ್ಟ ಬಂಗಾರದ ಆಭರಣ, ಟಿಪ್ಪು ಸುಲ್ತಾನ್ ನೀಡಿದ ವಜ್ರದ ಮೂರು ಕಿರೀಟಗಳನ್ನು ದೇವರ ವಿಗ್ರಹಗಳಿಗೆ ತೊಡಸಿ ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗುತ್ತದೆ. ಮರುದಿನ ಸಪ್ತಮಿ ರಾತ್ರಿ ಶ್ರೀರಾಮಚಂದ್ರ, ಸೀತಾ ಮಾತೆಗೂ ಲಗ್ನ ನಡೆಯುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

