ಸಚಿವರ ತವರಲ್ಲಿ ಕಾರ್ಮಿಕರಿಗಿಲ್ಲ ರಕ್ಷಣೆ
ಕಾರ್ಮಿಕರಿಗೆ ಖಾಸಗಿ ಕೈಗಾರಿಕೆಗಳಲ್ಲಿ ಸುರಕ್ಷಿತ ಕ್ರಮಗಳಿಲ್ಲ ಎನ್ನುವ ಮಾತುಗಳಿವೆ. ಆದರೆ ಸರ್ಕಾರಿ ಸ್ವಾಮ್ಯದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಸೇಫ್ಟಿ ಮೇಜರ್ ಇಲ್ಲವೆ ಇಲ್ಲ. ಅಲ್ಲಿ ಕಾರ್ಮಿಕರ ಆರೋಗ್ಯಕ್ಕೆ ಬೆಲೆಯೆ ಇಲ್ಲದಂತಾಗಿದೆ. ಕಾರ್ಮಿಕ ಸಚಿವರ ಜಿಲ್ಲೆಯಲ್ಲಿಯೆ ಕಾರ್ಮಿಕರ ಶೋಷಣೆ ನಡೆಯುತ್ತಿದೆ.
ರಾಜ್ಯದ ವಿದ್ಯುತ್ ಉತ್ಪಾದನೆಯ ದೊಡ್ಡ ಘಟಕಗಳಲ್ಲಿ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಒಂದಾಗಿದೆ. ಇಲ್ಲಿ 1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ ಇಲ್ಲಿನ ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಮಾತ್ರ ಮರೀಚಿಕೆಯಾಗಿದೆ. ಇವರಿಗೆ ಹೆಚ್ಚಿನ ಸೌಲಭ್ಯವಲ್ಲ, ವ್ಯಾಗನ್ ಟಿಪ್ಲರ್ ಸೇರಿದಂತೆ ಇತರ ಕಡೆಗಳಲ್ಲಿ ಆರೋಗ್ಯ ರಕ್ಷಣೆಗೆ ಕನಿಷ್ಠ ಸೌಲಭ್ಯವೂ ಇಲ್ಲ. ನಿತ್ಯವೂ ಕಲ್ಲಿದ್ದಲಿನ ಕರಿ ಧೂಳಿನಲ್ಲಿ ಮೂಗಿಗೆ ಬಟ್ಟೆ ಕಟ್ಟಿಕೊಂಡು 8-10 ತಾಸು ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಕಾರ್ಮಿಕರ ಶೋಷಣೆಯಲ್ಲದೆ ಮತ್ತೇನು ಎಂಬ ಪ್ರಶ್ನೆ ಉದ್ಭವಿಸಿದೆ.
ಸಚಿವರೆದುರೆ ಕಾರ್ಮಿಕರ ಶೋಷಣೆ: ಖಾಸಗಿ ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ರಕ್ಷಣೆ ಒದಗಿಸಿ ಎಂದು ಹೇಳುವ ಸರ್ಕಾರ ಹಾಗೂ ಸಚಿವರು, ಅದೆ ಸರ್ಕಾರಿ ಕೈಗಾರಿಕೆಯಲ್ಲಿ ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಶೋಷಣೆ ಆಗುತ್ತಿದ್ದರೂ ಇತ್ತ ಗಮನ ಹರಿಸಲಿಲ್ಲ. ದಾರಿಯಲ್ಲಿ ಹೋಗುವಾಗ ಧೂಳು ಬಂದರೆ ಮೂಗು ಮುಚ್ಚಿಕೊಂಡು ನಮ್ಮ ಆರೋಗ್ಯ ರಕ್ಷಣೆ ಬಗ್ಗೆ ಕಾಳಜಿ ವಹಿಸುವ ನಾವು, ದಿನಕ್ಕೆ 8ರಿಂದ 10 ಗಂಟೆ ಕಲ್ಲಿದ್ದಲಿನ ಧೂಳಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಧೂಳಿನಿಂದ ರಕ್ಷಣೆ ಪಡೆಯಲು ಮುಖಕ್ಕೆ ಕಟ್ಟಿಕೊಳ್ಳುವ ಮಾಸ್ಕ್ ನೀಡಿಲ್ಲ. ನೀತಿ ಪಾಠ ಹೇಳುವವರೆ ನಿಯಮ ಬಿಟ್ಟು ನಡೆದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಬಿಟಿಪಿಎಫ್ಗೆ ಬಂದಾಗಲೂ ಆ ಕಾರ್ಮಿಕರಿಗೆ ಸೌಜನ್ಯಕ್ಕಾದರೂ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಸಣ್ಣದಾದ ಒಂದೇ ಒಂದು ಮಾಸ್ಕ್ ಇರಲಿಲ್ಲ ಎಂಬುದು ದುರಂತವೇ ಸರಿ.
ಮಡಪಂಜೆಯೆ ಸೇಫ್ಟಿ ಮೇಜರ್: ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿನ ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಧೂಳಿನಿಂದ ರಕ್ಷಣೆ ಪಡೆಯಲು ಮಡಪಂಜೆ (ಒಂದು ರೀತಿಯ ಕೆಂಪು ಬಟ್ಟೆ)ಯನ್ನು ಕೊಡುತ್ತಾರೆ ಎಂದು ಸ್ವತಃ ಗುತ್ತಿಗೆ ಕಾರ್ಮಿಕರು ಹೇಳುತ್ತಾರೆ. ಇದೇ ಅವರನ್ನು ಧೂಳಿನ ರಕ್ಷಣೆ ಮಾಡುವ ಪ್ರಮುಖ ಸೇಫ್ಟಿ ಮೇಜರ್ ಆಗಿದೆ. ಗುತ್ತಿಗೆ ನೌಕರರನ್ನು ಇಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದು ಮಾತ್ರ ನಾಚಿಕೆಗೇಡಿನ ಸಂಗತಿ. ಕಾಂಟ್ಯ್ರಾಕ್ಟರ್ ಅಡಿ ಇವರು ಕೆಲಸ ಮಾಡುತ್ತಿದ್ದು, ಕಾಂಟ್ರ್ಯಾಕ್ಟರ್ಗಳೆ ಇವರಿಗೆ ಸೇಫ್ಟಿ ಮೇಜರ್ಸ್ಗಳ ಬಗ್ಗೆ ಯೋಚಿಸಬೇಕಿದೆ. ಇಂತಹ ಕಾರ್ಮಿಕರ ಬಗ್ಗೆ ಬಿಟಿಪಿಎಫ್ನ ಮೇಲಧಿಕಾರಿಗಳು ಎಚ್ಚರಿಕೆ ವಹಿಸಿ, ಕಾಂಟ್ರ್ಯಾಕ್ಟರ್ಗೆ ಸೂಚಿಸುವ ಜವಾಬ್ದಾರಿ ಅವರಿಗಿದೆ. ಆದರೆ ಅದ್ಯಾವುದು ಇಲ್ಲಿ ನಡೆದಿಲ್ಲ ಎಂಬುದು ಕಾರ್ಮಿಕರ ಪರಿಸ್ಥಿತಿ ನೋಡಿದರೆ ತಿಳಿಯುತ್ತದೆ.
ಹೊಟ್ಟೆನೋವು, ಬಾಯಿಯಲ್ಲಿ ಕರಿಬೂದಿ ಬರುತ್ತೆ: ಅಲ್ಲಿ ಕೆಲಸ ನಿರ್ವಹಿಸುವ ಗುತ್ತಿಗೆ ಕಾರ್ಮಿಕರು ಮಾತನಾಡಿ, ನಮಗೆ ಇಲ್ಲಿ ಯಾವುದೆ ಮಾಸ್ಕ್ ಕೊಡುವುದಿಲ್ಲ, ಬಾಳೆ ಹಣ್ಣು ಕೊಡುವುದಿಲ್ಲ, ಧೂಳಿನಿಂದ ರಕ್ಷಣೆ ಪಡೆಯಲು ಕೇವಲ ಮಡಪಂಜೆ ಕೊಡುತ್ತಾರೆ. ಹೆಚ್ಚಾಗಿ ಧೂಳು ಕುಡಿದರೆ ಹೊಟ್ಟೆನೋವು ಬರುತ್ತದೆ. ಗಟ್ಟಿಯಾಗಿ ಉಗುಳಿದರೆ ಕರಿಬೂದಿ ಬಾಯಿಂದ ಬರುತ್ತದೆ. ಪ್ರತಿದಿನ ರು. 170 ಕೊಡುತ್ತಾರೆ. ಆರೋಗ್ಯ ರಕ್ಷಣೆಗಂತೂ ಇಲ್ಲಿ ಯಾವ ಸೌಲಭ್ಯವಿಲ್ಲ ಎಂಬುದು ಗೇಣು ಹೊಟ್ಟೆ ತುಂಬಿಸಿಕೊಳ್ಳಲು ಬಂದು, ಆರೋಗ್ಯ ಲೆಕ್ಕಿಸದೆ ದುಡಿಯುವ ಕಾರ್ಮಿಕರ ದಯನೀಯ ಮಾತು. ಇನ್ನು ಹೆಚ್ಚಾಗಿ ಮಾಧ್ಯಮಗಳ ಮುಂದೆ ಮಾತನಾಡಿದರೆ, ಇದ್ದ ಕೆಲಸ ಹೋಗುತ್ತದೆ ಎಂಬ ಭೀತಿಯಿಂದ ಭಯದಲ್ಲಿಯೆ ಮಾತನಾಡುವ ಗುತ್ತಿಗೆ ಆಧಾರಿತ ಕಾರ್ಮಿಕರ ಪಾಡು ಆ ದೇವರಿಗೆ ಪ್ರೀತಿ.
ಕಾರ್ಮಿಕ ಸಚಿವರ ಜಿಲ್ಲೆಯಲ್ಲಿಯೆ ಶೋಷಣೆ: ಕಾರ್ಮಿಕರ ಹಿತಾಸಕ್ತಿ ಕಾಪಾಡಲು, ಕಾರ್ಮಿಕ ಕಲ್ಯಾಣಕ್ಕಾಗಿ ಇಲಾಖೆ ಹಾಗೂ ಅದಕ್ಕೆ ಓರ್ವ ಸಚಿವರಿದ್ದಾರೆ. ಆದರೆ ಕಾರ್ಮಿಕ ಸಚಿವರ ತವರು ಜಿಲ್ಲೆ, ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲೆಯಲ್ಲಿಯೆ ಸರ್ಕಾರಿ ಸ್ವಾಮ್ಯದ ಕೈಗಾರಿಕೆಯೊಂದರಲ್ಲಿ ಗುತ್ತಿಗೆ ಕಾರ್ಮಿಕರ ರಕ್ಷಣೆಗೆ ಸೇಫ್ಟಿ ಮೇಜರ್ ಅನುಸರಿಸದಿರುವುದು ಶೋಷಣೆ ಅಲ್ಲದೆ ಮತ್ತೇನು? ಕಾರ್ಮಿಕರ ಆರೋಗ್ಯ ರಕ್ಷಣೆಗೆ ಬೆಲೆ ಇಲ್ಲದಂತಾಗಿದೆ.
ಪ್ರತಿದಿನ 8 ಗಂಟೆ ಧೂಳಿನಲ್ಲಿಯೆ ಕೆಲಸ ಮಾಡುವ ಅವರ ಆರೋಗ್ಯ ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ನೆಪದಲ್ಲಿ ಹದಗೆಟ್ಟು ಹೋದರೆ, ಅವರ ಬದುಕಿನ ಪಾಡೇನು? ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆ ಸಚಿವರು ಕೊಂಚ ಗಮನ ಹರಿಸಬೇಕು. ಗುತ್ತಿಗೆ ಆಧಾರಿತ ಕಾರ್ಮಿಕರ ಶೋಷಣೆಗೆ ಧ್ವನಿಯಾಗಬೇಕಾದ ಅನಿವಾರ್ಯತೆ ಇಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

