ಸೆಮಿಸ್ಟರ್ ಕೈಬಿಡಲು ಐಟಿಐ ವಿದ್ಯಾರ್ಥಿಗಳ ಆಗ್ರಹ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 16
ಐಟಿಐನಲ್ಲಿ ಸೆಮಿಸ್ಟರ್ ಪದ್ಧತಿ ಕೈಬಿಡುವಂತೆ ಆಗ್ರಹಿಸಿ ಐಟಿಐ ವಿದ್ಯಾರ್ಥಿಗಳು ಎಐಡಿವೈಒ, ಎಐಡಿಎಸ್‌ಒ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಐಟಿಐಗಳಲ್ಲಿ ನಡೆಸುವ ಕುಶಲ ಕರ್ಮಿ ತರಬೇತಿಯಲ್ಲಿ ಏಕಾಏಕಿ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸಲಾಗಿದೆ. ಆಗಸ್ಟ್, 2013ರಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದ ಮೇಲೆ ಐಟಿಐನ ದೀರ್ಘಕಾಲೀನ ಬೋಧನಾ ಪದ್ಧತಿಯನ್ನು ಹಾಗೂ ತರಬೇತಿಯನ್ನು ಬದಲಾಯಿಸಿ, ಸರಿಯಾದ ಸಮಾಲೋಚನೆ ನಡೆಸದೆ ಸೆಮಿಸ್ಟರ್ ಪದ್ಧತಿಯನ್ನು ದಿಢೀರನೆ ಹೇರಲಾಗಿದೆ.
ಈ ಕ್ರಮದ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ, ಬಹಿಷ್ಕಾರ, ಹೋರಾಟ ನಡೆಸಿ ಪ್ರತಿಭಟಿಸಲಾಗಿದೆ. ಇಷ್ಟೆಲ್ಲಾ ನಡೆದರೂ ರಾಜ್ಯ ಸರ್ಕಾರ ಪರೀಕ್ಷೆಯ ತಯಾರಿಯಲ್ಲಿ ತೊಡಗಿ, ರಾಜ್ಯಾದ್ಯಂತ ಐಟಿಐ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈಗಾಗಲೆ ಪರೀಕ್ಷಾ ಶುಲ್ಕವನ್ನು ಸಂಗ್ರಹಿಸಿದೆ. ಈ ನಿಟ್ಟಿನಲ್ಲಿ, ಕಳೆದ 25 ದಿನಗಳಿಂದ ಐಟಿಐ ವಿದ್ಯಾರ್ಥಿಗಳು ಹೋರಾಟದ ಮುಂದುವರಿಕೆಯಾಗಿ ಈಗ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದರು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಡಾ. ಪ್ರಮೋದ್ ಮಾತನಾಡಿ, 1950ರ ದಶಕದಲ್ಲಿ ಪ್ರಾರಂಭವಾದ ಐಟಿಐಗಳಲ್ಲಿ ತರಬೇತಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಸೆಮಿಸ್ಟರ್ ಪದ್ಧತಿಯ ಜಾರಿಯಿಂದ ತರಬೇತಿಗೆ ಸಮಯಾವಕಾಶ ಕಡಿಮೆಯಾಗಿ, ಪರೀಕ್ಷೆ ಮತ್ತು ಅಂಕಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕುತ್ತದೆ. ಸೆಮಿಸ್ಟರ್‌ನಿಂದಾಗಿ ವಿದ್ಯಾರ್ಥಿಯೊಬ್ಬ ಹೆಚ್ಚಿನ ಅಂಕ ಗಳಿಸಬಹುದು ಆದರೆ, ಉತ್ತಮ ತರಬೇತಿ ಪಡೆದಿರುವುದಿಲ್ಲ. ಇದು ಆತನ ಉದ್ಯೋಗಾರ್ಹತೆಗೆ ತೀವ್ರ ಧಕ್ಕೆಯನ್ನುಂಟು ಮಾಡುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ತಕ್ಷಣ ಸೆಮಿಸ್ಟರ್ ಪದ್ದತಿಯನ್ನು ಹಿಂದಕ್ಕೆ ತೆಗೆದುಕೊಂಡು ಐಟಿಐ ವಿದ್ಯಾರ್ಥಿಗಳ ಹಿತ ರಕ್ಷಣೆಗೆ ಮುಂದಾಗಬೇಕು. ಅನಿಶ್ಚಿತತೆಯನ್ನು ದೂರ ಮಾಡಬೇಕೆಂದು ಆಗ್ರಹಿಸಿದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಉಮೇಶ್ ಮಾತನಾಡಿ, ಹೊಸ ಪದ್ಧತಿಯಲ್ಲಿ ಹಲವಾರು ಗೊಂದಲಗಳಿವೆ. ಈ ಹಿಂದೆ ಪರೀಕ್ಷೆಯನ್ನು ಪಾಸ್ ಮಾಡಲು ವಿದ್ಯಾರ್ಥಿಗಳಿಗೆ 6 ಅವಕಾಶಗಳಿದ್ದವು. ಸೆಮಿಸ್ಟರ್ ಸ್ಕೀಮ್‌ನಲ್ಲಿ ಇದನ್ನು ಎರಡಕ್ಕೆ ಇಳಿಸಲಾಗಿದೆ. ಹೊಸ ವಿಷಯಗಳನ್ನು, ಹೊಸ ಪದ್ಧತಿಯನ್ನು ಜಾರಿಗೊಳಿಸಿ ವಿದ್ಯಾರ್ಥಿಗಳ ಮೇಲೆ ಪ್ರಯೋಗ ನಡೆಸುವುದು ಸರಿಯಲ್ಲ. ಡಿಜಿಇಟಿಯ ಆದೇಶದಂತೆ ಥಿಯರಿ ಪರೀಕ್ಷೆಯ ಮೌಲ್ಯಮಾಪನವನ್ನು ಎನ್‌ಸಿವಿಟಿ ಮಾಡಿ, ಪ್ರಾಕ್ಟಿಕಲ್ಸ್‌ಗಳನ್ನು ಎಸ್‌ಸಿವಿಟಿ ನಡೆಸಿದರೆ, ಮರು ಮೌಲ್ಯಮಾಪನಕ್ಕೆ ಯಾರನ್ನು ಸಂಪರ್ಕಿಸಬೇಕು ಎಂದು ಪ್ರಶ್ನಿಸಿದ ಅವರು, ಸೆಮಿಸ್ಟರ್ ಪದ್ಧತಿ ಕೈಬಿಡಬೇಕು ಎಂದು ಒತ್ತಾಯಿಸಿದರು.
ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ರಂಗಯ್ಯ ಶಿಡಗಿನಮೊಳ, ಮುಖಂಡರಾದ ಗೋವಿಂದ್, ತಿಮ್ಮಯ್ಯ ಸೇರಿದಂತೆ ನೂರಾರು ಐಟಿಐ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

