ಬಳ್ಳಾರಿ

ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 21
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನದೆ ಆದ ಪ್ರತಿಭೆ ಅಡಗಿರುತ್ತದೆ. ಆದರೆ ಅದನ್ನು ಗುರುತಿಸಿ, ಪೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಮತ್ತು ಪೋಷಕರು ಮಾಡಬೇಕಿದೆ ಎಂದು ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಸಲಹೆ ನೀಡಿದರು.
ನಗರದ ಬಸವ ಭವನದಲ್ಲಿ ಮಂಗಳವಾರ ಲೆಕ್ಕ ಪರಿಶೋಧಕರ ಸಂಘದ ಬಳ್ಳಾರಿ ಶಾಖೆ ಮತ್ತು ವೀವಿ ಸಂಘಗಳ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕೌಶಲ್ಯಭಿವೃದ್ಧಿ ತರಬೇತಿ, ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಜ್ಞಾನದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಕಡಿಮೆಯಿಲ್ಲ. ಆದರೆ ಧೈರ್ಯದ ಲೆಕ್ಕಾಚಾರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಹಿಂದೆ ಬೀಳುತ್ತಾರೆ. ಅದಕ್ಕೆ ಹುಟ್ಟಿದ, ಬೆಳೆಯುವ ಪರಿಸರ ಮತ್ತು ಅವರ ಸ್ವಭಾವ, ಚಿಂತನೆಗಳ ಮೇಲೆ ಪ್ರಭಾವ ಬೀರಿರುತ್ತವೆ. ಆದ್ದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೊಸ ರೀತಿಯಲ್ಲಿ ಚಿಂತನೆ ಮಾಡುವ ಜತೆಗೆ ಧೈರ್ಯದಿಂದ ಜೀವನದಲ್ಲಿ ಹೆಜ್ಜೆಗಳನ್ನಿಟ್ಟು ಸಾಗಿದರೆ ಯಶಸ್ಸು ಖಂಡಿತ ಎಂದರು.
ಕಠಿಣ ಪರಿಶ್ರಮ ಅಗತ್ಯ: ಲೆಕ್ಕ ಪರಿಶೋಧಕ ಕೋರ್ಸ್‌ಗೆ ಕಠಿಣ ಪರಿಶ್ರಮ ಬೇಕು. ಅಂದಾಗ ಮಾತ್ರ ಯಶಸ್ಸು ಪಡೆಯಬಹುದು. ಗ್ರಾಮಾಂತರ ಪ್ರದೇಶದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಗಣಿತದಲ್ಲಿ ಹೆಚ್ಚಿನ ಜ್ಞಾನವುಳ್ಳವರಾಗಿದ್ದು, ಸಿಎ ಸಹಕಾರಿಯಗಲಿದೆ. ಮಕ್ಕಳು ವೈದ್ಯರಾಗಲಿ, ಎಂಜಿನಿಯರ್ ಆಗಲಿ ಎಂದು ಪೋಷಕರು ಬಯಸುತ್ತಾರೆ ಆದರೆ ಸಿಎ ಓದಿದವರಿಗೆ ಉದ್ಯೋಗ ಕಟ್ಟಿಟ್ಟ ಬುತ್ತಿ. ದೇಶದಲ್ಲಿ ಸಿಎ ಪಠ್ಯಕ್ರಮ ಬೇರೆ ದೇಶಗಳಿಗೆ ಹೋಲಿಸಿದರೆ ವಿಸ್ತಾರವಾಗಿರುತ್ತದೆ. ಇಲ್ಲಿ ಸಿಎ ಮಾಡಿದವರು ಯಾವ ದೇಶದಲ್ಲಾದರು ಕೆಲಸ ನಿರ್ವಹಿಸುವುದು ಸುಲಭ ಸಾಧ್ಯ. ಬೇರೆ ದೇಶಗಳಲ್ಲಿ ಭಾರತದ ಲೆಕ್ಕಪರಿಶೋಧಕರಿಗೆ ಹೆಚ್ಚಿನ ಬೇಡಿಕೆ ಇದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಚಾರ್ಟ್‌ಟೆಡ್ ಅಕೌಂಟೆಂಟ್ಸ್ ಸಂಸ್ಥೆಯ ದಕ್ಷಿಣ ವಲಯ ಸಮಿತಿಯ ಖಚಾಂಚಿ ಚೆನ್ನೈನ ಲೆಕ್ಕ ಪರಿಶೋಧಕ ಗೋಪಾಲಕೃಷ್ಣರಾಜು ಮಾತನಾಡಿ, ಸಿಎ ಪದವಿ ಪಡೆಯಲು ಭಾರತೀಯ ಲೆಕ್ಕಪರಿಶೋಧಕರ ಸಂಘದಿಂದ ಸಾಕಷ್ಟು ಮಾಹಿತಿ, ಮಾರ್ಗದರ್ಶನ ದೊರೆಯುತ್ತಿದ್ದು, ಸಿಎ ಪಡೆದವರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ ಎಂದರು.
ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಿದ್ಧರಾಮೇಶ್ವರಗೌಡ, ಲೆಕ್ಕ ಪರಿಶೋಧಕ ಎಸ್. ಪನ್ನರಾಜ್, ಲಕ್ಷ್ಮಿನಾರಾಯಣ, ಶಿವಪ್ರಸನ್ನಕುಮಾರ್, ಅಭಿಷೇಕ್, ವಿವಿಧ ಪಿಯು ಕಾಲೇಜುಗಳ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಅಧ್ಯಾಪಕರು, ಪೋಷಕರು ಭಾಗವಹಿಸಿದ್ದರು. ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಕೆ. ರಾಜಶೇಖರ್ ಸ್ವಾಗತಿಸಿದರು, ಬಿ.ಎಸ್. ರೋಜಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಭರತ್‌ಕುಮಾರ್ ಗುಪ್ತ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.