ಶಾಸಕರಿಂದ ಕೀಳು ರಾಜಕೀಯ: ಆರೋಪ
ಕೊಟ್ಟೂರು: ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಮೂರನೇ ದರ್ಜೆ ರಾಜಕೀಯ ಪ್ರದರ್ಶನ ಮಾಡುವ ಮೂಲಕ ದ್ವೇಷ ರಾಜಕಾರಣ ಮಾಡುವತ್ತ ಮುಂದಾಗಿದ್ದಾರೆ ಎಂದು ಪಪಂ ಬಿಜೆಪಿ ಸದಸ್ಯರಾದ ಚಿರಿಬಿ ಕೊಟ್ರೇಶ್ ಮತ್ತು ಪಂಕಜಾ ತಿಪ್ಪೇಸ್ವಾಮಿ ಆರೋಪಿಸಿದರು.
ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಟ್ಟೂರು ಪಪಂಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಸರ್ಕಾರ 40 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ. ಇದರನ್ವಯ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪಟ್ಟಣದಲ್ಲಿನ 20 ವಾರ್ಡ್ಗಳ ಸದಸ್ಯರಿಗೆ ತಲಾ 2 ಮನೆಗಳ ಹಂಚಿಕೆಯನ್ನು ಫಲಾನುಭವಿಗಳಿಗೆ ನೀಡುವ ನಿರ್ಣಯ ಅಕ್ಟೋಬರ್ 23ರ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಆದರೆ ಶಾಸಕರು ನವೆಂಬರ್ 8ರಂದು ಫಲಾನುಭವಿಗಳ ಪಟ್ಟಿಯನ್ನು ತಯಾರು ಮಾಡಿ ಈ ಪೈಕಿ ತಾವು ಶಿಫಾರಸು ಮಾಡಿದ ನಮ್ಮ ವಾರ್ಡ್ಗಳ ಫಲಾನುಭವಿಗಳನ್ನು ಕೈಬಿಟ್ಟು ತಮ್ಮ ಪಕ್ಷದವರನ್ನು ಫಲಾನುಭವಿಗಳನ್ನಾಗಿ ಸೇರಿಸಿಕೊಳ್ಳುವ ಸಣ್ಣತನ ತೋರಿ ನಮಗೆ ವಂಚನೆಗೈದಿದ್ದಾರೆ ಎಂದು ದೂರಿದರು.
ಜನತೆಗೆ ವಂಚನೆ: ಬಿಜೆಪಿ ಸದಸ್ಯರ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡುವಂತೆ ಪಪಂ ಮುಖ್ಯಾಧಿಕಾರಿಗೆ ಆದೇಶ ನೀಡಿದ್ದಾರೆ. ಫಲಾನುಭವಿಗಳಿಗೆ ಅನುಪಾತದಡಿ ಮನೆಗಳನ್ನು ನೀಡಬೇಕೆಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಈ ಆದೇಶದನ್ವಯ ಪರಿಶಿಷ್ಟ ಜಾತಿಯಿಂದ 7 ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಶಾಸಕರು ಕೇವಲ 5 ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಆ ವರ್ಗದ ಜನರನ್ನು ವಂಚಿಸಿದ್ದಾರೆ ಎಂದು ವಿವರಿಸಿದರು.
ಪ.ಪಂಗಡದಲ್ಲಿ 5 ಫಲಾನುಭವಿಗಳನ್ನು ವಸತಿ ನಿರ್ಮಾಣದ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಿರಿಯ ನಾಗರೀಕರಿಗೆ ಶೇ. 2ರಂತೆ ಓರ್ವ ಫಲಾನುಭವಿ ಆಯ್ಕೆ ಮಾಡಿಕೊಳ್ಳಬೇಕು. ಆದರೆ ಆ ಪೈಕಿ ಒಬ್ಬರನ್ನು ಆಯ್ಕೆ ಮಾಡಿಕೊಂಡಿಲ್ಲ. ಅಲ್ಪಸಂಖ್ಯಾತರ 6 ಫಲಾನುಭವಿಗಳ ಪೈಕಿ ಕೇವಲ ಇಬ್ಬರು ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಬ್ಬರು ಅಂಗವಿಕಲರನ್ನು ಆಯ್ಕೆ ಮಾಡುವ ಅವಕಾಶವಿದ್ದರೂ ಯಾರನ್ನೂ ಈ ಪಟ್ಟಿಯಲ್ಲಿ ಸೇರಿಸದೇ ಏಕಪಕ್ಷೀಯವಾಗಿ ಪಟ್ಟಿ ತಯಾರಿಸಲಾಗಿದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗೆ ದೂರು: ಪಟ್ಟಣ ಪಂಚಾಯಿತಿ ತಯಾರಿಸಿದ ಫಲಾನುಭವಿಗಳ ಪಟ್ಟಿ ಸಂಪೂರ್ಣ ದೋಷಪೂರಿತವಾಗಿದ್ದು ಇದು ಶಾಸಕರ ಕೃಪಾಪೋಷಿತ ಪಟ್ಟಿಯಾಗಿದೆ. ಕಾರಣ ಈ ಪಟ್ಟಿಯನ್ನು ರದ್ದುಗೊಳಿಸಿ ಹೊಸದಾಗಿ ಸರ್ಕಾರ ನಿರೂಪಿಸಿದ ನಿಯಮಾವಳಿಗಳ ಪ್ರಕಾರ ಫಲಾನುಭವಿಗಳ ಪಟ್ಟಿ ತಯಾರಿಸಲು ಪಟ್ಟಣ ಪಂಚಾಯಿತಿಗೆ ಸೂಚಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎ.ಎ.ಬಿಸ್ವಾಸ್ಗೆ ಪತ್ರ ಬರೆದು ಒತ್ತಾಯಿಸಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

