ಬಳ್ಳಾರಿ

ಅಕ್ರಮಗಳ ಮೇಲೆ ಸಿಸಿ ಕ್ಯಾಮೆರಾ ಕಣ್ಣು

Published On :

-ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 25
ಬಳ್ಳಾರಿ ಜಿಲ್ಲೆಯ ಚುನಾವಣೆ ಎಂದಾಕ್ಷಣ ಕುರುಡು ಕಾಂಚಾಣದ ಗಮ್ಮತ್ತು ಹೆಚ್ಚಾಗಿರುತ್ತದೆ ಎಂಬ ಆರೋಪ ಇದೆ. ಹೀಗಾಗಿ ಜಿಲ್ಲೆ ವ್ಯಾಪ್ತಿಯಲ್ಲಿ ನಡೆಯುವ ಚುನಾವಣೆ ಅಕ್ರಮಗಳ ಮೇಲೆ ಚುನಾವಣ ಆಯೋಗ ಸಿಸಿ ಕ್ಯಾಮೆರಾದ ಹದ್ದಿನ ಕಣ್ಣು ನೆಟ್ಟಿದೆ.
ಅಕ್ರಮ ನಡೆಯುವ ಎಲ್ಲೆಡೆ ಗುಪ್ತವಾಗಿ ಕ್ಯಾಮೆರಾಗಳನ್ನು ಆಯೋಗ ಅಳವಡಿಸಿದೆ. ನಗರದ ಪ್ರಮುಖ ವೃತ್ತ, ಬೀದಿಗಳಲ್ಲದೆ ಚುನಾವಣೆ ಅಕ್ರಮ ನಡೆಯುತ್ತಿದೆ ಎಂಬ ಅನುಮಾನ ಬರುವ ನಗರದ ವಿವಿಧ ಕಡೆಗಳಲ್ಲಿ ಚುನಾವಣಾಧಿಕಾರಿಗಳು ಕ್ಯಾಮೆರಾಗಳನ್ನು ಸದ್ದಿಲ್ಲದೆ ಅಳವಡಿಸುವ ಮೂಲಕ ಅಕ್ರಮ ಎಸಗುವವರನ್ನು ಪತ್ತೆ ಹಚ್ಚಲು ಮುಂದಾಗಿದೆ. ಮಾದರಿ ಮತಗಟ್ಟೆಗಳಲ್ಲಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಇದಲ್ಲದೆ ಕೆಲ ಬೀದಿಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಿ ಮತದಾರರಿಗೆ ಆಮಿಷ ತೋರುವ ರಾಜಕೀಯ ಪಕ್ಷಗಳ ಮುಖಂಡರಿಗೆ ನಡುಕ ಹುಟ್ಟಿಸಲು ಮುಂದಾಗಿದೆ.
ಗ್ರಾಮೀಣ ಮಟ್ಟದಲ್ಲಿ ಸಿಸಿ ಕ್ಯಾಮೆರಾ: ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಹೆಚ್ಚಾಗಿ ಗ್ರಾಮೀಣ ಮಟ್ಟದಲ್ಲೇ ನಡೆಯುತ್ತದೆ ಇದನ್ನು ತಡೆಯಲು ಗ್ರಾಮಾಂತರ ಪ್ರದೇಶಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಅಲ್ಲಿಯೂ ಅಕ್ರಮ ತಡೆಗೆ ಜಿಲ್ಲಾ ಚುನಾವಣಾಧಿಕಾರಿ ಮುಂದಾಗಿದ್ದಾರೆ. ಬಳ್ಳಾರಿ ತಾಲೂಕಿನ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿ ಬೆಳಗಲ್ ತಾಂಡಾ, ಸಂಗನಕಲ್, ಮೋಕಾ, ರೂಪನಗುಡಿ ಪ್ರದೇಶದಲ್ಲಿಯೂ ಕ್ಯಾಮೆರಾ ಅಳವಡಿಸುವ ಕಾರ್ಯ ನಡೆದಿದೆ. ಚುನಾವಣೆ ಉದ್ದೇಶಕ್ಕಾಗಿಯೇ ಜಿಲ್ಲೆಯ ವಿವಿಧೆಡೆ ಇರುವ ಸೂಕ್ಷ್ಮ ಪ್ರದೇಶಗಳ ಬೀದಿಗಳಲ್ಲೂ ಕ್ಯಾಮೆರಾಗಳನ್ನು ಅಳವಡಿಸುವುದು ಇದೇ ಪ್ರಥಮ ಬಾರಿಗೆ ಎಂದು ಹೇಳಲಾಗುತ್ತಿದೆ.
ಎಲ್ಲೆಲ್ಲಿ ಕ್ಯಾಮೆರಾದ ಹದ್ದಿನ ಕಣ್ಣು?: ಬಳ್ಳಾರಿ ನಗರದಲ್ಲಿ ಸೂಕ್ಷ್ಮ ಪ್ರದೇಶವೆಂದು ಈಗಾಗಲೆ ಜಿಲ್ಲಾ ಚುನಾವಣಾಧಿಕಾರಿ ಗುರುತಿಸಿದ್ದು, ಅಲ್ಲಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಬಳ್ಳಾರಿಯ ದೇವಿನಗರ, ಹವಂಭಾವಿ, ಹುಸೇನ್ ನಗರ, ಬಾಪೂಜಿ ನಗರ, ಶ್ರೀರಾಂಪುರ ಕಾಲೋನಿ, ನಾಲಗಟ್ಟೆ, ಗುಗ್ಗರಹಟ್ಟಿ, ಜಾಗೃತಿ ನಗರ, ಕನ್ನಡ ನಗರ, ಭತ್ರಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ನಾಮಪತ್ರ ಸಲ್ಲಿಸುವ ಅವಧಿ ಇಂದಿಗೆ ಕೂನೆಯಾಗುವುದರಿಂದ ಅಭ್ಯರ್ಥಿಗಳು ಪ್ರಚಾರ, ಮತದಾರರಿಗೆ ಆಮಿಷವೊಡ್ಡುವ ಸಾಧ್ಯತೆ ಹೆಚ್ಚಾಗಿದ್ದರಿಂದ ಈ ಕಾರ್ಯಕ್ಕೆ ಅಧಿಕಾರಿಗಳು ಮುಂದಡಿ ಇಟ್ಟಿದ್ದಾರೆ.
ಡಿಸಿ ಕಚೇರಿಯಲ್ಲಿ ಮಾನಿಟರಿಂಗ್ ವ್ಯವಸ್ಥೆ: ಬಳ್ಳಾರಿ ನಗರದ 12ರಿಂದ 15 ಕಡೆಗಳಲ್ಲಿಯೇ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ಯಾಮೆರಾದಲ್ಲಿನ ಚಲನವಲನಗಳನ್ನು ಡಿವಿಆರ್ ಮೂಲಕ ಆಯಾ ಮತಗಟ್ಟೆಗಳಲ್ಲಿ ನೋಡುವ ವ್ಯವಸ್ಥೆ ಮಾಡಿದ್ದು, ಇಲ್ಲಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂಟರ್‌ನೆಟ್ ಮೂಲಕ ನೋಡುವ ವ್ಯವಸ್ಥೆ ಮಾಡಲಾಗಿದೆ. ಕೇವಲ ಬಳ್ಳಾರಿಯಲ್ಲಿ ಮಾತ್ರವಲ್ಲದೆ ಕಂಪ್ಲಿ, ವಿಜಯನಗರ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲೂ ಕ್ಯಾಮೆರಾ ಅವಳಡಿಸಲು ಚುನಾವಣಾಧಿಕಾರಿ ತಿಳಿಸಿದ್ದಾರೆ. ಆ ಮೂಲಕ ಅಕ್ರಮ ಚಟುವಟಿಕೆಗಳನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿಯೆ ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ತಾಸು ವೀಕ್ಷಣೆ ಮಾಡಲು ಮ್ಯಾನಿಟರಿಂಗ್ ಸೆಲ್ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ಕ್ಯಾಮೆರಾ ಅಳವಡಿಸುವ ಉದ್ದೇಶ: ರಾಜ್ಯಾದ್ಯಂತ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದ್ದು ಭದ್ರತಾ ಸಿಬ್ಬಂದಿ ಕಡಿಮೆ ಇರುವುದು ಮತ್ತು ಯಾವುದೇ ರೀತಿಯಾಗಿ ಮಾದರಿ ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಮಾಡಬಾರದು ಎನ್ನುವ ಕಾರಣಕ್ಕಾಗಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಪಕ್ಷಗಳು ಮತದಾರರಿಗೆ ಆಮಿಷ ವೊಡ್ಡುವುದನ್ನು ತಡೆಯುವ ಪ್ರಯತ್ನ ಸಾಗಿದೆ. ಈ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಂಡು ಮತದಾರರಿಗೆ ಆಮಿಷವೊಡ್ಡುವುದು ಎಲ್ಲ ಪಕ್ಷಗಳಿಗೂ ಕಷ್ಟದ ಕೆಲಸ. ಆದರೂ ಈ ಚುನಾವಣೆಯಲ್ಲಿ ಯಾರು ರಂಗೋಲಿ ಕೆಳಗೆ ತೂರುತ್ತಾರೆ, ಯಾರು ಚಾಪೆ ಕೆಳಗೆ ತೂರುತ್ತಾರೆ ಎಂಬುದು ಕುತೂಹಲದ ವಿಷಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.