ಬಳ್ಳಾರಿ

ಚಾರಿತ್ರ್ಯವಂತರಾಗಿ ಬಾಳಿ: ಶ್ರೀ

Published On :

ಹೂವಿನಹಡಗಲಿ: ಮಾನವನಿಗೆ ಕೇವಲ ಬಾಹ್ಯ ಸಂಪತ್ತಿನಿಂದ ಸುಖ, ಶಾಂತಿ, ನೆಮ್ಮದಿ ಲಭಿಸಲು ಸಾಧ್ಯವಿಲ್ಲ. ಶುದ್ಧ ಚಾರಿತ್ರ್ಯವಂತರಾಗಿ ಬಾಳಿ ಬದುಕಿನಲ್ಲಿ ಯಾರೊಬ್ಬರಿಗೂ ಕೇಡು ಬಯಸಬಾರದೆಂದು ಹೊಂಬುಜ ಕ್ಷೇತ್ರದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಇಲ್ಲಿನ ದಿಗಂಬರ ಜೈನ ಸಮಾಜ ಬಾಂಧವರು ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಮಾನಸ್ತಂಭೋಪರಿ ಮತ್ತು ಚತುರ್ಮುಖ ಪಾರ್ಶ್ವನಾಥ ತೀರ್ಥಂಕರರ ಜಿನ ಬಿಂಬಗಳ ಲಘು ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಎಲ್ಲರಿಗೂ ಒಳಿತು ಬಯಸುವ ಬದುಕನ್ನು ರೂಢಿಸಿಕೊಂಡಾಗ ಇಡೀ ಸಮಾಜವೇ ಸುಖಿಯಾಗಿರುತ್ತದೆ. ಪಟ್ಟಣದಲ್ಲಿ ಆಯೋಜಿಸಿರುವ ಇಂತಹ ಪಂಚ ಕಲ್ಯಾಣದ ಪುಣ್ಯ ಕಾರ್ಯಗಳಲ್ಲಿ ತೊಡಗಿಕೊಂಡಾಗ ಮೋಕ್ಷ ದೊರೆಯುತ್ತದೆ ಎಂದು ಹೇಳಿದರು.
ದೇಶದಲ್ಲಿ ಜೈನ ಧರ್ಮ ಬೆಳಗಲು 24 ತೀರ್ಥಂಕರರು ಕಾರಣಿಭೂತರಾಗಿದ್ದಾರೆ. ಅವರು ಸ್ವತಃ ಅನುಭವಿಸಿದ ವಿಶೇಷ ಘಟನಾವಳಿಗಳನ್ನು ಸ್ಮರಿಸುವುದು ಹಾಗೂ ಜೈನ ಸಂಸ್ಕೃತಿಯನ್ನು ಪರಿಚಯಿಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಸಮಾಜದ ಮುಖಂಡ ಡಾ. ಎಂ. ಧರ್ಮಣ್ಣ ಮಾತನಾಡಿ, ಇಲ್ಲಿನ ಜೈನ ಧರ್ಮಿಯರಿಗೆ ಜೀವನದಲ್ಲಿ ಆರ್ಥಿಕ ಅನುಕೂಲತೆಗಳಿವೆ. ಆದರೆ, ಜನ ಸಂಖ್ಯಾಬಲ ಇಲ್ಲದಂತಾಗಿದೆ. ಇಂತಹ ಧಾರ್ಮಿಕ ಆಚರಣೆಗಳಲ್ಲಿ ಒಟ್ಟಾಗಿ ಸೇರಿ ಆ ಮೂಲಕ ನಮಗೆ ನಾವೇ ಉದ್ಧಾರ ಮಾಡಿಕೊಳ್ಳಬೇಕಾಗಿದೆ ಎಂದರು.
ಬೇಗೂರು ವೀರೇಂದ್ರಕುಮಾರ್ ಮಾತನಾಡಿ, ಜೈನ ತೀರ್ಥಂಕರರು ಕೈಗೊಂಡ ಪಂಚಕಲ್ಯಾಣ ನೋಡಲು ಸಾಧ್ಯವಾಗಿಲ್ಲ. ಧಾರ್ಮಿಕ ಕಾರ್ಯಗಳಲ್ಲಿ ಆ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳುವ ಮೂಲಕ ಇಂದ್ರ ಲೋಕದ ದೇವಾದಿ ದೇವತೆಗಳನ್ನು ನೋಡುತ್ತಾ ಸಂತೋಷ ಪಡಬೇಕಿದೆ ಎಂದರು.
ದಿಗಂಬರ ಜೈನ ಸಮಾಜದ ಅಧ್ಯಕ್ಷ ರೇವಡಿ ಪಾರ್ಶ್ವನಾಥ ಕಾರ್ಯಕ್ರಮ ಉದ್ಘಾಟಿಸಿದರು. ಹುಬ್ಬಳ್ಳಿಯ ಮಹಾವೀರ್ ಎನ್. ಸೂಜಿ, ಆರ್.ಜಿ. ಪಾಟೀಲ್ ಮಾತನಾಡಿದರು.
ಪುರಸಭೆ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್, ಮಾನಸ್ತಂಭ ದಾನಿ ಶೈಲಜಾ ಶಾಂತರಾಜ್, ಎಂ. ಯಶೋಧರಗೌಡ, ಸ್ವಾಗತ ಸಮಿತಿ ಅಧ್ಯಕ್ಷ ಸಂತೋಷ ಜೈನ್, ಪಂಚಕಲ್ಯಾಣ ಮಹೋತ್ಸವ ಕಾರ್ಯಾಧ್ಯಕ್ಷ ಮಂಜುನಾಥ ಜೈನ್ ಸೇರಿದಂತೆ ಇತರರಿದ್ದರು. ನಂತರ ಸ್ವಾಮೀಜಿಯ ಸಾನ್ನಿಧ್ಯದಲ್ಲಿ ಗರ್ಭಕಲ್ಯಾಣ ಮಹೋತ್ಸವ ಜರುಗಿತು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.