ಸಮ್ಮೇಳನ: ಊಟ ಬಡಿಸಲು 5,120 ಸ್ವಯಂ ಸೇವಕರು
ಬಿಜಾಪುರ: ಫೆ.9ರಿಂದ ನಗರದಲ್ಲಿ ನಡೆಯಲಿರುವ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ 3 ಲಕ್ಷಕ್ಕೂ ಹೆಚ್ಚು ಜನರಿಗೆ ರುಚರುಚಿ ಊಟ ಬಡಿಸಲು 5,120 ಸ್ವಯಂ ಸೇವಕರು ಸಜ್ಜಾಗಿದ್ದಾರೆ.
ನಗರದ ಸೈನಿಕ ಶಾಲೆಯ ಆವರಣದಲ್ಲಿ ಮುಖ್ಯವೇದಿಕೆ ಪಕ್ಕದಲ್ಲಿಯೇ ನಿರ್ಮಿಸಲಿರುವ ಊಟದ ಮಂಟಪದಲ್ಲಿ 80 ಕೌಂಟರ್ ತೆರೆಯಲಾಗುತ್ತಿದ್ದು, ಸಮ್ಮೇಳನದಲ್ಲಿ ಅಚ್ಚುಕಟ್ಟುತನದಿಂದ ಊಟ ಬಡಿಸುವ ವ್ಯವಸ್ಥೆ ನಿಭಾಯಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
1,500 ಎನ್ಎಸ್ಎಸ್, 1,500 ಯುವಜನ ಸೇವೆ ಇಲಾಖೆ, 1,000 ದೈಹಿಕ ಶಿಕ್ಷಕರು, 400 ಎನ್ಸಿಸಿ ಕೆಡೆಟ್ಸ್, 200 ಸೇವಾದಳದ ಕಾರ್ಯಕರ್ತರು, 200 ಸ್ಕೌಟ್ಸ್ ಮತ್ತು ಗೈಡ್ಸ್, 120 ಬಿಪಿ.ಇಡಿ ವಿದ್ಯಾರ್ಥಿಗಳು, 100 ಮಹಿಳಾ ವಿವಿ ವಿದ್ಯಾರ್ಥಿನಿಯರು, 100 ನೆಹರು ಯುವ ಕೇಂದ್ರದ ಯುವಕರು ಸಮ್ಮೇಳನಕ್ಕೆ ಆಗಮಿಸುವ ಜನರಿಗೆ ಭೋಜನ ಬಡಿಸಲು ಸನ್ನದ್ಧರಾಗಿದ್ದಾರೆ.
ಮಹಿಳೆಯರಿಗೆ ಪ್ರತ್ಯೇಕ ಕೌಂಟರ್: ಒಂದು ಊಟದ ಪಂಕ್ತಿಗೆ ಸಾವಿರ ಜನರಂತೆ ಏಕ ಕಾಲಕ್ಕೆ 80 ಸಾವಿರ ಜನರು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ವಿಐಪಿ, ಮಾಧ್ಯಮ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗುತ್ತಿದೆ. ಮಹಿಳೆಯರಿಗಾಗಿಯೇ 20 ಕೌಂಟರ್ ಮಾಡಲಾಗಿದೆ. ಏಕ ಕಾಲಕ್ಕೆ 20,000 ಮಹಿಳೆಯರು ಊಟ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
1 ರಿಂದ 30 ಕೌಂಟರ್ವರೆಗೆ ದೈಹಿಕ ಶಿಕ್ಷಕರು, ಬಿಪಿಇಡಿ ವಿದ್ಯಾರ್ಥಿಗಳು ಊಟ ಬಡಿಸುತ್ತಾರೆ. 31 ರಿಂದ 40 ಕೌಂಟರ್ವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ ಕಾರ್ಯಕರ್ತರು ಊಟ ಬಡಿಸಲಿದ್ದಾರೆ. 41 ರಿಂದ 60 ಎನ್ಸಿಸಿ ಕೆಡೆಟ್ಸ್ ಹಾಗೂ ನೆಹರು ಯುವ ಕೇಂದ್ರದ ಯುವಕರು ಊಟ ಬಡಿಸುತ್ತಾರೆ. 60 ರಿಂದ 80 ಕೌಂಟರ್ನಲ್ಲಿ ಸ್ತ್ರೀಯರಿಗಾಗಿ ಸ್ತ್ರೀಯರೇ ಊಟ ಬಡಿಸಲು ಮುಂದಾಗಿದ್ದಾರೆ.
ಸ್ವಯಂ ಸೇವಕರಿಗೆ ಸಮವಸ್ತ್ರ
ಸ್ವಯಂ ಸೇವಕರಿಗೆ ಸಮವಸ್ತ್ರ ನೀಡಲಾಗುವುದು. ದೈಹಿಕ ಶಿಕ್ಷಕರು ಮಾತ್ರ ಟ್ರ್ಯಾಕ್ ಪ್ಯಾಂಟ್ ಹಾಗೂ ಟಿ ಶರ್ಟ್ ಧರಿಸಲಿದ್ದಾರೆ. ಸ್ವಯಂ ಸೇವಕರಿಗೆ ಕ್ಯಾಪ್ ಹಾಗೂ ಬ್ಯಾಡ್ಜ್ ವ್ಯವಸ್ಥೆ ಮಾಡಲಾಗುತ್ತಿದೆ. ಸಮವಸ್ತ್ರದಿಂದಾಗಿ ಊಟ ಬಡಿಸುವ ಸ್ವಯಂ ಸೇವಕರನ್ನು ತಟ್ಟನೆ ಗುರ್ತಿಸಲು ಅನುಕೂಲವಾಗುತ್ತದೆ. ಸ್ಯಯಂ ಸೇವಕರಿಗೆ 6,000 ಟೋಪಿ, 6,000 ಬ್ಯಾಡ್ಜ್ ವಿತರಿಸಲು ಯೋಜಿಸಲಾಗಿದೆ. ಸ್ವಯಂ ಸೇವಕರಿಗೆ 6,000 ಪ್ರಮಾಣ ಪತ್ರ ಪೂರೈಸಲಾಗುವುದು.
1,200 ವೆಚ್ಚದಲ್ಲಿ ಊಟದ ಮಳಿಗೆ ವಿವರಣೆ, ಊಟ, ಉಪಹಾರ ಮಾಹಿತಿ ಶ್ಲೋಗನ್ಗಳನ್ನು ಪ್ಲೆಕ್ಸ್ ಇತ್ಯಾದಿಗಳಲ್ಲಿ ಬರೆಸಲು ನಿರ್ಧರಿಸಲಾಗಿದೆ. ನೀರು, ಸ್ವಚ್ಛತೆ ಮಾಹಿತಿ ಪ್ರಚಾರಕ್ಕೆ ರು. 1,200 ಖರ್ಚು ಮಾಡಲು ಯೋಜಿಸಲಾಗಿದೆ. ರು. 5,000 ವೆಚ್ಚದಲ್ಲಿ ರಟ್ಟು, ಸುತಳಿ, ಟಿಕ್ಸೋ, ಮೂಳೆ ಖರೀದಿಸಲಾಗುವುದು. ಇತರೆ ಅವಶ್ಯಕತೆಗಳಿಗೆ ರು. 10,000 ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಎಲ್ಲ ಊಟದ ಕೌಂಟರ್ ಸ್ವಯಂ ಸೇವಕರಿಗೆ ಊಟ ಬಡಿಸಲು ಅಗತ್ಯದ ವಿವಿಧ ಸೌಲಭ್ಯ ಕಲ್ಪಿಸಲು ರು. 4.50 ಲಕ್ಷ ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ.
ಊಟ, ಉಪಹಾರಕ್ಕೆ 3 ದಿನಕ್ಕೆ ಸಾಕಾಗಲು 5 ಲಕ್ಷ ಪ್ಲೇಟ್ಗಳನ್ನು ಖರೀದಿಸಲಾಗುವುದು. ಉಪಹಾರಕ್ಕಾಗಿ 1.50 ಲಕ್ಷ ಪ್ಲೇಟ್ಗಳನ್ನು ಖರೀದಿಸಲಾಗುತ್ತಿದೆ.
-ರುದ್ರಪ್ಪ ಆಸಂಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

