ಚಾಮರಾಜನಗರ

ಹುಲಿ ರಕ್ಷಿತಾರಣ್ಯದಲ್ಲಿ ಜೆಸಿಬಿ ಸದ್ದು

ಹುಲಿ ರಕ್ಷಿತಾರಣ್ಯದಲ್ಲಿ ಜೆಸಿಬಿ ಸದ್ದು
Published On :

ಚಾಮರಾಜನಗರ: ಹುಲಿ ರಕ್ಷಿತಾರಣ್ಯದ ಒತ್ತಡ ತಪ್ಪಿಸಲು ಸಫಾರಿಯನ್ನೇ ಬಂದ್ ಮಾಡಿರುವಾಗಲೇ ಬಂಡೀಪುರ ಅರಣ್ಯದಲ್ಲಿ ಮಾತ್ರ ಜೆಸಿಬಿ ಸದ್ದು ನಿರಂತರವಾಗಿ ಕೇಳಿಸುತ್ತಿದೆ. ಇದು ಕಾಡಿನಲ್ಲಿ ಜೀವ ಜಲ ಬತ್ತಲು ಕಾರಣವಾಗಿದೆ.  
ಕಾಡಿನಲ್ಲಿ ನಡೆಯುವ ಕೆಲಸ ನಾಡಿನಲ್ಲಿ ಇರುವವರಿಗೆ ಗೊತ್ತಾಗುವುದಿಲ್ಲವೆಂದು ಅಧಿಕಾರಿಗಳು ನಿರಂತರವಾಗಿ ಜೆಸಿಬಿ ಕಾಮಗಾರಿ ನಡೆಸುತ್ತಿದ್ದಾರೆ. ಇದು ಒಂದು ಕಡೆ ಭಾರಿ ವಾಹನದಿಂದ ಪ್ರಾಣಿಗಳಿಗೆ ಕಿರಿಕಿರಿ ಉಂಟು ಮಾಡಿದರೆ, ಜೆಸಿಬಿ ಚರಂಡಿ, ಅಡ್ಡಾದಿಡ್ಡಿ ಗುಂಡಿಯಿಂದ ಕಾಡಿನಲ್ಲಿ ಬರ ಕಾಣಿಸಿಕೊಂಡಿದೆ.
ಪ್ರವಾಸಿಗರ ಅನುಕೂಲಕ್ಕಾಗಿ ಸಫಾರಿ ರಸ್ತೆ ಮತ್ತು ಅರಣ್ಯ ರಸ್ತೆಗಳನ್ನು ನಿರ್ಮಾಣ ಮಾಡುವ ಸಲುವಾಗಿ   ಬಂಡೀಪುರ ಮತ್ತು ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ವನ್ಯಜೀವಿ ಅರಣ್ಯಧಾಮ (ಬಿಆರ್‌ಟಿ)ದ ಬಹುತೇಕ ರಸ್ತೆಗಳಲ್ಲಿ ಜೆಸಿಬಿ ಗರ್ಜಿಸಿದೆ. ರಸ್ತೆಗಳನ್ನು ನಿರ್ಮಾಣ ಮಾಡುವ ಸಲುವಾಗಿ ರಸ್ತೆಯ ಎರಡೂ ಬದಿಯಲ್ಲೇ ಜೆಸಿಬಿಯಲ್ಲಿ ಅವೈಜ್ಞಾನಿಕವಾದ ಭಾರಿ ಗಾತ್ರದ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ, 30-40 ಮೀಟರ್ ಅಂತರದಲ್ಲಿ ಚರಂಡಿಯಲ್ಲೇ ಭಾರಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಇದು ಒಂದು ರೀತಿಯಲ್ಲಿ ಮಳೆ ನೀರು ಇಂಗಲು ವರದಾನವಾದರೂ ಕಾಡಿನಲ್ಲಿರುವ ಕೆರೆಗಳಿಗೆ ನೀರು ತಲುಪಲು ಅಡ್ಡಿಯಾಗಿ ಪರಿಣಮಿಸಿರುವುದರಿಂದ ಈ ಬಾರಿ ಬೇಸಿಗೆಗೆ ಮುನ್ನ ಕೆರೆ ಕಟ್ಟೆಗಳಲ್ಲಿ ನೀರಿಲ್ಲದಂತಾಗಿದೆ.
ನಿಯಮ ಉಲ್ಲಂಘಣೆ: ಸರ್ಕಾರ ಅರಣ್ಯಾಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಕಷ್ಟು ಹಣ ಬಿಡುಗಡೆ ಮಾಡುತ್ತದೆ. ಜತೆಗೆ ಇತ್ತೀಚಿನ ವರ್ಷಗಳಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮೂಲಕವೂ ಕಾಡಿನ ಅಭಿವೃದ್ಧಿಗಾಗಿ ಬೇಕಾದಷ್ಟು ಹಣ ಬಳಕೆ ಮಾಡಿಕೊಳ್ಳಬಹುದು. ಆದರೆ ಮಾನವ ಶ್ರಮ ಬಳಸಿಕೊಳ್ಳದೆ ಯಂತ್ರಗಳ ಮೂಲಕ ಕಾಮಗಾರಿ ನಡೆಸಿ ನಿಯಮ ಉಲ್ಲಂಘಿಸಲಾಗಿದೆ.
ನೀರು ಹರಿದು ಹೋಗಲು ದಾರಿಯೇ ಇಲ್ಲ: ಕೆಲ ಅಧಿಕಾರಿಗಳು ಕೆರೆ ಕಟ್ಟೆಗೆ ನೀರು ತುಂಬಲಿ ಎಂಬ ಉದ್ದೇಶವಿಟ್ಟುಕೊಂಡು ಕೆಲಸ ಮಾಡದ ಪರಿಣಾಮ ಬಹಳಷ್ಟು ಕಡೆ ನಿರ್ಮಾಣ ಮಾಡಲಾಗಿರುವ ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ದಾರಿ ಮಾಡಲಾಗಿಲ್ಲ. ಜತೆಗೆ ಚರಂಡಿ ನೀರು ಹರಿದು ಹೋಗಲು ಹಾಕಲಾಗಿರುವ ಪೈಪ್‌ನಲ್ಲಿ  ಮತ್ತು ಸೇತುವೆಗಳಲ್ಲಿ ಬಹಳಷ್ಟು ವರ್ಷಗಳಿಂದ ಹೂಳನ್ನೇ ತೆಗೆಯದ ಉದಾಹರಣೆಗಳು ಬಹಳಷ್ಟು ಕಡೆ ಕಾಣಬಹುದಾಗಿದೆ. ಇದಕ್ಕೆ ಬಂಡೀಪುರ ಅರಣ್ಯದ ಆನೆ ಕಟ್ಟೆ ಬಳಿ ಇರುವ ಪೈಪ್‌ನೊಳಗೆ ತುಂಬಿರುವ ಮಣ್ಣೇ ಸಾಕ್ಷಿಯಾಗಿದೆ.  
ನೀರೇ ತುಂಬದ  ಕೆರೆಗಳು: ಕೆಲ ವರ್ಷಗಳ ಹಿಂದೆ ಬಂಡೀಪುರ ಬೋಳುಗುಡ್ಡದ ಕೆಳಗೆ ಕೆರೆ ನಿರ್ಮಾಣ ಮಾಡಲಾಗಿದೆ. ಆದರೆ ಈ ಕೆರೆಗೆ ನೀರು ತುಂಬಿದ ಉದಾಹರಣೆಯೇ ಇಲ್ಲ. ಈ ಕೆರೆಗೆ ನೀರು ಹೋಗಲು ದಾರಿಯೂ ಸಹ ಇಲ್ಲ. ಬಿಆರ್‌ಟಿಯ ಕುಂಟುಗುಡಿ ಬಳಿ ಅವೈಜ್ಞಾನಿಕವಾಗಿ ಕೆರೆ ಕಾಮಗಾರಿಯನ್ನು ಇತ್ತೀಚೆಗೆ ಜೆಸಿಬಿ ಬಳಸಿ  ಮಾಡಲಾಗಿತ್ತು. ಇಲ್ಲಿ ಕನಿಷ್ಠ ಹದಿನೈದು ದಿನವೂ ನೀರು ನಿಲ್ಲಲಿಲ್ಲ.
- ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.