ಬರದ ಛಾಯೆಯಲ್ಲಿ ಬೇಲೂರು ತಾಲೂಕು
ಬೇಲೂರು: ತಾಲೂಕಿನಲ್ಲಿ ಮುಂಗಾರು, ಹಿಂಗಾರು ಹಾಗೂ ಇತರೆ ವಾಡಿಕೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸುತ್ತಿದ್ದು, ಕುಡಿಯುವ ನೀರಿಗೂ ತತ್ವಾರವಾಗುತ್ತಿದೆ. ಇಲ್ಲಿನ ಯಗಚಿ ಜಲಾಶಯದಲ್ಲಿ ಒಳ ಹರಿವು ಕಡಿಮೆಯಾಗಿ ನೀರಿನ ಶೇಖರಣೆಯಲ್ಲೂ ವ್ಯತ್ಯಯ ಉಂಟಾಗಿದೆ.
ತಾಲೂಕಿನಲ್ಲಿ ಕಳೆದ ವರ್ಷ ವಾಡಿಕೆ ಮಳೆ ಬಾರದೆ ಕೆರೆಕಟ್ಟೆ ಹಾಗೂ ಜಲಾಶಯಗಳು ಬರಿದಾಗುವ ಹಂತಕ್ಕೆ ಬಂದಿವೆ. ಮುಂಗಾರು ಹಾಗೂ ಹಿಂಗಾರು ಮಳೆಯ ಜೊತೆಗೆ ಇತರೆ ಅಡ್ಡ ಮಳೆ ಬಂದು ವರ್ಷಗಳು ಕಳೆಯುತ್ತಾ ಬಂದಿದ್ದು, ರೈತರು ಬಿಳಿ ಆಗಸದತ್ತ ಮುಖ ಮಾಡಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಯಗಚಿ ಜಲಾಶಯ 3 ರಿಂದ 4 ಬಾರಿ ಭರ್ತಿಯಾಗಿ 4 ಕ್ರಸ್ಟ್ಗೇಟ್ ಮೂಲಕ ನೀರನ್ನು ಹೊರಬಿಡಲಾಗಿತ್ತು.
ಮಳೆ ಎಂಬ ಮರೀಚಿಕೆ: ಆದರೆ ಕಳೆದ ವರ್ಷದಿಂದ ಮಳೆ ಎಂಬುದು ಮರೀಚಿಕೆ ಎನ್ನುವಂತಾಗಿದ್ದು ಭೀಕರ ಸುಡುಬಿಸಲಿಗೆ ಕೆರೆ ಕಟ್ಟೆಗಳು ಒಣಗುತ್ತಿದ್ದು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಭೀತಿ ಎದುರಾಗುತ್ತಿದೆ. ಈಗಾಗಲೇ ತಾಲೂಕಿನ ಬಹುತೇಕ ಗ್ರಾಮಗಳ ಕೆರೆ ಕಟ್ಟೆಗಳು ಸಂಪೂರ್ಣ ಬರಿದಾಗಿದ್ದು ದನಕರುಗಳಿಗೆ ಕುಡಿಯುವ ನೀರು, ಮೇವು ಇಲ್ಲದೆ ಮಾರಾಟ ಮಾಡುತ್ತಿದ್ದಾರೆ. ಪಟ್ಟಣ ಪ್ರದೇಶದಲ್ಲೂ ಸಮರ್ಪಕವಾಗಿ ಕುಡಿಯುವ ಪೂರೈಸುವಲ್ಲಿ ಪರದಾಡುವಂತಾಗಿದೆ.
ಯಗಚಿ ಜಲಾಶಯದ ನೀರಿನ ಮಟ್ಟ ದಿನದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಒಟ್ಟು 6.3 ಟಿಎಂಸಿ ಸಾಮರ್ಥ್ಯ ಇರುವ ಜಲಾಶಯದಲ್ಲಿ ಈಗ ಕೇವಲ 2.15 ಟಿಎಂಸಿ ನೀರಿದೆ. ಕಳೆದ 2 ವರ್ಷದ ಹಿಂದೆ ಇದೇ ಆವದಿಯಲ್ಲಿ 3.50 ಟಿ.ಎಂ.ಸಿ ನೀರಿದ್ದು ಒಳ ಹರಿವು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿತ್ತು. ಆದರೆ ಈಗ ಕೇವಲ 10 ಕ್ಯುಸೆಕ್ ನೀರು ಒಳ ಹರಿವು ಬರುತ್ತಿದ್ದು ಹೊರ ಹರಿವನ್ನು ಸಂಪೂರ್ಣ ನಿಲ್ಲಿಸಲಾಗಿದೆ.
ಯಗಚಿ ಜಿಲ್ಲೆಯ ಜೀವನದಿ: ಪಟ್ಟಣಕ್ಕೆ ಸಮೀಪವಿರುವ ಯಗಚಿ ಜಲಾಶಯ ತಾಲೂಕಿನ 37 ಸಾವಿರ ಎಕರೆಗೆ ನೀರುಣಿಸುವ ಕಾಮಧೇನು ಆಗಿದ್ದು ಜಲಾಶಯದ ನೀರು ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಕೇವಲ ತಾಲೂಕಿಗೆ ಮಾತ್ರವಲ್ಲದೆ, ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಬೆಳವಾಡಿಗೆ ಕೆರೆಗೆ, ಅರಸೀಕೆರೆ, ಹೊಳೆ ನರಸೀಪುರ ತಾಲೂಕಿಗೆ ಹಾಗೂ ತುಮಕೂರು ಜಿಲ್ಲೆಯ ಜನತೆಗೂ ನೀರನ್ನು ಪೂರೈಸಲಾಗುತ್ತಿದೆ.
ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ಪಕ್ಕದ ಹಳೆಬೀಡು ಮಾದೀಹಳ್ಳಿ ಹೋಬಳಿಗೆ ಕುಡಿವು ನೀರು ಪೂರೈಸಲು ದಶಕಗಳಿಂದ ಹೋರಾಟ ನಡೆಯುತ್ತಾ ಬಂದಿದ್ದು ಇದೀಗ ಫಲಪ್ರದವಾಗುವ ಹಂತದಲ್ಲಿದೆ ಎಂಬುದು ಸಮಾಧಾನ ತರುವ ವಿಷಯವಾಗಿದೆ. ಜಲಾಶಯದ ಸುತ್ತಮುತ್ತಲಿನ ಜಮೀನಿಗೆ ನೀರು ಹರಿಸುವ ಜೊತೆಗೆ ಇತರೆ ಜಿಲ್ಲೆಗೂ ಕುಡಿಯುವ ನೀರು ಪೂರೈಸುತ್ತಿರುವುದು ಯಗಚಿ ಜಲಾಶಯದ ಹಿರಿಮೆಯಾಗಿದೆ. ತಾಲೂಕಿನ ಜೀವನದಿಯಾಗಿರುವ ಯಗಚಿ ನದಿಯಿಂದಾಗಿ ಇಂದು ಜಲಾಶಯ ಕೆಳದಂಡೆಯಲ್ಲಿರುವ ಸಾವಿರಾರು ರೈತರು ಬೆಳೆ ಬೆಳೆಯುವ ಮುಂಖಾತರ ಜೀವನ ಸಾಗಿಸುತ್ತಿದ್ದಾರೆ. ಹೊರ ಜಿಲ್ಲೆಯೂ ಸೇರಿದಂತೆ ಕೋಟ್ಯಂತರ ಮಂದಿ ಯಗಚಿ ನೀರನ್ನು ದಿನನಿತ್ಯ ಬಳಸುತ್ತಿದ್ದಾರೆ.
ಹೊರ ಜಿಲ್ಲೆಗೂ ನೀರು ಪೂರೈಕೆ: ತಾಲೂಕಿನ ಜನತೆಯ ಜೊತೆಗೆ ಹೊರ ಜಿಲ್ಲೆಗಳಿಗೂ ಯಗಚಿ ಜಲಾಶಯ ುದಿಂದ ಪೈಪ್ಲೈನ್ ಮೂಲಕ ನೀರನ್ನು ಹರಿಸಲಾಗುತ್ತಿದೆ. 6.03 ಟಿಎಂಸಿ ಸಾಮರ್ಥ್ಯ ಇರುವ ಯಗಚಿ ಜಲಾಶಯ 8 ಸಾವಿರ ಎಕರೆ ಪ್ರದೇಶದ ವಿಸ್ತೀರ್ಣವನ್ನು ಹೊಂದಿದೆ. ಚಿಕ್ಕಮಗಳೂರಿಗೆ ನಿತ್ಯ 60 ಟಿಎಂಸಿ ನೀರನ್ನು ಬಿಡಲಾಗುತ್ತಿದೆ. ಅರಸೀಕೆರೆಗೆ ಕಳೆದ 6 ತಿಂಗಳಿಂದ ಕಾಮಗಾರಿ ಮುಗಿಯುವ ಹಂತ ತಲುಪಿರುವ ಹಿನ್ನೆಲೆಯಲ್ಲಿ 30 ಟಿಎಂಸಿ ನೀರನ್ನು ಬಿಡಲಾಗುತ್ತಿದೆ. ಇದರಲ್ಲಿ 1.5 ಟಿಎಂಸಿಯಷ್ಟು ನೀರನ್ನು ಒಟ್ಟು ಸಂಗ್ರಹಣೆ ಮಾಡಲಾಗಿದೆ. 9 ಟಿಎಂಸಿ ನೀರನ್ನು ಪಟ್ಟಣದ ಕುಡಿಯುವ ನೀರಿಗೆ ಪೂರೈಸಲಾಗುತ್ತಿದೆ. ರೈತರ ಬೆಳೆಗೆ ಸ್ವಲ್ಪ ನೀರನ್ನು ಚಾನಲ್ ಮೂಲಕ ಬಿಡಲಾಗುತ್ತಿದೆ. 8 ಸಾವಿರ ಎಕರೆಗೆ ಯಗಚಿ ಎಡದಂಡೆ ನಾಲೆಯಿಂದ ನೀರು ಬಿಡಲಾಗುತ್ತಿದೆ. ಯಗಚಿ ಅಚ್ಚುಕಟ್ಟು ಕೆರೆಗೂ ನೀರನ್ನು ಬಿಡಲಾಗುತ್ತಿದೆ.
ಬರಿದಾಗುತ್ತಿರುವ ಜಲಾಶಯ: ವಾಡಿಕೆಯಂತೆ ಜಲಾಶಯದಲ್ಲಿ 4.7 ಟಿಎಂಸಿ ನೀರು ಇದ್ದರೆ ರೈತರರಿಗೆ ಹಾಗೂ ಪಟ್ಟಣದ ಜನತೆಗೆ ಸಮರ್ಪಕವಾಗಿ ನೀರನ್ನು ಪೂರೈಸಬಹುದಾಗಿದೆ. ಆದರೆ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಜಲಾನಯನ ವ್ಪಾಪ್ತಿಯಲ್ಲಿ ನೀರು ಹರಿದು ಬರುವ ಪ್ರಮಾಣ ಕಡಿಮೆಯಾಗಿ ಜಲಾಶಯಕ್ಕೆ ಒಳಹರಿವು ಸಂಪೂರ್ಣವಾಗಿ ನಿಂತು ಹೋಗಿದೆ. ಯಗಚಿ ಹಿನ್ನೀರಿನಲ್ಲಿ ಬರುವ ನಾರಾಯಣ ಪುರ, ಕೆಳಹಳ್ಳಿ, ಬೆಣ್ಣೂರು ಗ್ರಾಮಗಳ ಈಗಾಗಲೆ ಬೇಸಿಗೆಯ ಬೇಗೆಗೆ ತತ್ತರಿಸುತ್ತಿರುವ ಪಟ್ಟಣದ ಜನತೆಗೆ ಯಗಚಿ ಜಲಾಶಯದಲ್ಲಿ ನೀರು ಬರಿದಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
- ಎ.ರಾಘವೇಂದ್ರ ಹೊಳ್ಳ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

