ಜನಮನ ಸೆಳೆವ ಫಲ-ಪುಷ್ಪ ಪ್ರದರ್ಶನ
ಚಿತ್ರದುರ್ಗ: ತೋಟಗಾರಿಕೆ ಇಲಾಖೆಯಿಂದ ಇಲ್ಲಿನ ತೋಟಗಾರಿಕೆ ಇಲಾಖೆ ಆವರಣದಲ್ಲಿ ನಡೆಯುತ್ತಿರುವ ಆಕರ್ಷಣೀಯ ಫಲ ಪುಷ್ಪ ಪ್ರದರ್ಶನ ಸೂಜಿಗಲ್ಲಿನಂತೆ ಜನಮನ ಸೆಳೆಯುತ್ತಿದೆ.
ಶುಕ್ರವಾರ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ ಅವರಿಂದ ಚಾಲನೆಗೊಂಡ 22ನೇ ಫಲ ಪುಷ್ಪ ಪ್ರದರ್ಶನದಲ್ಲಿ ವೈವಿಧ್ಯಮಯ ಹೂವುಗಳು, ತರಕಾರಿಗಳು, ಹಣ್ಣುಗಳಿಂದ ಅಲಂಕರಿಸಲಾದ ಆಕೃತಿಗಳು ಪ್ರಮುಖ ಆಕರ್ಷಣೆಯಾಗಿವೆ.
ಕಾಳಿಂಗ ಸರ್ಪವನ್ನು ಮಥಿಸಿದ ಕೃಷ್ಣ, ಸ್ವಾಮಿ ವಿವೇಕಾನಂದರ ಆರು ಅಡಿ ಎತ್ತರದ ಮೂರ್ತಿ, ಬಸವಣ್ಣನವರ ಮೂರ್ತಿಗೆ ಹೂವಿನ ಅಲಂಕಾರ, ಮತ್ಸ್ಯಕನ್ಯೆ ಮುಂತಾದವು ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ.
ವಿವಿಧ ಹೂಗಳು: ಆರ್ಕಿಡ್, ಆಂಥೋರಿಯಂ, ಕಾರ್ನೇಶನ್, ಕಾಕ್ಸ್ಕೂಂಬ್, ಸಾಲ್ವಿಯಾ, ಚೆಂಡು ಹೂವು, ಜಿನಿಯಾ, ಪೆಟೊನಿಯಾ, ಕಾಸ್ಮಾಸ್, ನಷ್ಟ್ಯೋಷಿಯಂ, ಬಾಲ್ಸಂ, ಜಿರೇನಿಯಂ, ಹಾಲಿಹಾಕ್, ಆಂಟರಿನಮ್ ಸೇರಿ 20ಕ್ಕೂ ಹೆಚ್ಚು ಬಗೆಯ ವಾರ್ಷಿಕ ಹೂವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಊಟಿಯಂತಹ ಶೀತ ವಲಯದಲ್ಲಿ ಬೆಳೆಯುವ ಆಗಪಾಂಥಸ್, ರೆಡ್ ಹಾಟ್ ಪೋಕರ್, ಲಿಲ್ಲಿ, ಏಷ್ಯಾಟಿಕ್ ಲಿಲ್ಲಿ, ಪೊಷಿಯಾ, ಸೈಕ್ಲೋಮನ್, ಕ್ಯಾಲಾಲಿಲ್ಲಿ, ಟ್ಯೂಬಿರೆಸ್ ರೂಟೆಡ್ ಬಿಗೋನಿಯಾ ಇತ್ಯಾದಿ ಹೂವುಗಳು ಕಣ್ಮನ ಸೆಳೆಯುತ್ತವೆ.
ವಿವಿಧ ಜಾತಿಗಳ ಹೂವುಗಳನ್ನು ಒಪ್ಪವಾಗಿ ಜೋಡಿಸಿರುವುದು, ಕುಂಡಗಳಲ್ಲಿ ಬೆಳೆಸಿದ ಹೂವಿನ ಗಿಡಗಳ ಪ್ರದರ್ಶನ, ಇಕೆಬಾನ, ತರಕಾರಿ ಕೆತ್ತನೆ, ಅಲಂಕಾರಿಕ ಗಿಡಗಳ ತೋಟ ಸ್ಪರ್ಧೆ, ಜಿಲ್ಲೆಯ ರೈತರು ಬೆಳೆದಿರುವ ದಾಳಿಂಬೆ, ಬಾಳೆಹಣ್ಣು, ಮೋಸಂಬಿ ಮತ್ತಿತರೆ ಹಣ್ಣುಗಳ ಪ್ರದರ್ಶನ ಹಾಗೂ ಸ್ಪರ್ಧೆ ಏರ್ಪಡಿಸಲಾಗಿದೆ. ಹಣ್ಣು ಹಾಗೂ ತರಕಾರಿಗಳಲ್ಲಿ ದೇಶದ ಪ್ರಮುಖ ಗಣ್ಯರ ಚಿತ್ರ ಕೆತ್ತನೆ, ವಿವಿಧ ಕಲಾಕೃತಿಗಳು ಗಮನ ಸೆಳೆಯುತ್ತವೆ. ಇದಲ್ಲದೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ ಅವರ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಆಕರ್ಷಕವಾಗಿದೆ.
105 ಕೆ.ಜಿ ಕುಂಬಳಕಾಯಿ: ಅಮೆರಿಕದ ತಳಿಯಾಗಿರುವ ಸಿಹಿ ಕುಂಬಳಕಾಯಿ ಪ್ರದರ್ಶನದಲ್ಲಿ ವಿಶೇಷ ಗಮನ ಸೆಳೆಯಿತು. ದೊಡ್ಡ ಗಾತ್ರದ ಈ ಕುಂಬಳಕಾಯಿ ಒಟ್ಟು 105 ಕೆ.ಜಿ ತೂಕವಿದೆ. ಈ ಕುಂಬಳಕಾಯಿ ನೋಡಿದವರೆಲ್ಲ ಇದೇನು ನಿಜವಾದ್ದೋ ಅಥವಾ ಮಣ್ಣಿನಿಂದ ಮಾಡಿದ್ದೋ ಎಂದು ಮುಟ್ಟಿ ಮುಟ್ಟಿ ಖಚಿತಪಡಿಸಿಕೊಳ್ಳುವುದು ಮಾಮೂಲಿಯಾಗಿತ್ತು.
ಶಿವಮೊಗ್ಗದ ಸಿ.ಎಚ್. ಗೋಪಾಲಕೃಷ್ಣ ಎಂಬವರು ಬೆಳೆದ ಈ ಕುಂಬಳಕಾಯಿಯನ್ನು ಐಮಂಗಲದ ಚೈತನ್ಯ ಎನ್ಕ್ಲೇವ್ ಸಂಸ್ಥೆ ಪ್ರದರ್ಶನಕ್ಕೆ ಇಟ್ಟಿದೆ. ಈ ಪ್ರದರ್ಶನ ಭಾನುವಾರ ಅಂತ್ಯಗೊಳ್ಳಲಿದ್ದು, ರಜಾದಿನವಾದ್ದರಿಂದ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

