ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಕಲರವ
ಹೊಳಲ್ಕೆರೆ: ಸರ್ಕಾರಿ ಶಾಲೆಯೆಂದರೆ ಕಲಿಕೆ ಶೂನ್ಯ, ಮಕ್ಕಳ ಬಗ್ಗೆ ಶಿಕ್ಷಕರ ನಿರ್ಲಕ್ಷ್ಯ ಹೀಗೆ ವಿವಿಧ ಕುಹುಕ ಮಾತುಗಳೇ ಹೆಚ್ಚು. ಹಾಗಾಗಿಯೇ ಪೋಷಕರು ಮಕ್ಕಳನ್ನು ಕಾನ್ವೆಂಟಿಗೆ ಕಳುಹಿಸುತ್ತಾರೆ ಎಂಬ ಮಾತೂ ಇದೆ.
ಇದಕ್ಕೆ ವಿರುದ್ಧವೆಂಬಂತೆ ತಾಲೂಕಿನ ಗಡಿ ಪ್ರದೇಶದ ಪುಟ್ಟಹಳ್ಳಿ ಹಾಗೂ ಕುಗ್ರಾಮವಾದ ಬೊಮ್ಮನಹಳ್ಳಿ ಶಾಲೆಗಳಿವೆ. ಈ ಶಾಲೆಯಲ್ಲಿ ಮಕ್ಕಳೆಲ್ಲ ಇಂಗ್ಲಿಷ್ನಲ್ಲೇ ಸಂವಾದ ನಡೆಸುತ್ತಾರೆ. ಶಾಲೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಇಂಗ್ಲಿಷ್ನಲ್ಲೇ ನಿರ್ವಹಿಸುವುದೂ ವಿಶೇಷ.
78 ಮಕ್ಕಳು: ಈ ಶಾಲೆ ಶಿಕ್ಷಕರ ಪ್ರಯತ್ನದಿಂದಾಗಿ ಜಿಲ್ಲೆಯಲ್ಲೆ ಹೆಸರು ಮಾಡಿದೆ. ಹೊಳಲ್ಕೆರೆಯಿಂದ 33 ಕಿ.ಮೀ ದೂರದಲ್ಲಿರುವ ಗ್ರಾಮದಲ್ಲಿ 190 ಮನೆಗಳಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 78 ಮಕ್ಕಳು ಬರುತ್ತಾರೆ. ಕಾನ್ವೆಂಟ್ಗಳ ಪರಿಣಾಮ ಈ ಶಾಲೆಗೆ ತಗುಲಿದ್ದರಿಂದ ಮಕ್ಕಳ ದಾಖಲಾತಿ ಸಂಖ್ಯೆ ಕುಸಿದಿತ್ತು. ಇಲಾಖೆಯ ಬಿಸಿಯೂಟ, ಉಚಿತ ಪಠ್ಯ ಪುಸ್ತಕ, ಬಟ್ಟೆ , ಬ್ಯಾಗು, ನೋಟ್ ಬುಕ್, ಸ್ಕಾಲರ್ ಶಿಪ್, ಪ್ರತಿಭಾ ಕಾರಂಜಿ ಮುಂತಾದವುಗಳನ್ನು ಇಲಾಖೆ ಜಾರಿಗೆ ತಂದಿತು. ಆದರೂ ಪೂರಕವಾಗಲಿಲ್ಲ. ಈ ಸಂದರ್ಭದಲ್ಲಿ ಇಂಗ್ಲಿಷ್, ವಿಜ್ಞಾನ, ಗಣಿತ ಶಿಕ್ಷಕರನ್ನು ನೇಮಿಸಿದಾಗ ಕೊಂಚ ಬದಲಾವಣೆ ಹೊಂದಿದರು ಎನ್ನುತ್ತಾರೆ ಮುಖ್ಯ ಶಿಕ್ಷಕ ಓಂಕಾರಪ್ಪ.
ಬದಲಾವಣೆಯ ಪರ್ವ: ವಿಜ್ಞಾನ, ಗಣಿತ, ಇಂಗ್ಲಿಷ್ ಭೋಧಿಸಲು ಹೊಸದಾಗಿ ಈ ಶಾಲೆಗೆ ಬಂದ ಶಿಕ್ಷಕಿ ಬಿ.ಟಿ. ಶೋಭಾ ಮತ್ತು ಕೆಂಚಪ್ಪರವರು ಗ್ರಾಮದ ಪೋಷಕರಲ್ಲಿ ಬದಲಾವಣೆಯ ಪರ್ವ ತಂದರು. ಬೊಮ್ಮೇನಹಳ್ಳಿ ಗ್ರಾಮದಲ್ಲಿ ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆಯನ್ನು ಕೇಳದ ಮಕ್ಕಳಿಗೆ ಇಂಗ್ಲಿಷ್ ಭಾಷೆ ಬೋಧಿಸುವುದು ಸವಾಲಾಗಿತ್ತು ಎನ್ನುತ್ತಾರೆ ಶಿಕ್ಷಕಿ ಶೋಭಾ.
ಶಿಕ್ಷಣ ಇಲಾಖೆಯ ತರಬೇತಿಯನ್ನು ತಕ್ಷಣದಲ್ಲಿ ಅಳವಡಿಸಿ ಬೋಧಿಸಲು ಅದರ ಫಲ ಅರಿಯಲು ಕೆಲವೇ ದಿನಗಳು ಸಾಕಾಗುವುದಿಲ್ಲ. ಅದಕ್ಕೆ ನಿರಂತರ ಶ್ರಮ ಅಗತ್ಯ ಎಂದರಿತ ಶೋಭಾ ಮೇಡಂ ಮಕ್ಕಳು ಇಂದು ಪರಸ್ಪರ ಇಂಗ್ಲಿಷ್ನಲ್ಲಿ ಮಾತಾನಾಡಿಸುವ ಮಟ್ಟಿಗೆ ಕಲಿತಿದ್ದಾರೆ. ಇದೊಂದು ಭಗೀರಥ ಪ್ರಯತ್ನವೇ ಸರಿ ಎನ್ನುತ್ತಾರೆ.
ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪಾಲಾಕ್ಷಪ್ಪ ಸ್ವಯಂ ಆಸಕ್ತಿ ಹಾಗೂ ಬಿಇಓ ಮಂಜುನಾಥ್ ಅವರ ಪ್ರೋತ್ಸಾಹ, ಹಿಂದೆ ಬಿಆರ್ಸಿ ಆಗಿದ್ದಾಗ ಪಾಲಾಕ್ಷಪ್ಪ ಹೊನ್ನಾಳಿಯಲ್ಲಿ ಮಾಡಿಸಿದ್ದ ಇಂಗ್ಲಿಷ್ ಕಾರ್ನರ್ ವೀಕ್ಷಿಸಿ ಅದನ್ನು ಶಾಲೆಯಲ್ಲಿ ಅಳವಡಿಸಿದ ಪರಿಣಾಮ ಇಂಗ್ಲಿಷ್ನ್ನು ಗ್ರಾಮಾಂತರ ಶಾಲೆಯಲ್ಲಿ ಮಕ್ಕಳಿಗೆ ಕಡಿಮೆ ಸಮಯದಲ್ಲಿ ಹೆಚ್ಚಿಗೆ ಮನದಟ್ಟಾಗುವ ರೀತಿ ಕಲಿಸಲು ನೆರವಾಯಿತು ಎನ್ನುತ್ತಾರೆ ಶಿಕ್ಷಕಿ ಶೋಭಾ.
ಕನ್ನಡದಲ್ಲಿ ಕಾಗುಣಿತ ಪದ ಒತ್ತಕ್ಷರ ಅಕ್ಷರಗಳ ವ್ಯತ್ಯಾಸ ಸ್ವರಗಳ ಏರಿಳಿತ ಗೊತ್ತಿಲ್ಲದೆ ಓದುವ ಮಕ್ಕಳನ್ನು ಇಂಗ್ಲಿಷ್ ಕಲಿಸುವ ಆಸೆ, ಶ್ರಮ ಆ ಶಿಕ್ಷಕರಿಗೆ ಗೊತ್ತು. ಇಂಗ್ಲೀಷ್ನಲ್ಲಿ ನಿರರ್ಗಳವಾಗಿ 4, 5, 6, 7 ನೇ ತರಗತಿ ಮಕ್ಕಳು ಶಿಕ್ಷಕರ ಸಹಾಯವಿಲ್ಲದೆ ತಪ್ಪಿಲ್ಲದೆ ಸ್ವರಗಳ ಏರಿಳಿತದೊಂದಿಗೆ ಇಂಗ್ಲಿಷ್ನಲ್ಲಿ ಮಾತನಾಡುವುದು, ಪರಸ್ಪರ ವ್ಯವಹರಿಸುವುದು. ಶಾಲೆಯ ಯಾವುದೇ ಸಮಾರಂಭದಲ್ಲಿ ಪ್ರಾರ್ಥನೆ, ಸ್ವಾಗತ, ನಿರೂಪಣೆ ಭಾಷಣ ವಂದನಾರ್ಪಣೆ ಮಾಡುವ ಮಟ್ಟಕ್ಕೆ ಮಕ್ಕಳು ಪ್ರಬುದ್ಧರಾಗಿದ್ದಾರೆ ಎಂದರೆ ಈ ವಿಚಾರದಲ್ಲಿ ಇಂಗ್ಲಿಷ್ ಕಾನ್ವೆಂಟಿನ ಶಾಲೆಗಳು ತಲೆತಗ್ಗಿಸಬೇಕು.
ಕಳೆದ ವಾರ ಇಂಗ್ಲಿಷ್ ಕಾರ್ನರ್ ಉದ್ಘಾಟನೆಯಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಲೇಕಾಕ್ಷಪ್ಪ, ಬಿಇಓ ಮಂಜುನಾಥ್ ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷೆಯ ಪ್ರೌಢಿಮೆ ನೋಡಿ ಕ್ಷಣ ಅವಾಕ್ಕಾದರು. 4ನೇ ತರಗತಿಯ ಮಕ್ಕಳಾದ ಶಶಿಕಲಾ, ಅಂಬಿಕ, ಭೂಮಿಕ, 5 ನೇ ತರಗತಿಯ ತೇಜಸ್ವಿನಿ, ನಂದಿತ, 6 ನೇ ತರಗತಿಯ ಮಕ್ಕಳಾದ ಭಾಗ್ಯ, ಕಾರ್ತಿಕ್, 7 ನೇ ತರಗತಿಯ ಡಿ.ಪಲ್ಲವಿ, ರೇಣುಕ, ಕಾವ್ಯ, ರಂಜಿತ ಅಧಿಕಾರಿಗಳನ್ನ ಹಾಗೂ ಬಿದರೆಕೆರೆ ಕ್ಲಸ್ಟರ್ನ ಶಿಕ್ಷಕರನ್ನ ಸ್ವಾಗತಿಸಿದ್ದು, ಸಮಾರಂಭ ಆಯೋಜಿಸಿ ಪ್ರಾರ್ಥನೆ, ಸ್ವಾಗತ, ನಿರೂಪಣೆ, ನಾಟಕ, ವಂದನಾರ್ಪಣೆಗಳನ್ನೆಲ್ಲ ಇಂಗ್ಲಿಷ್ನಲ್ಲೇ ನಿರ್ವಹಿಸಿದ್ದು ಶಿಕ್ಷಕರಲ್ಲಿ ಆಶ್ಚರ್ಯ ಮೂಡಿಸಿತು.
-ಹೊಳಲ್ಕೆರೆ ಶಿವರುದ್ರಪ್ಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

