ಚಿತ್ರದುರ್ಗ

ಪತ್ರಕರ್ತರ ಅಭಿವೃದ್ಧಿ ನಿಗಮ ಬೇಕು: ಜನಾರ್ದನ ಸ್ವಾಮಿ

Published On :

ಚಿತ್ರದುರ್ಗ: ಪತ್ರಕರ್ತರ ಹಿತಾಸಕ್ತಿ ದೃಷ್ಟಿಯಿಂದ ಸರ್ಕಾರ ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಅದಕ್ಕಾಗಿ  ಮುಖ್ಯಮಂತ್ರಿಯೊಂದಿಗೆ ಮಾತನಾಡಲು ಸಿದ್ಧ ಎಂದು ಲೋಕಸಭಾ ಸದಸ್ಯ ಜನಾರ್ದನಸ್ವಾಮಿ ಒತ್ತಾಯಿಸಿದರು.  
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಮುರುಘಾಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 31ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ, ಪ್ರಸ್ತುತ ಪತ್ರಕರ್ತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ವಸ್ತುನಿಷ್ಠ ವರದಿಗಳನ್ನು ನೀಡುವಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಿದೆ. ಇದರಿಂದ ಪತ್ರಕರ್ತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದರು.
ಡಾ. ಶಿವಮೂರ್ತಿ ಮುರುಘಾ ಶರಣರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಪತ್ರಕರ್ತರನ್ನು 'ಆಸನ ವಿಜಯ' ಎನ್ನಲಾಗುತ್ತದೆ. ಒಂದೇ ಕಡೆ ಕುಳಿತು ಹತ್ತು ಹಲವು ಸಂಗತಿಗಳನ್ನು ಸಂಗ್ರಹಿಸುವ ಸಾಮರ್ಥ್ಯ ಪತ್ರಕರ್ತರಾದವರಿಗಿರಬೇಕು. ಆಧುನಿಕ ಜಗತ್ತು ಆಪತ್ತಿನ, ಆತಂಕದ ಜಗತ್ತು. ಇದು ಯಾವ ಧಾರ್ಮಿಕರನ್ನೂ ಬಿಟ್ಟಿಲ್ಲ. ಪತ್ರಕರ್ತರೂ ಇದೇ ಸ್ಥಿತಿಯಲ್ಲಿದ್ದಾರೆ. ಅವರು ಸುದ್ದಿಯ ಮೂಲ ಹುಡುಕುತ್ತಾ ಹೋಗುತ್ತಾರೆ. ಉತ್ತಮ ಸುದ್ದಿ ನೀಡುವವನು ಉತ್ತಮ ಪತ್ರಕರ್ತನಾಗಿರುತ್ತಾನೆ ಎಂದರು.  
ಗಂಭೀರ ಚಿಂತನೆ ಅಗತ್ಯ: ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಊಟದಲ್ಲಿ ಕರಿಬೇವನ್ನು ಬಳಸಿ ಬಿಸಾಕುವಂತೆ ಇಂದಿನ ಸಮಾಜದಲ್ಲಿ ಪತ್ರಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ. ವಿಧಾನಸಭೆ, ಸಂಸತ್ ಸದನಗಳಲ್ಲಿ ಒಬ್ಬ ಜನಪ್ರತಿನಿಧಿಯೂ ಪತ್ರಕರ್ತರ ಸಮಸ್ಯೆಗಳ ಕುರಿತು ಧ್ವನಿ ಎತ್ತುವುದಿಲ್ಲ.  ಶಿಕ್ಷಣ, ಕ್ರೀಡೆ, ಚಿತ್ರರಂಗ, ಪತ್ರಿಕಾರಂಗಗಳೆಲ್ಲವೂ ಈಗ ಉದ್ಯಮವಾಗಿ ಪರಿವರ್ತನೆಯಾಗಿವೆ. ವಕೀಲರು, ಪತ್ರಕರ್ತರ ನಡುವೆ ಸಮಸ್ಯೆ ಉಂಟಾದಾಗ ಕೇವಲ ಮುರುಘಾ ಶರಣರು ಮಾತ್ರ ಸಮಸ್ಯೆ ಬಗೆಹರಿಸಲು ಮುಂದಾದರು. ಇಂಥ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಪತ್ರಕರ್ತರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕೆಂದರು. ಸಂಘದ ರಾಜ್ಯ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.