ಬರಡಾಗುತ್ತಿರುವ ಪರಿಸರ: ಸಿಇಓ ಆತಂಕ
ಚಿತ್ರದುರ್ಗ: ಮಾನವನ ಅತಿಯಾದ ದುರಾಸೆಯಿಂದ ಪರಿಸರ ಬರಡಾಗುತ್ತಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ ವಿಷಾದಿಸಿದರು.
ಶುಕ್ರವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಚಿತ್ರದುರ್ಗ ವಿಜ್ಞಾನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪರಿಸರೋತ್ಸವ - 2013 ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವನಿಗೆ ಆಸೆ ಇರುವುದು ಸಹಜ. ಆದರೆ, ದುರಾಸೆ ಇರಬಾರದು.
ಇಡೀ ವರ್ಷ ಬೀಳುವ ಮಳೆ ನೀರನ್ನು ಅಲ್ಲಲ್ಲಿ ಸಂಗ್ರಹ ಮಾಡಬೇಕು. ಗಿಡ ಮರ ಬೆಳೆಸಬೇಕು. ಅವುಗಳಿಂದ ನೀರು ಭೂಮಿಯಲ್ಲಿ ಇಂಗಿ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಮಳೆ ನೀರು ಕೊಯ್ಲು ಮಾಡುವುದರಿಂದ ನೀರಿನ ಕೊರತೆ ಕಡಿಮೆಯಾಗುತ್ತದೆ ಎಂದರು.
ಅಭಿವೃದ್ಧಿ: ಪರಿಸರ ಮಾಲಿನ್ಯ ತಡೆಗಟ್ಟಲು ಸಾಕಷ್ಟು ಗಿಡ ಮರ ನೆಟ್ಟು ಪೋಷಿಸಬೇಕು. ಅಭಿವೃದ್ಧಿಗೆ, ಸ್ವಚ್ಛತೆಗೆ ಗಮನ ಕೊಟ್ಟಾಗ ನಾವೆಲ್ಲ ಚೆನ್ನಾಗಿ ಬದುಕಲು ಸಾಧ್ಯವಾಗುತ್ತದೆ. ನಾವು ಚೆನ್ನಾಗಿದ್ದರೆ ನಮ್ಮ ಊರು, ದೇಶ ಚೆನ್ನಾಗಿರುತ್ತದೆ. ಇದಕ್ಕೆ ಎಲ್ಲರೂ ಕೈಜೋಡಿಸಿ ಪರಿಸರ ಸಂರಕ್ಷಣೆ, ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಗುಣಾತ್ಮಕ ಬದಲಾವಣೆ: ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಮಾತನಾಡಿ, ಚಿತ್ರದುರ್ಗದ ಐತಿಹಾಸಿಕ ಕೋಟೆ ನೋಡಲು ಬಂದ ಪ್ರವಾಸಿಗರಿಗೆ ನಗರ ಎಷ್ಟೊಂದು ಗಲೀಜಾಗಿದೆ ಎಂಬ ಭಾವನೆ ಬರುವಂತೆ ನಗರದ ಪರಿಸ್ಥಿತಿಯಿದೆ. ಪ್ರತಿ ವಾರ್ಡ್ನಲ್ಲೂ ಕಸ ಬಿದ್ದಿರುವುದನ್ನು ನೋಡುತ್ತೇವೆ. ಈಗ ನನಗೆ ನಗರಸಭೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿದೆ. ಒಂದು ತಿಂಗಳಲ್ಲಿ ಗುಣಾತ್ಮಕ ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ನಗರದ ಬಹುತೇಕ ಕಡೆ ಗೋಡೆಗಳ ಮೇಲೆ ಸಿನಿಮಾ ಪೋಸ್ಟರ್ಗಳು ಇರುತ್ತವೆ. ಅವುಗಳನ್ನು ಹಾಕದಂತೆ ನೋಟಿಸ್ ನೀಡಲಾಗುವುದು. ಅವುಗಳನ್ನೆಲ್ಲ ತೆಗೆಸಿ ಐತಿಹಾಸಿಕ ಚಿತ್ರಗಳನ್ನು ಬರೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಿಸರ ಮಿತ್ರ ಶಾಲೆ 2012-13ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪ್ರಾದೇಶಿಕ ಪರಿಸರ ಅಧಿಕಾರಿ ಸಿ.ಎಂ. ಸತೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್. ಮಂಜುನಾಥ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಅಭಿವೃದ್ಧಿ) ಎಂ. ಮಲ್ಲಣ್ಣ, ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಶಂಕರಪ್ಪ ಭಾಗವಹಿಸಿದ್ದರು. ಪರಿಸರವಾದಿ ಎಚ್.ಕೆ.ಎಸ್. ಸ್ವಾಮಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

