ಚಿತ್ರದುರ್ಗ

ಕುಡಿವ ನೀರಿನ ಸಮಸ್ಯೆ ಭೀಕರ

Published On :

ಕಪ್ರ ವಾರ್ತೆ, ಚಿತ್ರದುರ್ಗ, ಮಾ.9
ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಜನ, ಜಾನುವಾರು ಎನ್ನದೆ ಸಮಸ್ಯೆಯ ಬಿಸಿ ಎಲ್ಲರಿಗೂ ತಾಗಿದ್ದು, ಬೇಸಿಗೆಯಲ್ಲಿ ಮಳೆಯಾಗುವ ಯಾವುದೇ ಲಕ್ಷಣಗಳಿಲ್ಲದ್ದರಿಂದ ಮತ್ತಷ್ಟು ಭೀಕರ ಪರಿಸ್ಥಿತಿ ಎದುರಾಗುವ ಅಪಾಯವಿದೆ.
ಆತಂಕ: ಜಿಲ್ಲೆಯ 5,325 ಕೊಳವೆ ಬಾವಿಗಳ ಪೈಕಿ 2,441 ಕೊಳವೆ ಬಾವಿಗಳು ಒಣಗಿ ಹೋಗಿವೆ. ಕೊಳವೆ ಬಾವಿ ವೈಫಲ್ಯದ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಜಿಪಂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಆತಂಕದಲ್ಲಿ ನಿದ್ರಾಹೀನ ರಾತ್ರಿಗಳನ್ನು ಕಳೆಯುವಂತಾಗಿದೆ.
ನೀರು ಪೂರೈಕೆ: ಜಿಪಂ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಬಿ. ಚನ್ನಬಸಪ್ಪ ಮಾತನಾಡಿ, ಜಿಲ್ಲೆಯ 705 ಪೈಪ್‌ಲೈನ್ ಕುಡಿಯುವ ನೀರಿನ ಪೂರೈಕೆ ಯೋಜನೆಗಳ ಪೈಕಿ 131, 1,959 ಕಿರು ನೀರು ಪೂರೈಕೆ ಯೋಜನೆಗಳ ಪೈಕಿ 569, 2,661 ಕೈ ಪಂಪ್‌ಗಳ ಪೈಕಿ 1,741 ಕೊಳವೆ ಬಾವಿಗಳು ಒಣಗಿ ಹೋಗಿವೆ. ಈ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗುವಂತೆ ಮಾಡಲು ಸತತ ಪ್ರಯತ್ನಗಳು ನಡೆದಿವೆ ಎಂದರು.
ತ್ವರಿತ ಗತಿಯಲ್ಲಿ ಪ್ರಾರಂಭ: 540 ಕೊಳವೆ ಬಾವಿಗಳನ್ನು ಮತ್ತಷ್ಟು ಆಳಕ್ಕೆ ಕೊರೆದು ಸ್ವಚ್ಛಗೊಳಿಸುವ ಕಾರ್ಯಕ್ಕೆ ಗುರುತಿಸಲಾಗಿದೆ. ಪ್ರಸ್ತಾವನೆಯನ್ನು ಜಿಪಂಗೆ ಸಲ್ಲಿಸಲಾಗಿದೆ. ಪ್ರಸ್ತಾವನೆಗೆ ಒಪ್ಪಿಗೆ ದೊರೆತ ತಕ್ಷಣ ಕಾಮಗಾರಿ ತ್ವರಿತ ಗತಿಯಲ್ಲಿ ಪ್ರಾರಂಭಗೊಳ್ಳುತ್ತದೆ ಎಂದು ಚನ್ನಬಸಪ್ಪ ತಿಳಿಸಿದರು.
ನೀರು ಕಲುಷಿತ: ಸತತ ಎರಡು ವರ್ಷ ತೀವ್ರ ಬರಗಾಲ ಬಂದಿರುವುದು ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಲು ಕಾರಣವಾಗಿದೆ. ಬಹುತೇಕ ಕೊಳವೆ ಬಾವಿಗಳ ನೀರಿನ ಲಭ್ಯತೆ ತೀವ್ರವಾಗಿ ಕಡಿಮೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ 600ರಿಂದ 700 ಅಡಿಗಳಿಗೆ ಕುಸಿದಿದೆ. ಭೂಮಿ ಮೇಲಿನ ನೀರು ಕಲುಷಿತಗೊಳ್ಳುತ್ತಿದೆ. ಆದ್ದರಿಂದ ಹಲವು ವಿಧದ ನೀರು ಪೂರೈಕೆ ಯೋಜನೆಗಳನ್ನು ತಯಾರಿಸಲಾಗುತ್ತಿದೆ. 990 ಕೊಳವೆ ಬಾವಿಗಳಿಗೆ ಮಳೆ ನೀರು ಕೊಯ್ಲು ಮತ್ತು ಮರು ಪೂರಣ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಗ್ಗೆ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಈ ಯೋಜನೆ ಕಾರ್ಯಗತಗೊಂಡರೆ ಕುಡಿಯುವ ನೀರಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಚನ್ನಬಸಪ್ಪ ಹೇಳಿದರು.
 ಸಿಂಗಾಪುರ, ಚಿಕ್ಕಪ್ಪನಹಳ್ಳಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ಕಾರಣ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ನಮಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಈ ಬಗ್ಗೆ ಯಾವುದೇ ಗ್ರಾಮಸ್ಧರು ಆತಂಕ ಪಡಬೇಕಾಗಿಲ್ಲ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.