ನೇತಾಜಿ ಪ್ರೌಢಶಾಲೆಗೆ ಸುವರ್ಣ ಸಂಭ್ರಮ
ಕಪ್ರ ವಾರ್ತೆ, ಹಿರಿಯೂರು, ಮಾ.9
ಕಾಡುಗೊಲ್ಲರ ಸಾಂಸ್ಕೃತಿಕ ದೇವತೆ ವದ್ದೀಕೆರೆ ಸಿದ್ದಪ್ಪ, ಮದ್ದನಕುಂಟೆ ಯರ್ರಪ್ಪ, ಹರ್ತಿ ಸಂಸ್ಥಾನದಂತಹ ಐತಿಹಾಸಿಕ ಮಹತ್ವವುಳ್ಳ ಈ ಪ್ರದೇಶದಲ್ಲಿ ನಾವೆಲ್ಲರೂ ಓದಿ ಬೆಳೆದ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ತಲೆಮಾರಿನ ನೆನಪುನಗಳಿಗೆ ಅವಕಾಶ ಮಾಡಿಕೊಟ್ಟಿದೆಯೆಂದು ಜಾನಪದ ವಿದ್ವಾಂಸ ಮೀರಾಸಾಬಿ ಹಳ್ಳಿ ಶಿವಣ್ಣ ಹೇಳಿದರು.
ತಾಲೂಕಿನ ಯರಬಳ್ಳಿ ಗ್ರಾಮದ ನೇತಾಜಿ ಗ್ರಾಮಾಂತರ ಪ್ರೌಢಶಾಲೆ ಸಂಸ್ಥಾಪನೆಗೊಂಡು ಐವತ್ತು ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಹಳೆಯ ವಿದ್ಯಾರ್ಥಿಗಳು ರೂಪಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆ ಹತ್ತಾರು ಬಗೆಯ ಪ್ರತಿಭೆಗಳನ್ನು ಪೋಷಿಸಿ ಭವಿಷ್ಯ ರೂಪಿಸುತ್ತದೆಯೆಂಬುದಕ್ಕೆ ಈ ಪ್ರೌಢಶಾಲೆಯೇ ಸಾಕ್ಷಿಯಾಗಿದ್ದು, ಇಲ್ಲಿ ಓದಿ ಬೆಳೆದವರಲ್ಲಿ ಅನೇಕರು ಹತ್ತಾರು ಕ್ಷೇತ್ರಗಳಲ್ಲಿ ಹೆಸರು ಮಾಡಿ ತಮ್ಮದೇ ಛಾಪು ಒತ್ತಿದ್ದಾರೆಂದು ಹೇಳಿದರು.
ಮಹನೀಯರ ಒತ್ತಾಸೆ: ಸಂಸ್ಥಾಪಕ ಕಾರ್ಯದರ್ಶಿ ಜಿ. ತಿಪ್ಪೇಸ್ವಾಮಿ ಮಾತನಾಡಿ, ಶಾಲೆಗೆ 1962 ರಲ್ಲಿ ಅನೇಕ ಮಹನೀಯರ ಒತ್ತಾಸೆಯ ಫಲವಾಗಿ ಹುಟ್ಟು ನೀಡಲಾಯಿತೆಂದು ತಿಳಿಸಿದರು. ಆ ಸಂದರ್ಭದಲ್ಲಿ ಈ ಭಾಗದಲ್ಲಿ ಶಾಲೆಯ ಸ್ಥಾಪನೆಗೆ ಭೂಮಿ ನೀಡಿದವರಿಗೆ ಬೇರೆ ಕಡೆ ಮತ್ತೆ ಭೂಮಿಯನ್ನು ಕೊಡಿಸಿ, ಮನೆ ಮನೆಗೆ ಹೋಗಿ ಚಂದಾ ಸಂಗ್ರಹಿಸಿ ಶಾಲೆ ತೆರೆದಿದ್ದು ಸಾರ್ಥಕವಾಯಿತೆಂದು ಹೇಳಿದರು. ಅಂದು ಪಟ್ಟ ಕಷ್ಟಗಳ ಫಲವಾಗಿ ಈ ಶಾಲೆಯಲ್ಲಿ ಕಳೆದ ಐದು ದಶಕಗಳಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಸ್ಥಳೀಯ ಪ್ರತಿಭೆಗಳಿಗೆ ಆರಂಭದ ವರ್ಷಗಳ ಶಿಕ್ಷಣವನ್ನು ನೀಡಿದ ಹಿರೆಮೆಯನ್ನು ಗಳಿಸಿಕೊಂಡಿದೆಯೆಂದು ಹೇಳಿದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಿ. ಯಶೋಧರ್ ಮಾತನಾಡಿ, ಬಾಲ್ಯದಲ್ಲಿ ಶಾಲೆಯಲ್ಲಿ ಓದಿದ ನೆನಪುಗಳು ಹಸಿರಾಗಿವೆ. ಶಾಲೆಯಲ್ಲಿ ಪಾಠ ಪ್ರವಚನಗಳ ಜೊತೆಗೆ ಅಂಗಳದಲ್ಲಿ ಸ್ನೇಹಿತರೊಂದಿಗೆ ಆಡಿ ಬೆಳೆದಿದ್ದೇನೆ. ಆ ಸಂದರ್ಭದಲ್ಲಿ ಹತ್ತಾರು ಸಲ ಎದ್ದು ಬಿದ್ದ ನೆನಪುಗಳೇ ಬದುಕಿನ ಆಟಕ್ಕೂ ಸ್ಪೂರ್ತಿಯಾಗಿವೆಯೆಂದು ಹೇಳಿದರು.
ಕುಡಿಯುವ ನೀರು: ಶಾಸಕ ಡಿ. ಸುಧಾಕರ್ ಮಾತನಾಡಿ, ಯಾವುದೇ ವಿದ್ಯಾಸಂಸ್ಥೆಗೆ ಹುಟ್ಟುಕೊಟ್ಟರೇ ಸಮಾಜದಲ್ಲಿ ಅದು ದೀರ್ಘಕಾಲದ ಪರಿಣಾಮಗಳನ್ನು ಬೀರುತ್ತಾ ಉತ್ತಮ ವ್ಯಕ್ತಿತ್ವವವನ್ನು ರೂಪಿಸುತ್ತದೆಯೆನ್ನುವುದಕ್ಕೆ ಈ ಫ್ರೌಢ ಶಾಲೆ ಸಾಕ್ಷಿಯಾಗಿದೆಯೆಂದರು. ಈ ಕಾರಣಕ್ಕೆ ನಾನು ಶಾಸಕನಾದ ತರುವಾಯ ತಾಲೂಕಿನಾದ್ಯಂತ ಅಗತ್ಯವಿರುವ ಕಡೆ ಶಾಲಾ ಕೊಠಡಿ, ಹಾಸ್ಟೆಲ್ ನಿರ್ಮಾಣ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡಿದ್ದೇನೆ. ಉನ್ನತ ಶಿಕ್ಷಣ ಮತ್ತು ಪ್ರೌಢಶಾಲಾ ಹಂತದ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸುವುದಕ್ಕೆ ಶ್ರಮ ವಹಿಸಲಾಗಿದೆಯೆಂದರು.
ಇದಕ್ಕೆ ಸಾಕ್ಷಿಯಾಗಿ ಇಂದು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ತೋಟಗಾರಿಕಾ ಕಾಲೇಜುಗಳು ಸೇರಿದಂತೆ ಮತ್ತಿತರ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆಂದು ಹೇಳಿದರು. ಡಿಸಿಸಿ ಬ್ಯಾಂಕ್ ಅದ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಆಲೂರು ರಂಗಸ್ವಾಮಿ, ಎಲ್.ಟಿ. ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಕಂದೀಕೆರೆ ರಂಗನಾಥಪ್ಪ, ದಯಾನಂದ್, ಸಿದ್ದಯ್ಯ, ಜಗದೀಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

