ಟಿವಿ ಸ್ಟೇಷನ್ ಕೆರೆ ಅಭಿವೃದ್ಧಿಗೆ 3.5 ಕೋಟಿ
ದಾವಣಗೆರೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪಾಲಿಕೆ ಸದಸ್ಯರ ಒತ್ತಾಯ
ದಾವಣಗೆರೆ: ಮಹಾ ನಗರಕ್ಕೆ ಕುಡಿಯುವ ನೀರು ಪೂರೈಸುವ ಟಿವಿ ಸ್ಟೇಷನ್ ಕೆರೆ ಅಭಿವೃದ್ಧಿಗೆ 3.5 ಕೋಟಿ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಕುಂದುವಾಡ ಕೆರೆಗೂ ಸಮರ್ಪಕವಾಗಿ ನೀರು ತುಂಬಿಸಲು ಪೈಪ್ ಲೈನ್ ಅಳವಡಿಸಲು ರೈತರೂ ಸ್ಪಂದಿಸುತ್ತಿದ್ದಾರೆ ಎಂದು ಪಾಲಿಕೆ ಆಯುಕ್ತ ಬಿ. ಭೀಮಪ್ಪ ತಿಳಿಸಿದರು.
ನಗರದ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಮೇಯರ್ ಸುಧಾ ಜಯರುದ್ರೇಶ ಅಧ್ಯಕ್ಷತೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಟಿವಿ ಸ್ಟೇಷನ್ ಕೆರೆ 3.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಸುಮಾರು 9 ಮೀಟರ್ ನೀರು ಸಂಗ್ರಹ ಸಾಮರ್ಥ್ಯದ ಟಿವಿ ಸ್ಟೇಷನ್ ಕೆರೆಯಲ್ಲಿ 6.5 ಮೀಟರ್ ನೀರು ಸಂಗ್ರಹವಾಗಿದೆ. ಕುಂದುವಾಡ ಕೆರೆ 6.5 ಮೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, 1.5 ಮೀಟರ್ ಸಂಗ್ರಹವಾಗಿದೆ. ಕುಡಿಯುವ ನೀರಿಗಾಗಿ ಭದ್ರಾ ನಾಲೆಯಿಂದ ಕೆರೆಗೆ ನೀರು ತುಂಬುತ್ತಿದ್ದು, ರೈತರೂ ಸ್ಪಂದಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಸದಸ್ಯ ಬಾ.ಮ. ಬಸವರಾಜಯ್ಯ ಮಾತನಾಡಿ, ಪಾಲಿಕೆ ಗ್ರಾಮಾಂತರ ಭಾಗ ಕಡೆಗಣಿಸಿದೆ. ಇಂದಿಗೂ ನದಿ ನೀರಲ್ಲ, ಕೊಳವೆಬಾವಿ ನೀರು ಪೂರೈಸುತ್ತಿಲ್ಲ. ಇದರಿಂದ ತೀವ್ರ ಸಮಸ್ಯೆಯಾಗುತ್ತಿದ್ದು, ಬೋರ್‌ವೆಲ್ ದುರಸ್ಥಿ ಕೆಲಸ ಮಾಡುತ್ತಿಲ್ಲ. ಅಗತ್ಯವಿರುವಲ್ಲಿ ಕೊಳವೆಬಾವಿ ಕೊರೆಸುತ್ತಿಲ್ಲ ಎಂದು ದೂರಿದಾಗ ಸದಸ್ಯರಾದ ಜಹೀದಾಬೀ, ಎನ್.ಕೆ. ಇಸ್ಮಾಯಿಲ್
ಧ್ವನಿಗೂಡಿಸಿದರು.
ಅಧಿಕಾರಿಗಳು ಮುಂದಾಗಲಿ: ಮೇಯರ್ ಸುಧಾ ಜಯರುದ್ರೇಶ ಮಾತನಾಡಿ, ಬೋರ್‌ವೆಲ್ ದುರಸ್ಥಿಗೆ ಅಧಿಕಾರಿಗಳು ಮುಂದಾಗಬೇಕು. ಅಗತ್ಯ ಇರುವಲ್ಲಿ ಬೋರ್ ಕೊರೆಸಬೇಕು. ಮಂಡಕ್ಕಿಭಟ್ಟಿ ಭಾಗದಲ್ಲಿ ನೀರು ಪೂರೈಸಲು ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದೆ ಎಂದರು.
ವಿಪಕ್ಷ ಸದಸ್ಯ ದಿನೇಶ ಕೆ. ಶೆಟ್ಟಿ ಮಾತನಾಡಿ, ದಕ್ಷಿಣ ಕ್ಷೇತ್ರದಲ್ಲಿ 25 ಲಕ್ಷ ಅನುದಾನ ನೀಡುವ ವಿಚಾರ ಎಲ್ಲಿಗೆ ಬಂದಿತು ಪ್ರತಿ ವಾರ್ಡ್‌ಗೆ 3 ಬೋರ್‌ವೆಲ್ ಕೊರೆಸುವುದಾಗಿ ಹೇಳಿದ, ಉತ್ತರ ಕ್ಷೇತ್ರ ಕಡೆಗಣಿಸಲಾಗಿದೆ. ಉತ್ತರ ಭಾಗದಲ್ಲಿ ಜನ ವಾಸಿಸುತ್ತಿದ್ದಾರೆ ಎಂಬುದನ್ನೇ ಆಡಳಿತ ಪಕ್ಷ ಮರೆತಂತಿದೆ ಎಂದು ಟೀಕಿಸಿದರೆ, ವಿಪಕ್ಷ ಸದಸ್ಯ ಕೆ.ಜಿ. ಶಿವಕುಮಾರ ಮಾತನಾಡಿ, ತಮ್ಮ ವಾರ್ಡ್ ನಲ್ಲಿ 3 ಬೋರ್ ಗುರುತಿಸಿದ್ದರೂ ದುರಸ್ಥಿಪಡಿಸಿಲ್ಲ ಎಂದು ದೂರಿದರು.
ಕುಡಿಯುವ ನೀರಿಗೆ 12ಕೋಟಿ: ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಲೋಕೇಶ ಮಾತನಾಡಿ, ಕುಡಿಯುವ ನೀರಿಗಾಗಿ ವಾರ್ಷಿಕ 12 ಕೋಟಿ ಹಣವನ್ನು ಪಾಲಿಕೆ ಖರ್ಚು ಮಾಡುತ್ತಿದೆ. ಸರ್ಕಾರದ ಸೂಚನೆ ಪ್ರಕಾರ 660 ಬದಲಿಗೆ 2200 ಗಳನ್ನು ಜನತೆ ನೀರಿನ ಕಂದಾಯವಾಗಿ ಭರಿಸಬೇಕು. ವಿಪಕ್ಷ ಸದಸ್ಯರು ಮಹಾ ಜನತೆಯಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಬಾರದು. ಇಂದು ಹಣ ಕಟ್ಟದಿದ್ದರೆ, ಮುಂದೆ ಬಾಕಿ ಹಣ ಒಂದೇ ಸರಿ ಕಟ್ಟುವಾಗ ಮತ್ತಷ್ಟು ಹೊರೆಯಾಗುತ್ತದೆ ಎಂದು ಎಚ್ಚರಿಸಿದರು.
ವಿಪಕ್ಷ ನಾಯಕ ಡಿ.ಎನ್. ಜಗದೀಶ ಮಾತನಾಡಿ, ಹಳೆ ನೀರಿನ ಕಂದಾಯವನ್ನು ವಸೂಲು ಮಾಡುವಂತೆ ನಿರ್ಣಯ ಕೈಗೊಂಡರೂ ಹೊಸ ತೆರಿಗೆ ವಸೂಲು ಮಾಡಲಾಗುತ್ತಿದೆ. ಕಸ ಸಂಗ್ರಹಕ್ಕೆ ಉಪ ಕರ ವಸೂಲು ಮಾಡುವ ಮೂಲಕ ಜನರಿಗೆ ಪಾಲಿಕೆ ಹೊರೆ ಹೊರಿಸುತ್ತಿದೆ ಎಂದು ದೂರಿದರು.
ಉಪ ಮೇಯರ್ ಮಹೇಶ ರಾಯಚೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪಿ.ಎಸ್. ಜಯಣ್ಣ, ಆವರಗೆರೆ ಜಿ. ಸುರೇಶ, ಸದಸ್ಯರಾದ ಮಾದಮ್ಮ ಮುನಿಸ್ವಾಮಿ, ಉಮಾ ಪ್ರಕಾಶ, ಕೆ.ಆರ್. ವಸಂತ ಕುಮಾರ, ಎಂ.ಎಸ್. ವಿಠಲ್, ಎಚ್.ಎನ್. ಗುರುನಾಥ, ಸಂಕೋಳ್ ಚಂದ್ರಶೇಖರ, ಜ್ಯೋತಿ ಸಿದ್ದೇಶ, ಜ್ಯೋತಿ ಪಾಟೀಲ್, ನಾಗರತ್ನ, ಸೌಭಾಗ್ಯ ಮುಕುಂದ, ರೇಖಾ ನಾಗರಾಜ, ಎಚ್.ಎಂ. ರುದ್ರಮುನಿಸ್ವಾಮಿ, ಕೋಳಿ ಇಬ್ರಾಹಿಂ, ಎನ್.ಕೆ. ಇಸ್ಮಾಯಿಲ್ ಸೇರಿದಂತೆ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

