ದಾವಣಗೆರೆ

ಏತ ನೀರಾವರಿಗೆ ಇಂದು ಸಿಎಂ ಚಾಲನೆ

Published On :

ಶಿವಮೊಗ್ಗ: ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಗದೀಶ್ ಶೆಟ್ಟರ್ ಅವರು ಭಾನುವಾರ ಜಿಲ್ಲೆಗೆ ಆಗಮಿಸಲಿದ್ದು, ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ತುಂಗಾ ಏತ ನೀರಾವರಿ ಯೋಜನೆಗೆ ಚಾಲನೆ ನೀಡುವರು.
ಈ ಸಂಬಂಧ ಶಿವಮೊಗ್ಗ ಹಾಗೂ ಆಯನೂರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆಯಾಗಿದೆ. ಇದು ಮುಖ್ಯಮಂತ್ರಿ ಶೆಟ್ಟರ್ ಅವರ ಎರಡನೇ ಭೇಟಿ. ಬೆಳಿಗ್ಗೆ 9.30ಕ್ಕೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಶಿವಮೊಗ್ಗ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಚಾಲನೆಗೊಳ್ಳಲಿವೆ: ಇಲ್ಲಿ ನಗರದ ಜನತೆಗೆ ನಿರಂತರ ನೀರು ಒದಗಿಸುವ ಯೋಜನೆ, ಗಾಜನೂರಿನಿಂದ ನೂತನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ, ಕೊಳಚೆ ನೀರು ಶುದ್ಧೀಕರಿಸಿ ನದಿಗೆ ನೀರು ಹರಿಸುವ ಶುದ್ಧ ತುಂಗಾ, ರೈಲ್ವೆ ಮೇಲುಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ಚಾಲನೆಗೊಳ್ಳಲಿವೆ. ನಂತರ ಮುಖ್ಯಮಂತ್ರಿ ಶೆಟ್ಟರ್ ಅವರು 11.30ಕ್ಕೆ ಆಯನೂರಿನಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ- ಉದ್ಘಾಟನೆ ನೆರವೇರಿಸುವರು.
ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಚಿವರಾದ ಬಸವರಾಜ ಬೊಮ್ಮಾಯಿ, ಎ. ನಾರಾಯಣಸ್ವಾಮಿ, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಸೇರಿದಂತೆ ಹಲವರು ಪಾಲ್ಗೊಳ್ಳುವರು.
ಆಯನೂರಿನಲ್ಲಿ: ಹಂಚಿನ ಸಿದ್ಧಾಪುರದ ಮೊರಾರ್ಜಿ ಶಾಲೆ, ಹಾರ್ನಹಳ್ಳಿ ಮತ್ತು ಚೋರಡಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಪುರದಾಳು ಪಶು ಆಸ್ಪತ್ರೆ, ನಿಧಿಗೆ ಮತ್ತು ಹಾರ್ನಹಳ್ಳಿಯ ರೈತ ಸಂಪರ್ಕ ಕೇಂದ್ರ, ಸೋಮಿನಕೊಪ್ಪದ ಪಶುವೈದ್ಯ ಕಾಲೇಜು ಉದ್ಘಾಟನೆಯು ಆಯನೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಡೆಯಲಿದೆ.
 ತುಂಗಾ ಏತ ನೀರಾವರಿ, ಕೃಷಿ ಮತ್ತು ತೋಟಗಾರಿಕೆ ವಿವಿ, ಸಿರಿಗೆರೆಯ ಮೊರಾರ್ಜಿ ವಸತಿ ಶಾಲೆ, ಹೊಳಲೂರಿನ ಸಮುದಾಯ ಆರೋಗ್ಯ ಕೇಂದ್ರ, 11 ಗ್ರಾಮಗಳಲ್ಲಿ ಸುವರ್ಣ ಗ್ರಾಮೋದಯ ಯೋಜನೆ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 14 ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ.
ಆಯನೂರಿನ ಪ್ರವಾಸಿ ಮಂದಿರ, ಆಯನೂರಿನ ಪ್ರಾದೇಶಿಕ ವಿಜ್ಞಾನ ಉಪಕೇಂದ್ರ, ಬಹುಗ್ರಾಮ ಕುಡಿಯುವ ನೀರು ಯೋಜನೆ, ಹಾರ್ನಹಳ್ಳಿಯ ಹಾಸ್ಟೆಲ್, ಆಯನೂರಿನ ಸುವರ್ಣ ಸಂಸ್ಕೃತಿ ಭವನ, ಅಂಬೇಡ್ಕರ್ ಭವನಗಳು, ಕುಂಸಿ ಗ್ರಂಥಾಲಯ ಸೇರಿದಂತೆ ಹಲವು ಕಾಮಗಾರಿಗಳ ಶಂಕುಸ್ಥಾಪನೆ ನಡೆಯುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.