ದಾವಣಗೆರೆ

ಮಾಯಕೊಂಡ ಕಡೆಗಣನೆ ಖಂಡಿಸಿ ಪ್ರತಿಭಟನೆ

ತಾಲೂಕು ಘೋಷಣೆಗೆ ಮತ್ತೆ ತಣ್ಣೀರು / ಸರ್ಕಾರದ ಮೇಲೆ ಒತ್ತಡ ತರದ ಶಾಸಕರ ಬಗ್ಗೆ ತೀವ್ರ ಆಕ್ರೋಶ

Published On :

ಮಾಯಕೊಂಡ: ಐತಿಹಾಸಿಕ ಮಾಯಕೊಂಡ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವಾಗಿ ಘೋಷಿಸದೆ ಕಡೆಗಣಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಾಲೂಕು ಹೋರಾಟ ಸಮಿತಿ ನೇತೃತ್ವದಲ್ಲಿ ಟೈಯರ್ ಸುಡುವುದರ ಮೂಲಕ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಶಾಸಕರ ವಿರುದ್ಧ: ದಾವಣಗೆರೆ ತಾಲೂಕಿನ ಮಾಯಕೊಂಡ ಗ್ರಾಮವು ಅತ್ಯಂತ ಪ್ರಮುಖ ಹೋಬಳಿ ಕೇಂದ್ರವಾಗಿದೆ. ಐತಿಹಾಸಿಕವಾಗಿಯೂ ಸಾಕಷ್ಟು ಹೆಸರು ಹೊಂದಿರುವ ಗ್ರಾಮ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಮುಖ ಕೇಂದ್ರವಾಗಿತ್ತು. ಇಂತಹ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವಾಗಿ ಘೋಷಿಸುವಂತೆ ಮಾಡಿದ್ದ ಮನವಿಗೆ ಸರ್ಕಾರ ಸ್ಪಂದಿಸದಿರುವುದು, ತಾಲೂಕು ಘೋಷಿಸಲು ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದ ಶಾಸಕ ಎಂ. ಬಸವರಾಜನಾಯ್ಕ ವಿರುದ್ಧ ಗ್ರಾಮಸ್ಥರು ಘೋಷಣೆ ಕೂಗಿದರು.
 ಮಾಯಕೊಂಡ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುವ ಶಾಸಕ ಬಸವರಾಜನಾಯ್ಕ ತಾಲೂಕು ಕೇಂದ್ರವಾಗಿಸಲು ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ. ಸತತವಾಗಿ ಮಾಯಕೊಂಡ ಕ್ಷೇತ್ರ ಬಿಜೆಪಿಗೆ ಬೆಂಬಲಿಸುತ್ತಾ ಬಂದಿದ್ದರೂ, ಇಂತಹ ಹೋಬಳಿ ಕ್ಷೇತ್ರದ ಋಣ ತೀರಿಸುವ ಕೆಲಸ ಸರ್ಕಾರ ಮಾಡದಿರುವುದು ಖಂಡನೀಯ ಎಂದು ಅವರು ಹೇಳಿದರು.
ನಾಳೆ ಮಾಯಕೊಂಡ ಬಂದ್‌ಗೆ ಕರೆ: ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಈ ಬಗ್ಗೆ ಸರ್ಕಾರದ ಮೇಲೆ ಒತ್ತಡವನ್ನು ಹೇರಿದ್ದರೆ, ತಾಲೂಕು ಘೋಷಣೆಯಾಗಿರುತ್ತಿತ್ತು. ಮಾಯಕೊಂಡವನ್ನು ತಾಲೂಕು ಕೇಂದ್ರವಾಗಿ ಘೋಷಸದ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿ 11ರಂದು ಮಾಯಕೊಂಡ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮುಖಂಡರು ತಿಳಿಸಿದರು.
 4 ದಶಕಗಳಿಂದ ಮಾಯಕೊಂಡ ವಿಧಾನಸಭಾ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಐತಿಹಾಸಿಕ ತಾಣವಾಗಿಯೂ ಇತಿಹಾಸದ ಪುಟಗಳಲ್ಲಿ ಗುರುತಿಸಲ್ಪಡುತ್ತದೆ. ಚಿತ್ರದುರ್ಗದ ಹಿರೆ ಮದಕರಿ ನಾಯಕರ ಸಮಾಧಿ ಇಲ್ಲಿದೆ. ಸಮೃದ್ಧ ಹೋಬಳಿ ಕೇಂದ್ರ ಎಂದೇ ಗುರುತಿಸಲ್ಪಡುವ ಮಾಯಕೊಂಡ ಮತ್ತೊಮ್ಮೆ ಕಡೆಗಣಿಸಿರುವುದು ಸರಿಯಲ್ಲ. ತಾಲೂಕು ರಚನೆ ಬೇಡಿಕೆಗೆ ಸ್ಪಂದಿಸದ ಬಿಜೆಪಿ ಸರ್ಕಾರಕ್ಕೆ ಗ್ರಾಮಸ್ಥರ ಧಿಕ್ಕಾರವಿದೆ ಎಂದು ಅವರು ಘೋಷಿಸಿದರು. ಗ್ರಾಮದ ಹಿರಿಯರು, ಸಮಿತಿ ಪದಾಧಿಕಾರಿಗಳು, ಯುವ ಮುಖಂಡರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಡಿಬಿ ಆಕ್ರೋಶ: ಮಾಯಕೊಂಡ ಗ್ರಾಮವನ್ನು ತಾಲೂಕು ಕೇಂದ್ರವಾಗಿ ಘೋಷಿಸದ ಸರ್ಕಾರ ಗ್ರಾಮಸ್ಥರ ನಿರೀಕ್ಷೆಯನ್ನೇ ಹುಸಿಗೊಳಿಸಿದೆ. ಜಿಲ್ಲಾ ಕೇಂದ್ರದಿಂದ 32 ಕಿ.ಮೀ.ನಷ್ಟು ದೂರದಲ್ಲಿರುವ ಮಾಯಕೊಂಡ ತಾಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆ, ಅವಕಾಶಗಳನ್ನು ಹೊಂದಿದ್ದರೂ ಕಡೆಗಣನೆಯನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಸದಸ್ಯ ಡಿ. ಬಸವರಾಜ ಆಕ್ಷೇಪಿಸಿದ್ದಾರೆ.
 ಹಿಂದೆ ತಾವು ದಾವಣಗೆರೆ ನಗರಸಭೆ ಅಧ್ಯಕ್ಷರಾಗಿದ್ದಾಗಿನಿಂದಲೂ ಮಾಯಕೊಂಡ ತಾಲೂಕು ರಚನೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದು, ಒತ್ತಾಯಿಸುತ್ತಲೇ ಬಂದಿದ್ದೇವೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾಯಕೊಂಡ ತಾಲೂಕು ಘೋಷಿಸುವ ಭರವಸೆ ನೀಡಿ, ಮಾತಿಗೆ ತಪ್ಪಿದ್ದಾರೆ. ಶೆಟ್ಟರ್‌ಗೆ ಇಚ್ಚಾಶಕ್ತಿ, ಬದ್ಧತೆ ಎಂಬುದು ಇದ್ದಲ್ಲಿ, ಕೊಟ್ಟ ಮಾತಿನಂತೆ ಮೊದಲು ನಡೆದುಕೊಳ್ಳಲಿ ಎಂದು ಅವರು ಎಚ್ಚರಿಕೆ ಮಾಡಿದ್ದಾರೆ.
 ಅಧಿಕಾರ ವಿಕೇಂದ್ರೀಕರಣ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಮಾಯಕೊಂಡ ತಾಲೂಕು ಕೇಂದ್ರವಾಗಿ ಪರಿವರ್ತನೆಯಾಗ ಬೇಕಾದಂತಹ ಅಗತ್ಯವಿದೆ. ಬಜೆಟ್‌ನಲ್ಲಿ ಘೋಷಿಸದಿದ್ದರೂ ಪರವಾಗಿಲ್ಲ. ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಾದರೂ ಮಾಯಕೊಂಡ ತಾಲೂಕು ಕೇಂದ್ರವನ್ನು ಘೋಷಣೆ ಮಾಡುವ ಮೂಲಕ ಈ ಭಾಗದ ಜನರ ಹಲವಾರು ವರ್ಷದ ಬೇಡಿಕೆಗೆ ಸರ್ಕಾರ ಸ್ಪಂದಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.