ಆಯೋಗಕ್ಕೆ ಯಾಮಾರಿಸಿದ ವೀರಣ್ಣ ಸವಡಿ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 5
ಚುನಾವಣಾ ಆಯೋಗ ಎಷ್ಟೇ ಕಟ್ಟುನಿಟ್ಟು ಎಂದಾದರೂ ಆಯೋಗವನ್ನೆ ಯಾಮಾರಿಸುವ ರಾಜಕೀಯ ಮುಖಂಡರಿಗೆ ಕೊರತೆಯಿಲ್ಲ. ಈ ವಿಷಯದಲ್ಲಿ ಮಾಜಿ ಮೇಯರ್ ವೀರಣ್ಣ ಸವಡಿ ಕೂಡ ಹಿಂದೆ ಬಿದ್ದಿಲ್ಲ ಎನ್ನುವುದು ಇದೀಗ ಸಾಬೀತಾಗಿದೆ.
ಚುನಾವಣಾ ಘೋಷಣಾ ಪತ್ರದಲ್ಲಿ ಆಸ್ತಿ ವಿವರ ಮರೆಮಾಚಿದ ಬಗ್ಗೆ ಸವಡಿ ವಿರುದ್ಧ ವಿಚಾರಣೆ ನಡೆಸುವಂತೆ ಚುನಾವಣಾ ಆಯೋಗ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಜಿಲ್ಲಾಧಿಕಾರಿಗೆ ಪತ್ರ ಮುಖೇನ ಸೂಚನೆ ನೀಡಿರುವುದು ಶುಕ್ರವಾರ ಕಚೇರಿ ತಲುಪಿದೆ.
ಯಾವ ಆರೋಪ?: ಇತ್ತೀಚೆಗಷ್ಟೇ ಮುಗಿದ ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಮಾಜಿ ಮೇಯರ್ ವೀರಣ್ಣ ಸವಡಿ ಬಿಜೆಪಿ ಅಭ್ಯರ್ಥಿಯಾಗಿ ವಾರ್ಡ್ ನಂ. 33ರಿಂದ ಸ್ಪರ್ಧಿಸಿದ್ದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ಆಸ್ತಿ ವಿವರ ನೀಡಬೇಕಿರುವುದು ಕಡ್ಡಾಯ. ಈ ಸಂದರ್ಭದಲ್ಲಿ ಸವಡಿ ಅವರು ತಮ್ಮ ಆಸ್ತಿಯ ಸಂಪೂರ್ಣ ವಿವರ ನೀಡದೇ ಮರೆಮಾಚಿದ್ದರು ಎನ್ನಲಾಗಿದೆ.
ಈ ಕುರಿತು ಬೆಂಗೇರಿಯ ಶಿವಾನಂದಯ್ಯ ಹಿರೇಮಠ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಮಹಾನಗರ ಪಾಲಿಕೆಗೆ 2007ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ವೀರಣ್ಣ ಸವಡಿ ಸಲ್ಲಿಸಿದ್ದ ಆಸ್ತಿ ವಿವರಕ್ಕೂ, 2013ರ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಆಸ್ತಿ ವಿವರಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಅನೇಕ ವಿವರಗಳನ್ನು ಮರೆಮಾಚಲಾಗಿದೆ ಎಂದು ಹಿರೇಮಠ ತಮ್ಮ ದೂರಿನಲ್ಲಿ ತಿಳಿಸಿದ್ದರು. ವೀರಣ್ಣ ಸವಡಿ ಲ್ಯಾಂಡ್ ಮಾಫಿಯಾ ದಂಧೆ ನಡೆಸುತ್ತಿದ್ದಾರೆ. ಸಾಲದ್ದಕ್ಕೆ ಬೇನಾಮಿ ಹೆಸರಲ್ಲಿ ಸಾಕಷ್ಟು ಆಸ್ತಿ ಮಾಡಿದ್ದಾರೆ. ಪಾಲಿಕೆಯ ಸದಸ್ಯರಾಗುವ ಮುನ್ನ ಅಷ್ಟೇನೂ ಆರ್ಥಿಕವಾಗಿ ಸಬಲರಲ್ಲದ ಸವಡಿ, ಪಾಲಿಕೆ ಸದಸ್ಯರಾದ ಬಳಿಕ ಸಾಕಷ್ಟು ಹಣ ಮಾಡಿದ್ದಾರೆ. ಮಾಜಿ ಮೇಯರ್ ಇದ್ದ ಕಾಲದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹಿಸಿದ್ದಾರೆ. ಮಾಜಿ ಮೇಯರ್ ವೀರಣ್ಣ ಸವಡಿ ಸಾಕಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಲ್ಲದೆ, ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಿದ್ದಾಗಿ ಹಿರೇಮಠ ದಾಖಲೆ ಸಮೇತವಾಗಿ ಆಯೋಗಕ್ಕೆ ದೂರು ನೀಡಿದ್ದರು.
ವಿಚಾರಣೆಗೆ ಸೂಚನೆ: ಹಿರೇಮಠ ಮಾಡಿದ್ದ ಆರೋಪವನ್ನು ಪರಿಶೀಲಿಸಲಾಗಿ ಮೇಲ್ನೋಟಕ್ಕೆ ವೀರಣ್ಣ ಸವಡಿಯವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದು ರುಜುವಾತಾಗುತ್ತದೆ. ಈ ಹಿನ್ನೆಲೆಯಲ್ಲಿ ವೀರಣ್ಣ ಸವಡಿಯವರ ಆಸ್ತಿ-ಪಾಸ್ತಿ ಕುರಿತಾಗಿ ಸವಿವರ ಕಲೆ ಹಾಕಿ ವಿಚಾರಣೆ ನಡೆಸಿ ಈ ಕೂಡಲೇ ಆಯೋಗಕ್ಕೆ ಮಾಹಿತಿ ರವಾನಿಸಬೇಕೆಂದು ಆಯೋಗ ಜಿಲ್ಲಾಧಿಕಾರಿಗ ಸೂಚನೆ ನೀಡಿದೆ.
ನ್ಯಾಯಾಲಯದಲ್ಲಿ ದೂರು?: ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿರುವ ಆಸ್ತಿ ವಿವರ ಸುಳ್ಳೆಂದು ಆರೋಪ ಬಂದಲ್ಲಿ ಸಂಬಂಧಿಸಿದ ಚುನಾವಣಾಧಿಕಾರಿ ಸಮಕ್ಷಮದಲ್ಲಿ ಪ್ರಕರಣಗಳ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಿಸಬೇಕಾಗುತ್ತದೆ. ಪ್ರಸ್ತುತ ಪ್ರಾಥಮಿಕ ಹಂತದಲ್ಲಿ ವಿಚಾರಣೆ ನಡೆಸಲಿರು ಜಿಲ್ಲಾಧಿಕಾರಿಗಳು ಆ ಬಳಿಕ ಕೂಲಂಕಷ ಮಾಹಿತಿ ಕಲೆ ಹಾಕಲಿದ್ದಾರೆ. ಅಲ್ಲದೇ ಹಿರೇಮಠ ಅವರಿಂದಲೂ ಅಗತ್ಯ ಮಾಹಿತಿ ಪಡೆದುಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

