ಅನುದಾನವಿದ್ದರೂ ಅಭಿವೃದ್ಧಿ ಇಲ್ಲ
ಹುಬ್ಬಳ್ಳಿ: ಸಾಕಷ್ಟು ಅನುದಾನ ಹರಿದು ಬಂದರೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಕ್ಷೇತ್ರವೆಂದರೆ ಅದು ಹುಬ್ಬಳ್ಳಿ ಹೃದಯ ಭಾಗದಲ್ಲಿರುವ ಹುಬ್ಬಳ್ಳಿ-ಧಾರವಾಡ ಪೂರ್ವ (ಮೀಸಲು) ಕ್ಷೇತ್ರ.
ಕೊಳಚೆ ಪ್ರದೇಶ, ಇಕ್ಕಟ್ಟಾದ ರಸ್ತೆಗಳು ಸಾಮಾನ್ಯವಾಗಿರುವ ಈ ಕ್ಷೇತ್ರದಲ್ಲಿ ವಾಣಿಜ್ಯ ಕಟ್ಟಡಗಳಿಗೇನೂ ಕಡಿಮೆ ಇಲ್ಲ. ಮಧ್ಯಮ ಮತ್ತು ಬಡ ಜನತೆಯೇ ಇಲ್ಲಿ ಹೆಚ್ಚಿನವರಿದ್ದಾರೆ.
ಬಿಜೆಪಿ ಶಾಸಕ ವೀರಭದ್ರಪ್ಪ ಹಾಲಹರವಿ ಪ್ರತಿನಿಧಿಸಿದ್ದ ಈ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಹೆಚ್ಚಿನವು ಹು-ಧಾ ಮಹಾನಗರ ಪಾಲಿಕೆ ಅನುದಾನದಿಂದ. ಈ ಕ್ಷೇತ್ರಕ್ಕೆ ಶಾಸಕರ ಅನುದಾನ ಹರಿದುಬಂದಿದ್ದು ತೀರ ಕಡಿಮೆ.
ಮಹಾನಗರ ಪಾಲಿಕೆಯ ವಾರ್ಡ್ ನಂ. 43 ಹಾಗೂ ವಾರ್ಡ್ ನಂ. 49 ರಿಂದ ವಾರ್ಡ್ ನಂ. 67ರವರೆಗಿನ ಒಟ್ಟು 20 ವಾರ್ಡ್ಗಳು ಹು-ಧಾ ಪೂರ್ವ (ಮೀಸಲು) ಕ್ಷೇತ್ರ ವ್ಯಾಪ್ತಿಯಲ್ಲಿವೆ.
ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ನಂತರ ರಚಿತವಾದ ಹು-ಧಾ ಪೂರ್ವ (ಮೀಸಲು) ಕ್ಷೇತ್ರದಲ್ಲಿ 2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯ ವೀರಭದ್ರಪ್ಪ ಹಾಲಹರವಿ ಜಯ ಗಳಿಸಿದ್ದರು.
ಕಳೆದ 5 ವರ್ಷಗಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ಎಲ್ಲ 20 ವಾರ್ಡ್ಗಳಿಗೆ ಶಾಸಕರ ಅನುದಾನ ಸಮರ್ಪಕವಾಗಿ ಬಳಕೆಯಾಗಿದ್ದು, ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂಬ ಅಭಿಪ್ರಾಯ ಶಾಸಕ ವೀರಭದ್ರಪ್ಪ ಹಾಲಹರವಿ ಅವರದ್ದು. ಆದರೆ, ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರೇ ಹೇಳುವಂತೆ, ಶಾಸಕ ಹಾಲಹರವಿ ಅವರು ವಾರ್ಡ್ಗಳಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತಮ್ಮ ಅನುದಾನ ನೀಡಿದ ಉದಾಹರಣೆಗಳು ಅತಿ ಕಡಿಮೆ. ವಾರ್ಡ್ಗಳಲ್ಲಿನ ಕಾಮಗಾರಿಗಳಿಗೆ ಶಾಸಕರ ಅನುದಾನದಡಿ ಹಣ ಬಿಡುಗಡೆ ಮಾಡುವಂತೆ ಪಾಲಿಕೆ ಸದಸ್ಯರು ಶಾಸಕ ಹಾಲಹರವಿ ಅವರಿಗೆ ದುಂಬಾಲು ಬಿದ್ದರೂ ಪ್ರಯೋಜನ ಮಾತ್ರ ಶೂನ್ಯ. ಇನ್ನೂ ಪಾಲಿಕೆ ಸದಸ್ಯರು ತಮಗೆ ದೊರೆತ ವಿವಿಧ ಯೋಜನೆಯಡಿ ವಾರ್ಡ್ಗಳಲ್ಲಿ ಕೈಗೊಂಡ ಕಾಮಗಾರಿಗಳಿಗೆ ತಾವೇ ಅನುದಾನ ನೀಡಿದ್ದೆಂಬ ಹೇಳಿಕೆ ನೀಡುವ ಮೂಲಕ ಶಾಸಕ ಹಾಲಹರವಿ ಹಲವಾರು ಬಾರಿ ಎಡವಟ್ಟು ಮಾಡಿಕೊಂಡ ಪ್ರಸಂಗಗಳಿಗೇನೂ ಕಮ್ಮಿ ಇಲ್ಲ.
ಬೆರಳೆಣಿಕೆ ಕಾಮಗಾರಿ: ರೈತ ಸಂಪರ್ಕ ರಸ್ತೆಗಳಾದ ಮಂಟೂರು-ಬಂಡಿವಾಡ ರಸ್ತೆಗೆ 2 ಕೋಟಿ ವೆಚ್ಚದಲ್ಲಿ, ಗಬ್ಬೂರು ಕ್ರಾಸ್ನಿಂದ ಕುಂದಗೋಳ ಕೂಡು ರಸ್ತೆಗೆ 1.60 ಕೋಟಿ ವೆಚ್ಚದಲ್ಲಿ, ಹುಬ್ಬಳ್ಳಿ-ಬೆಳಗಲಿ ರಸ್ತೆಗೆ 1.25 ಕೋಟಿ ವೆಚ್ಚದಲ್ಲಿ ಡಾಂಬರೀಕರಣಗೊಳಿಸಲಾಗಿದೆ. ಹುಬ್ಬಳ್ಳಿ-ಬೆಳಗಲಿ ರಸ್ತೆಯಲ್ಲಿರುವ ಕರ್ಕಿಹಳ್ಳಕ್ಕೆ 2 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ನೇಕಾರ ನಗರದಿಂದ ಮಾವನೂರು-ಕಟಕನೂರು ರಸ್ತೆ 70 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಂಡಿದೆ. ಮಂಟೂರ ರಸ್ತೆಯ ಪೀಡರ್ ರಸ್ತೆಗೆ 1.50 ಕೋಟಿ ವೆಚ್ಚದಲ್ಲಿ ಕೈಗೊಂಡ ಕಾಂಕ್ರೀಟ್ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಕರ್ಕಿಬಸವೇಶ್ವರ ನಗರದಿಂದ ಕುಂದಗೋಳ ಕೂಡು ರಸ್ತೆವರೆಗಿನ ಮಾರ್ಗದಲ್ಲಿ 2 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಿ, ಎರಡೂ ಬದಿ ಗಟಾರು ನಿರ್ಮಾಣ ಮಾಡಲಾಗಿದೆ. ನೇಕಾರ ನಗರ ಸರ್ಕಾರಿ ಶಾಲೆ ಸುತ್ತ ಕಾಂಪೌಂಡ್ ಕಟ್ಟಿದ್ದು, ಶಾಲೆಯ ಮೈದಾನಕ್ಕೆ ಕಾಂಕ್ರೀಟ್ ಹಾಕಲಾಗಿದೆ. ಹಳೇ ಹುಬ್ಬಳ್ಳಿ ನವ ಅಯೋದ್ಯಾನಗರ ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ.
ಇನ್ನೂ ಆಗಬೇಕಿದೆ
ಆರಾಧನಾ ಯೋಜನೆಯಡಿ 57 ದೇವಸ್ಥಾನಗಳ ಅಭಿವೃದ್ಧಿಗಾಗಿ ರು. 13.38 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ವಾರ್ಡ್ 59ರಲ್ಲಿ ಕ್ಯಾಟಲ್ ಶೆಡ್ ಹತ್ತಿರ ಡಾ. ಬಾಬುಜಗಜೀವನರಾಮ ಭವನ ನಿರ್ಮಾಣಕ್ಕೆ ರು. 4 ಕೋಟಿ ಮಂಜೂರು ಮಾಡಲಾಗಿದೆ. ಕರ್ಕಿಬಸವೇಶ್ವರ ನಗರದಲ್ಲಿ ಪ್ರೊ.ಬಿ. ಕೃಷ್ಣಪ್ಪ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರು. 20 ಲಕ್ಷ ಬಿಡುಗಡೆಯಾಗಿದೆ. ಗಂಗಾಧರ ನಗರದಲ್ಲಿ ರು. 10 ಲಕ್ಷ ವೆಚ್ಚದಲ್ಲಿ ಕೊರವರ ಸಮುದಾಯಕ್ಕಾಗಿ ನಿರ್ಮಿಸುತ್ತಿರುವ ಸಮುದಾಯ ಭವನದ ಕಾಮಗಾರಿ ಹಾಗೂ ಮಂಟೂರ ರಸ್ತೆಯಲ್ಲಿ ರು. 10 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಡಾ. ಜಗಜೀವನರಾಮ ಭವನದ ಕಾಮಗಾರಿ ಪ್ರಗತಿಯಲ್ಲಿವೆ. ಶಾಸಕ ವೀರಭದ್ರಪ್ಪ ಹಾಲಹರವಿ ಅವರ ಮನವಿ ಮೇರೆಗೆ ಸಿಎಂ ಶೆಟ್ಟರ್ ಅವರು ಹು-ಧಾ ಪೂರ್ವ (ಮೀಸಲು) ಕ್ಷೇತ್ರ ವ್ಯಾಪ್ತಿಯ 20 ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ರು. 7 ಕೋಟಿಯ ವಿಶೇಷ ಪ್ಯಾಕೇಜ್ ಮಂಜೂರು ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಐಟಐ ಕಾಲೇಜು ಮಂಜೂರಾಗಿದ್ದು, ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸ್ಥಳ ಹುಡುಕಬೇಕಿದೆ. ಎರಡು ಪಿಯು ಕಾಲೇಜುಗಳ ನಿರ್ಮಾಣ, ನಗರ ಆರೋಗ್ಯ ಕೇಂದ್ರ ಮಂಜೂರಾತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮೊರಾರ್ಜಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಹು-ಧಾ ಪೂರ್ವ (ಮೀಸಲು) ಕ್ಷೇತ್ರದಲ್ಲಿ ಕಳೆದ 5 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿವೆ. ಈ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆಯೇ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ನಾನೇ ಈ ಕ್ಷೇತ್ರದಲ್ಲಿ ಜಯ ಸಾಧಿಸುವುದು ಖಚಿತ. ಕ್ಷೇತ್ರದಲ್ಲಿ ಇನ್ನೂ ಹತ್ತುಹಲವಾರು ಕೆಲಸಗಳು ನಡೆಯಬೇಕಿದೆ. ಈ ಚುನಾವಣೆಯಲ್ಲಿ ಆಯ್ಕೆಯಾದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ.
- ವೀರಭದ್ರಪ್ಪ ಹಾಲಹರವಿ ಬಿಜೆಪಿ ಅಭ್ಯರ್ಥಿ.
ಶಾಸಕ ವೀರಭದ್ರಪ್ಪ ಹಾಲಹರವಿ ಅವರು ಕಳೆದ ಅವಧಿಯಲ್ಲಿ ಹು-ಧಾ ಪೂರ್ವ (ಮೀಸಲು) ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. 5 ವರ್ಷದಲ್ಲಿ ರು. 5 ಕೋಟಿ ಅನುದಾನ ಶಾಸಕರಿಗೆ ನೇರವಾಗಿ ಬರುತ್ತದೆ. ಈ ಅನುದಾನವನ್ನು ಹಾಲಹರವಿ ಅವರು ಎಲ್ಲಿ ಬಳಕೆ ಮಾಡಿದ್ದಾರೆಂದು ಹೇಳಲಿ. ಕಳೆದ ಅವಧಿಯಲ್ಲಿ ಒಂದು ಬಾರಿಯೂ ಪ್ರಗತಿ ಪರಿಶೀಲನಾ ಸಭೆಯನ್ನು ಹಾಲಹರವಿ ನಡೆಸಿಲ್ಲ.
-ಹನುಮಂತಪ್ಪ ಅಲ್ಕೋಡ, ಜೆಡಿಎಸ್ ಅಭ್ಯರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

