134 ಅಭ್ಯರ್ಥಿಗಳಿಂದ 190 ನಾಮಪತ್ರ ಸಲ್ಲಿಕೆ
ಧಾರವಾಡ: ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಬುಧವಾರ ಮುಗಿದಿದ್ದು, ಏ. 10ರಿಂದ ಇಲ್ಲಿಯವರಗೆ 134 ಅಭ್ಯರ್ಥಿಗಳು 190 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಸಮೀರ ಶುಕ್ಲ ಚುನಾವಣೆ ಕುರಿತು ಮಾಹಿತಿ ನೀಡಿ, ನವಲಗುಂದ ಕ್ಷೇತ್ರಕ್ಕೆ ಒಟ್ಟು 16 ಜನ ಅಭ್ಯರ್ಥಿಗಳಿಂದ 19 ನಾಮಪತ್ರಗಳು, ಕುಂದಗೋಳದಲ್ಲಿ 12 ಜನ ಅಭ್ಯರ್ಥಿಗಳು 17, ಧಾರವಾಡದಲ್ಲಿ 22 ಜನ 29 ನಾಮಪತ್ರಗಳು, ಹು-ಧಾ ಪೂರ್ವ 10 ಅಭ್ಯರ್ಥಿಗಳು 17, ಹು-ಧಾ ಸೆಂಟ್ರಲ್ 37 ಅಭ್ಯರ್ಥಿಗಳು 51 ನಾಮಪತ್ರ ಸಲ್ಲಿಸಿದರೆ, ಹು-ಧಾ ಪಶ್ಚಿಮ ಕ್ಷೇತ್ರಕ್ಕೆ 24 ಅಭ್ಯರ್ಥಿಗಳು 37 ನಾಮಪತ್ರ ಸಲ್ಲಿಸಿದ್ದಾರೆ. ಕಲಘಟಗಿಯಲ್ಲಿ 13 ಅಭ್ಯರ್ಥಿಗಳು 20 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆ ದಿನವಾದ ಬುಧವಾರ ಎಲ್ಲ ಕ್ಷೇತ್ರಗಳಿಂದ ಒಟ್ಟು 108 ಅಭ್ಯರ್ಥಿಗಳು 170 ನಾಮಪತ್ರ ಸಲ್ಲಿಸಿದ್ದಾರೆಂದು ತಿಳಿಸಿದರು.
36,930 ಸೇರ್ಪಡೆ: ಮತದಾರರ ಪಟ್ಟಿ ಕುರಿತು ಮಾಹಿತಿ ನೀಡಿದ ಸಮೀರ ಶುಕ್ಲ, ಈ ಹಿಂದೆ ಮತದಾರರ ಪಟ್ಟಿಯಲ್ಲಿ 12,71,710 ಮತದಾರರ ಹೆಸರು ಸೇರ್ಪಡೆಗೊಂಡಿದ್ದವು. ಏ. 7ರ ವರೆಗೆ ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತೆಗೆದು ಹಾಕಲು ಸಮಯಾವಕಾಶ ನೀಡಲಾಗಿತ್ತು. ಅಂತೆಯೇ, ಒಟ್ಟು 51,057 ಸೇರ್ಪಡೆಯಾಗಿದ್ದು 14,137 ಹೆಸರು ತೆಗೆದುಹಾಕಲಾಗಿದೆ. ಅಂದರೆ, 36,920 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಪ್ರಸ್ತುತ ನೂತನ ಮತಪಟ್ಟಿ ಸಿದ್ಧಗೊಳ್ಳುತ್ತಿದ್ದು, ಜಿಲ್ಲೆಯ ಏಳೂ ಕ್ಷೇತ್ರದಲ್ಲಿ ಒಟ್ಟು 13,08,630 ಮತದಾರರು ಮತದಾನ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಫೇಸ್‌ಬುಕ್ ಮೂಲಕ ಜಾಗೃತಿ: ಮತದಾನ ಹಕ್ಕು ಕುರಿತು ಸ್ವೀಪ್ ಮೊದಲ ಹಂತದ ಕಾರ್ಯಕ್ರಮಗಳನ್ನು ಮುಗಿಸುತ್ತಿದೆ. 2ನೇ ಹಂತದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಶುರುವಾಗಿವೆ. ಯಾವ ಮತಗಟ್ಟೆಯಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಮತದಾನ ಕಮ್ಮಿಯಾಗಿದೆಯೋ ಅಲ್ಲಿ ಮತದಾರರ ಜಾಗೃತಿ ಹಮ್ಮಿಕೊಳ್ಳಲಾಗುವುದು. 25ರಂದು ಕಲಘಟಗಿ, 27ರಂದು ನವಲಗುಂದ ಹಾಗೂ 29ರಂದು ಕುಂದಗೋಳದಲ್ಲಿ ಯುವ ಸಮಾವೇಶ ಮಾಡಿ ಯುವಕರನ್ನು ಒಗ್ಗೂಡಿಸಿ ಮತ ಹಾಕುವಂತೆ ಪ್ರೆರೇಪಿಸಲು ಯೋಜನೆ ಇದೆ. ಇದಕ್ಕಿಂತ ಹೆಚ್ಚಾಗಿ ಪ್ರಸಕ್ತ ಬಾರಿ ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಮತದಾನ ಕುರಿತು ಜಾಗೃತಿ ಮೂಡಿಸುವ ಯೋಚನೆಯೂ ಇದೆ. ಗ್ರಾಪಂಗಳಲ್ಲಿ ಗ್ರಾಮ ಸಭೆ ಮಾದರಿಯಲ್ಲಿ ಸಭೆ ಏರ್ಪಡಿಸಿ ಜಾಗೃತಿ ಮೂಡಿಸಲಾಗುವುದು. ವಿಮಾನ ನಿಲ್ದಾಣ, ರೇಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಬರುವ 10 ದಿನಗಳಲ್ಲಿ 2ನೇ ಹಂತದ ಜಾಗೃತಿ ಮುಗಿಸಲಾಗುವುದು. ಒಟ್ಟಿನಲ್ಲಿ ರಾಜ್ಯದ ಬೇರೆ ಜಿಲ್ಲೆಗಳಿಂದ ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಶೇಕಡಾವಾರು ಮತದಾನ ಮಾಡುವಂತೆ ಮಾಡಲಾಗುವುದು ಎಂದರು.
94 ಪ್ರಕರಣ ದಾಖಲು: ಇಲ್ಲಿಯವರೆಗೆ ನೀತಿ ಸಂಹಿತೆ ಉಲ್ಲಂಘನೆ ಕುರಿತು 94 ದೂರುಗಳು ನೊಂದಣಿಯಾಗಿದ್ದು, ಈ ಎಲ್ಲವುಗಳ ಮೇಲೆ ದೂರು ದಾಖಲಿಸಲಾಗಿದೆ. ಅಬಕಾರಿ ಇಲಾಖೆ ತಂಡವು 67 ಪ್ರಕರಣಗಳಲ್ಲಿ 35 ಜನರನ್ನು ಬಂಧಿಸಲಾಗಿದೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 600 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ, ನೀತಿ ಸಂಹಿತೆ ಜಾರಿಯಲ್ಲಿರುವಾಗ 14.38 ಲಕ್ಷ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, 1745 ಸೀರೆಗಳು, 100 ಬ್ಯಾಗ್ ಅನ್ನದ ಪ್ಯಾಕೆಟ್, ಐದು ವಾಹನ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

