ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ
ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 20
ಮಹಾನಗರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದೆ. ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ
ಎಸಿಪಿ, ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿದೆಯಾದರೂ ಬೀಸೋ ದೊಣ್ಣೆಯಿಂದ ಎಸಿಪಿ ಅಡಿವೆಪ್ಪ ಬಡಿಗೇರ ತಪ್ಪಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ.
ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದರಿಂದ ಸ್ವಂತ ಜಿಲ್ಲೆಯವರು ಹಾಗೂ ಮೂರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೆಲಸ ಮಾಡುವವರನ್ನು ವರ್ಗಾವಣೆ ಮಾಡಬೇಕೆಂದು ಚುನಾವಣಾ ಆಯೋಗ ಕಟ್ಟಪ್ಪಣೆ ಮಾಡಿತ್ತು. ಸಾಲದ್ದಕ್ಕೆ ಆಯೋಗದ ನಿಯಮಾವಳಿಯಂತೆ ವರ್ಗಾವಣೆಯ ಸಂಭಾವ್ಯ ಅಧಿಕಾರಿಗಳ ಪಟ್ಟಿಯನ್ನು ತನ್ನ ಗಮನಕ್ಕೆ ತಂದ ಬಳಿಕವೇ ಅಂತಿಮಗೊಳಿಸಬೇಕೆಂದು ತಿಳಿಸಿತ್ತು.
ಎಲ್ಲ ಪ್ರಕ್ರಿಯೆಗಳು ಅಂತಿಮಗೊಂಡು ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ ಮೇಜರ್ ಸರ್ಜರಿಯೂ ಆಗಿದೆ. ಆದರೆ, ಹುಬ್ಬಳ್ಳಿಯಲ್ಲಿ ಬೇರು ಬಿಟ್ಟಿದ್ದ ಎಸಿಪಿ ಬಡಿಗೇರ ಅವರನ್ನು ಮಾತ್ರ ಚುನಾವಣಾ ಆಯೋಗ ವರ್ಗಾವಣೆ ಮಾಡಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಚುನಾವಣೆ ಆಯೋಗದ ಸೂಚನೆಯನ್ವಯ ಮಹಾನಗರ ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ನಿಯಮಾವಳಿಗೆ ಹೊಂದಿಕೆಯಾಗುವ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ ಇಲಾಖೆಗೆ ಕಳುಹಿಸಿದ್ದರು. ಎಸಿಪಿಗಿಂತ ಕೆಳಹಂತದ ಅಧಿಕಾರಿಗಳ ಪಟ್ಟಿ ಮಾತ್ರ ಆಯುಕ್ತರಿಂದ ಕೇಳಲಾಗಿತ್ತು.
ಆಯುಕ್ತರು ಕಳುಹಿಸಿದ ಪಟ್ಟಿಯ ಪ್ರಕಾರ ಅಧಿಕಾರಿಗಳ ವಗಾರ್ವಣೆಯಾಗಿದ್ದರೂ ಎಸಿಪಿ ಅಡಿವೆಪ್ಪ ಬಡಿಗೇರ ಮಾತ್ರ ವರ್ಗಾವಣೆಯಾಗದಿರುವುದು ಹೇಗೆ? ಎಂದು ಇಲಾಖೆಯಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಅಲ್ಲದೇ, ಅವರು ಚುನಾವಣಾ ಆಯೋಗವನ್ನೇ ಯಾಮಾರಿಸಿದ್ದಾರೆಂದು ಆಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಬಡಿಗೇರ ಉಳಿದುಕೊಂಡಿದ್ದು ಹೇಗೆ? ಚುನಾವಣಾ ಆಯೋಗಕ್ಕೆ ಬಡಿಗೇರ ಅವರನ್ನು ವರ್ಗಾವಣೆ ಮಾಡದಿರುವಂತೆ ಸೂಚಿಸಿದ ಪ್ರಭಾವಿ ರಾಜಕಾರಣಿ ಯಾರು? ಎಂದು ಇಲಾಖೆಯಲ್ಲಿ ಚರ್ಚೆ ನಡೆಯುತ್ತಿದೆ.
ಅಕ್ರಮ ನಡೆಯುವುದಿಲ್ಲವೇ?: ಚುನಾವಣೆಯ ಕಾಲಕ್ಕೆ ಅಕ್ರಮ ನಡೆಯದಿರಲಿ ಎನ್ನುವ ಕಾರಣದಿಂದಾಗಿಯೇ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಬೀಡು ಬಿಟ್ಟಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡುವುದಾಗಿ ಚುನಾವಣಾ ಆಯೋಗ ಹೇಳಿತ್ತು. ಆದರೆ, ಹುಬ್ಬಳ್ಳಿಯಲ್ಲಿರುವ ಬಹುತೇಕ ಠಾಣೆ ಸುತ್ತಾಡಿಕೊಂಡು ಬಂದು ಇಲ್ಲೇ ಎಸಿಪಿಯಾಗಿ ಬಡ್ತಿ ಹೊಂದಿರುವ ಬಡಿಗೇರ ಅವರ ಬಗ್ಗೆ ಮಾತ್ರ ಆಯೋಗ ಸಾಫ್ಟ್ ಕಾರ್ನರ್ ಆಗಿರುವುದೇಕೆ? ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಎಲ್ಲ ದಂಧೆಗಳ ಬಗ್ಗೆ ಮಾಹಿತಿ ಹೊಂದಿರುವ ಬಡಿಗೇರ, ಚುನಾವಣಾ ಕಾಲಕ್ಕೆ ಅಕ್ರಮವೆಸಗುವುದಿಲ್ಲವೆಂಬುದು ಏನು ಗ್ಯಾರಂಟಿ? ಅತ್ತೆಗೊಂದು ನ್ಯಾಯ ಸೊಸೆಗೊಂದು ನ್ಯಾಯ ಎನ್ನುವ ನೀತಿ ಅನುಸರಿಸಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಇಲಾಖೆ ಅಧಿಕಾರಿಗಳು ಅಸಮಾಧಾನ ಹೊರಗೆಡವಿದ್ದಾರೆ. ಇದಕ್ಕೆ ಆಯೋಗವೇ ಉತ್ತರಿಸಬೇಕಿದೆ.
ಯಾರ್ಯಾರು ವರ್ಗವಾಗಿದ್ದಾರೆ?
ಸಂಚಾರಿ ಎಸಿಪಿ ಎನ್.ಎಸ್. ಪಾಟೀಲ-ಸಿಐಡಿ ಬೆಂಗಳೂರು, ಪೂರ್ವ ಸಂಚಾರಿ ಇನ್ಸ್ಪೆಕ್ಟರ್ ಎಸ್.ಕೆ. ಮಾರಿಹಾಳ-ಗುಪ್ತಚರ ಇಲಾಖೆ ಬೆಂಗಳೂರು, ದಕ್ಷಿಣ ಸಂಚಾರಿ ಠಾಣೆ ಇನ್ಸ್ಪೆಕ್ಟರ್ ಲೋಕೇಶ್-ಆ್ಯಂಟಿ ಏನ್ಪೋರ್ಸ್ಮೆಂಟ್, ಉತ್ತರ ಸಂಚಾರಿ ಇನ್ಸ್ಪೆಕ್ಟರ್ ಐ.ಎನ್. ಶಿರಕೋಳ-ಹೆಸ್ಕಾಂ ಬೆಳಗಾವಿ, ನಗರ ಠಾಣೆ ಇನ್ಸ್ಪೆಕ್ಟರ್ ಎಸ್.ಎಂ. ಸಂದಿಗವಾಡ- ಗುಪ್ತಚರ ಇಲಾಖೆ ಬೆಂಗಳೂರು, ಕಮರೀಪೇಟೆ ಇನ್ಸ್ಪೆಕ್ಟರ್ ಪ್ರಾಣೇಶ ರೊಟ್ಟಿ-ಡಿಎಸ್ಬಿ ಉತ್ತರ ಕನ್ನಡ, ಸಿಸಿಬಿ ಇನ್ಸ್ಪೆಕ್ಟರ್ ಆರ್.ಬಿ. ಮೇಸ್ತ್ರಿ-ಬನಹಟ್ಟಿ ಸರ್ಕಲ್ ಬಾಗಲಕೋಟೆ, ಪುಷ್ಪಲತಾ ಅಶೋಕ್ ನಗರ ಇನ್ಸ್ಪೆಕ್ಟರ್-ಸಿಸಿಬಿ ಹುಬ್ಬಳ್ಳಿ.
ವರ್ಗವಾಗಿ ಬಂದವರು...
ಅಲ್ಲಂಪ್ರಭುಗೌಡ ಪಾಟೀಲ-ಅಶೋಕನಗರ ಇನ್ಸ್ಪೆಕ್ಟರ್ ಹುಬ್ಬಳ್ಳಿ, ಬಸವೇಶ್ವರ-ಉತ್ತರ ಸಂಚಾರಿ ಇನ್ಸ್ಪೆಕ್ಟರ್, ಲಕ್ಷ್ಮಣ ನಾಯ್ಕ-ಪೂರ್ವ ಸಂಚಾರಿ ಇನ್ಸ್ಪೆಕ್ಟರ್, ಕುಮಾರ ಎನ್.- ದಕ್ಷಿಣ ಸಂಚಾರಿ ಠಾಣೆ ಇನ್ಸ್ಪೆಕ್ಟರ್, ಗುರುಸಿದ್ಧಪ್ಪ ಕಾಂಬ್ಳೆ- ಹುಬ್ಬಳ್ಳಿ ನಗರ ಠಾಣೆ ಇನ್ಸ್ಪೆಕ್ಟರ್, ಸುಧಾಮ ನಾಯ್ಕ- ಕಮರಿಪೇಟೆ ಠಾಣೆ ಇನ್ಸ್ಪೆಕ್ಟರ್, ವಿದ್ಯಾಧರ ಬಾಯ್ಕೇರಿಕರ- ಸಿಸಿಬಿ ಹುಬ್ಬಳ್ಳಿ.
ಇವರೂ ವರ್ಗವಾಗಿಲ್ಲ....
ಮಹಿಳಾ ಠಾಣೆ ಇನ್ಸ್ಪೆಕ್ಟರ್ ಎನ್.ಆರ್. ಚಲವಾದಿ, ಗೋಕುಲ ಠಾಣೆ ಇನ್ಸ್ಪೆಕ್ಟರ್ ಕೆ.ಸಿ. ಅಸುಂಡಿ, ಗುಪ್ತಚರ ವಿಭಾಗದ ವಿಜಯಕುಮಾರ ಬಿಸ್ನಳ್ಳಿ ಕೂಡ ವರ್ಗಾವಣೆಯಾಗದೇ ಬಚಾವ್ ಆಗಿದ್ದಾರೆ.
5 ತೊಲೆ ಬಂಗಾರ ಗಿಫ್ಟ್...
ಹುಬ್ಬಳ್ಳಿ ನಗರದ ಬಸ್ ನಿಲ್ದಾಣದಿಂದ ಅನತಿ ದೂರದಲ್ಲಿರುವ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಒಬ್ಬರಿಗೆ ವಸೂಲಿ ವೀರ ಆಪ್ತ ಸಿಬ್ಬಂದಿ ಸೇರಿ 5 ತೊಲೆಯ ಭರ್ಜರಿ ಬಂಗಾರದ ಆಭರಣ ಗಿಫ್ಟ್ ನೀಡುವ ಮೂಲಕ ಬೀಳ್ಕೊಡುಗೆ ನೀಡಿದ್ದಾರೆ. ಚಿನ್ನದ ಬೆಲೆ ಕಡಿಮೆಯಾಗಿದೆ ಎಂಬ ಸುದ್ದಿ ತಿಳಿದಿದ್ದೇ ತಡ ಹಾರಾಡಿಕೊಂಡು ಡೈಮಂಡ್ ಪ್ಲಾಜಾಕ್ಕೆ ಹೋದ ಹನುಮಂತ, ತಹಸೀಲ್ದಾರ್ ಪ್ರಕಾಶ 5 ತೊಲೆಯ ಸುತ್ತುಂಗುರ ಖರೀದಿಸಿ ಸಾಹೇಬರಿಗೆ ಗಿಫ್ಟ್ ನೀಡಿ ನಿಷ್ಠೆ ಮೆರೆದಿದ್ದಾರೆ. ಬಂದಿದ್ದನ್ನು ಬಾಚಿಕೊಂಡು ಇನ್ಸ್ಪೆಕ್ಟರ್ ಮಹಾಶಯ ಹುಬ್ಬಳ್ಳಿಗೆ ಟಾಟಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

