ಆಳಾಗಿ ದುಡಿಯುವವರನ್ನು ಆಯ್ಕೆ ಮಾಡಿ
ಕನ್ನಡಪ್ರಭ ವಾರ್ತೆ, ಧಾರವಾಡ, ಏ. 28
ಆಳುವವರಿಗಿಂತ ಆಳಾಗಿ ದುಡಿಯುವವರನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮತದಾರರು ಆಸಕ್ತಿ ವಹಿಸಬೇಕೆಂದು ಚಿತ್ರನಟಿ ಹಾಗೂ ಕೆಜೆಪಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರುತಿ ಹೇಳಿದರು.
ತಾಲೂಕಿನ ನರೇಂದ್ರ ಗ್ರಾಮದಲ್ಲಿ ಭಾನುವಾರ ಧಾರವಾಡ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ತವನಪ್ಪ ಅಷ್ಟಗಿ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಈ ಹಿಂದೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದವರು ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲಿಲ್ಲ. ಬಿ.ಎಸ್. ಯಡಿಯೂರಪ್ಪಯವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂಬ ಉದ್ದೇಶದಿಂದ ಜನತೆ ಕಳೆದ ಬಾರಿ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿದರು. ಆದರೆ, ಶಾಸಕರು ಜನತೆ ಸೇವೆ ಮಾಡದೆ ಅಧಿಕಾರಕ್ಕಾಗಿ ಅಂಟಿಕೊಂಡು ಸ್ವಾರ್ಥ ರಾಜಕಾರಣ ಮಾಡಿದರು. ಹೀಗಾಗಿ, ಜನತೆ ಈ ಬಾರಿ ಸಮೃದ್ಧ ಕರ್ನಾಟಕ ನಿರ್ಮಾಣದ ಕನಸಿನೊಂದಿಗೆ ನೂತನ ಪಕ್ಷ ಸ್ಥಾಪಿಸಿ ಹಗಲಿರಳು ಶ್ರಮಿಸುತ್ತಿರುವ ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಮಾಡುವ ಸಂಕಲ್ಪ ಮಾಡಬೇಕು. ಯಡಿಯೂರಪ್ಪಗೆ ಬಿಜೆಪಿ ಅವರೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಮುಖ್ಯಮಂತ್ರಿಯಾದ ಬಳಿಕ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನಪ್ರೀಯತೆ ಗಳಿಸಿದ್ದು, ಬಿಜೆಪಿ ಮುಖಂಡರಿಗೆ ಸಹಿಸಲಾಗಿಲ್ಲವೆಂದು ಆರೋಪಿಸಿದರು.
ಅಲ್ಲದೇ, ಯಡಿಯೂರಪ್ಪನವರ ನಾಮಬಲದಿಂದ ಗೆದ್ದ ಶಾಸಕರು ಅವರನ್ನು ಹಿಂಬಾಲಿಸದೇ ದ್ರೋಹ ಎಸಗಿದರು ಎಂದು ಪರೋಕ್ಷವಾಗಿ ಶಾಸಕಿ ಸೀಮಾ ಮಸೂತಿ ವಿರುದ್ಧ ಶೃತಿ ಹರಿಹಾಯ್ದರು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿದ ಮೇಲೆ ಯಡಿಯೂರಪ್ಪನಿಂದ ಶಾಸಕರು, ಲೋಕಸಭಾ ಸದಸ್ಯರು ದೂರವಾದರು. ಆದರೆ, ಜನಕಲ್ಯಾಣ ಕೆಲಸ ಮಾಡಿದ ರಾಜ್ಯದ ಆರು ಕೋಟಿ ಜನ ಅವರನ್ನು ಕೈ ಬಿಡುವುದಿಲ್ಲ. ಕೆಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸಿ ಗೆಲ್ಲಿಸುತ್ತೀರಿ ಎಂದು ನಂಬಿದ್ದೇನೆ. ಅಷ್ಟಗಿ ಅವರು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾಗ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ಯಡಿಯೂರಪ್ಪನವರ ಕೈ ಪಡಿಸಲು ಕೆಜೆಪಿಗೆ ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗೋಖಲೆ ಮಾತನಾಡಿ, ರಾಜ್ಯದಲ್ಲಿ 40 ರಿಂದ 60 ಸ್ಥಾನಗಳನ್ನು ಗೆಲ್ಲುವ ಮೂಲಕ ಕೆಜೆಪಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.
ಪಕ್ಷದ ಮುಖಂಡರಾದ ನಿಜನಗೌಡ ಪಾಟೀಲ, ಸಂಗನಗೌಡ ಪಾಟೀಲ, ಯೋಗೀಶಗೌಡ ಪಾಟೀಲ, ಶಿವಾನಂದ ಹೊಳೆಹಡಗಲಿ, ಶೇಕರ ಕವಳಿ, ಪಿ.ಎಸ್. ದಂಡಿನ, ಸಿ.ಎಸ್. ಸಾಧನಿ, ವೀರಯ್ಯ ಚಿಕ್ಕಮಠ, ಶಿವಾನಂದ ಕವಳಿ, ಚಂದ್ರಗೌಡ ಭೂಮನಗೌಡರ, ದೇವೇಂದ್ರಪ್ಪ ಮರಳಪ್ಪನವರ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

