ಧಾರವಾಡ

ರು. 1.33 ಕೋಟಿ ವಸೂಲಿಗೆ ಸರ್ಕಾರ ಆದೇಶ

Published On :

ಹುಬ್ಬಳ್ಳಿ: ನಿಯಮ ಉಲ್ಲಂಘಿಸಿ ಮಹಾದೇವ ಜವಳಿ ಗಿರಣಿಯ 14 ಎಕರೆ ಜಾಗವನ್ನು ಪಾಲಿಕೆಯ ಸಹಾಯಕ ಆಯುಕ್ತ ಆರ್.ಎನ್. ಅಣ್ವೇಕರ ವರ್ಗಾವಣೆ ಮಾಡಿದ್ದ ಆಪಾದನೆ ಸಾಬೀತಾಗಿದೆ. ಸರ್ಕಾರಕ್ಕೆ ಹಾನಿಯಾಗಿರುವ ರು. 1.13 ಕೋಟಿಯನ್ನು ಅಣ್ವೇಕರ ಅವರ ಆಸ್ತಿ ಮುಟ್ಟುಗೋಲು ಹಾಕುವ ಮೂಲಕ  ನಷ್ಟ ಭರಿಸಿಕೊಳ್ಳಲು ನ್ಯಾಯಾಲಯದಲ್ಲಿ ದಾವೆ ಹೂಡಲು ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯದ ಆಯುಕ್ತರಿಗೆ ಆದೇಶಿಸಿದೆ.
ನಗರದಲ್ಲಿ ಆರ್.ಎನ್. ಅಣ್ವೇಕರ ಪ್ರಕರಣ ತೀವ್ರ ಕುತೂಹಲ ಕೆರಳಿಸಿತ್ತು. ಇದೀಗ ಸರ್ಕಾರದ ಅಂತಿಮ ಆದೇಶ ಹೊರಬೀಳುವ ಮೂಲಕ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ.
ಏನಿದು ಪ್ರಕರಣ?: ಆರ್.ಎನ್. ಅಣ್ವೇಕರ ವಲಯ ಕಚೇರಿ 10ರಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮಹಾದೇವ ಜವಳಿ ಗಿರಣಿಯ 14.28 ಎಕರೆ ಜಾಗವನ್ನು ಅಜಿತ ಹಣಮಂತ ದೇಶಪಾಂಡೆ ಎಂಬುವವರಿಗೆ ವರ್ಗಾವಣೆ ಮಾಡಿದ್ದರು. ಖಾತೆ ಬದಲಾವಣೆ ಮಾಡುವ ಪೂರ್ವದಲ್ಲಿ ನಿಯಮಾನುಸಾರ ಆಸ್ತಿ ಕರ ಬಾಕಿ ರು. 1.33 ಕೋಟಿ ಪಾಲಿಕೆಗೆ ಜಮಾ ಮಾಡಿಕೊಳ್ಳಬೇಕಿತ್ತು. ಆದರೆ, ರು. 1.33 ಕೋಟಿ ಬದಲಿಗೆ ರು. 26 ಸಾವಿರ ಅಜಿತ ದೇಶಪಾಂಡೆಯವರಿಂದ ಹಣ ಪಾವತಿಸಿಕೊಂಡು ಅಣ್ವೇಕರ ಜಾಗ ವರ್ಗಾವಣೆ ಮಾಡಿದ್ದರೆಂಬ ಆಪಾದನೆ ಹೊತ್ತಿದ್ದರು.
ಸಾಮಾನ್ಯ ಸಭೆಯ ಗಮನಕ್ಕೆ: ಪಾಲಿಕೆಯ ಕರ ತುಂಬಿಸಿಕೊಳ್ಳದೇ ಅಣ್ವೇಕರ ಜಾಗ ವರ್ಗಾವಣೆ ಮಾಡಿದ್ದ ಸಂಗತಿಯನ್ನು ಪಾಲಿಕೆಯ ಸದಸ್ಯ ಲಕ್ಷ್ಮಣ ಗಂಡಗಾಳೇಕರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಯಲಿಗೆಳೆದಿದ್ದರು. ಅಲ್ಲದೆ, ಜಾಗ ವರ್ಗಾವಣೆ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ನಿಯಮ ಉಲ್ಲಂಘಿಸಿ ಜಾಗ ವರ್ಗಾಯಿಸಿದ್ದು ಕಾನೂನು ಪ್ರಕಾರ ಅಪರಾಧ, ಇದರಿಂದಾಗಿ ಮಹಾನಗರ ಪಾಲಿಕೆಗೆ ಆರ್ಥಿಕ ಹಾನಿಯುಂಟಾಗಿದೆ ಎಂದು ಗಮನ ಸೆಳೆದಿದ್ದರು. ಪಾಲಿಕೆಗೆ ಬರಬೇಕಾಗಿದ್ದ 1.13 ಕೋಟಿ ಆದಾಯ ಕೈ ತಪ್ಪಿಸುವ ಅವ್ಯವಹಾರಕ್ಕೆ ಅಣ್ವೇಕರ ಮುಂದಾಗಿದ್ದಾರೆಂಬ ಅಭಿಪ್ರಾಯ ವ್ಯಕ್ತಪಡಿಸಿ, ಈ ಕುರಿತು ತನಿಖೆ ನಡೆಸುವಂತೆ 2009ರ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಲಾಗಿತ್ತು.  
ತನಿಖೆಗೆ ಆದೇಶ: ಈ ಪ್ರಕರಣದಲ್ಲಿ ಅಣ್ವೇಕರ ಅಪರಾಧವೆಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ 20 ಅಕ್ಟೋಬರ್ 2009ರಲ್ಲಿ ಪ್ರಕರಣದ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಯಿತು. ಆಗಿನ ಪಾಲಿಕೆ ಆಯುಕ್ತ ಎ.ಎ. ಹುಲಗೇರಿ ಹಾಗೂ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲಾಯಿತು. ತನಿಖಾ ಸಮಿತಿಯು 23 ಆಗಸ್ಟ್ 2010ರಂದು ತನಿಖೆಯ ವರದಿ ನೀಡಿ ಅಣ್ವೇಕರ ಆರೋಪವೆಸಗಿರುವುದು ಸಾಬೀತಾಗಿದೆ ಎಂದು ತಿಳಿಸಿತು. ಇದಾದ ಬಳಿಕ ಅಣ್ವೇಕರ ಸಮಿತಿಗೆ ತಾವು ತಾವು ಅಪರಾಧವೆಸಗಿಲ್ಲ ಎಂದು ಹೇಳಿಕೆ ನೀಡಿ ನಿರಪರಾಧಿಯಾಗುವ ಕೆಲ ಅಂಶಗಳನ್ನು ದಾಖಲಿಸಿದರು. ಇದಾದ ಬಳಿಕ ಪುನಃ ಸಮಿತಿ ತನಿಖೆ ಮುಂದುವರಿಸಿ ಆರೋಪ ರುಜುವಾತಾಗಿದೆ ಎಂದು ಸರ್ಕಾರಕ್ಕೆ ಇದೀಗ ವರದಿ ಸಲ್ಲಿಸಿದೆ.
ತನಿಖೆಯ ಅಂತಿಮ ಆದೇಶ: ಸಮಿತಿ ಕೈಗೊಂಡ ವಿಚಾರಣಾ ವರದಿ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಬಿ.ಎನ್. ಭಾಗ್ಯ ಪ್ರಕರಣದ ಕುರಿತಾಗಿ ಜು. 30ರಂದು ಅಂತಿಮ ಆದೇಶ ಹೊರಡಿಸಿದ್ದಾರೆ. ಅಣ್ವೇಕರ ಮೇಲಿನ ಆರೋಪ ರುಜುವಾತಾಗಿದೆ. ಅಪಾದಿತ ಅಣ್ವೇಕರ ಅವರಿಂದ ಹು-ಧಾ ಮಹಾನಗರ ಪಾಲಿಕೆಗೆ ನಷ್ಟ ಉಂಟಾಗಿರುವ ರು. 1.33 ಕೋಟಿಯನ್ನು ಶೇ. 8ರ ಬಡ್ಡಿ ಸಹಿತವಾಗಿ ವಸೂಲಿ ಮಾಡಬೇಕೆಂದು ಪೌರಾಡಳಿತ ನಿರ್ದೇಶನಾಲಯದ ಆಯುಕ್ತರಿಗೆ ಸೂಚಿಸಲಾಗಿದೆ.
ಸೋಜಿಗದ ಸಂಗತಿಯೆಂದರೆ ಸರ್ಕಾರದ ಅಂತಿಮ ಆದೇಶ ಹೊರಬಿದ್ದ ಮಾರನೆ ದಿನ ಅಂದರೆ ಜು. 31ರಂದೇ ಅಣ್ವೇಕರ ನಿವೃತ್ತಿಯಾಗಿದ್ದಾರೆ. ಇದನ್ನೂ ಪರಿಗಣಿಸಿದ ಇಲಾಖೆ, ಅಣ್ವೇಕರ ನಿವೃತ್ತಿ ಹೊಂದುತ್ತಿರುವುದರಿಂದ ಆ ಬಳಿಕ ಲಭ್ಯವಾಗುವ ರಜಾ ವೇತನ ಭತ್ಯೆ, ನಿವೃತ್ತಿ, ಮರಣ ಉಪದಾನ ಮತ್ತಿತರ ಸೌಲಭ್ಯದಿಂದ ದೊರೆಯಬಹುದಾದ ಮೊತ್ತದಿಂದ ಹಾಗೂ ಅವರ ಚರ-ಸ್ಥಿರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಆರ್ಥಿಕ ನಷ್ಟ ಭರಿಸಿಕೊಳ್ಳಲು ನ್ಯಾಯಾಲಯದಲ್ಲಿ ದಾವೆ ಹೂಡಲು ಪೌರಾಡಳಿತ ನಿರ್ದೇಶನಾಲಯದ ಆಯುಕ್ತರಿಗೆ ಆದೇಶಿಸಿದೆ.


ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.